ಹಳದಿ ಮೆಟ್ರೋ |ಆರ್‌.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಬ್ಯಾರಿಕೇಡ್‌ ಅಳವಡಿಕೆ

ಮೆಟ್ರೋ ಹಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವವರು ಹೆಚ್ಚಾದ ಹಿನ್ನೆಲೆಯಲ್ಲಿ ಬ್ಯಾರಿಕೇಡ್‌ ಅಳವಡಿಸಲು ಬೇಡಿಕೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಬಿಎಂಆರ್‌ಸಿಎಲ್‌ ಗುಲಾಬಿ ಮತ್ತು ನೀಲಿ ಮಾರ್ಗದ ನಿಲ್ದಾಣಗಳಿಗೆ ಬ್ಯಾರಿಕೇಡ್‌ ಅಳವಡಿಕೆಗೆ ಮುಂದಾಗಿದೆ.;

Update: 2025-08-21 08:09 GMT

ಆರ್‌.ವಿ. ರೋಡ್‌ ಮೆಟ್ರೋ ನಿಲ್ದಾಣದಲ್ಲಿ ಬ್ಯಾರಿಕೇಡ್‌ ಅಳವಡಿಸಿರುವುದು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಆರ್.ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೊ ಮಾರ್ಗದ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಇದೀಗ ದಟ್ಟಣೆ ನಿಯಂತ್ರಿಸಲು ಹಾಗೂ ಭದ್ರತೆ ದೃಷ್ಟಿಯಿಂದ ಆರ್‌.ವಿ. ರಸ್ತೆ ಇಂಟರ್‌ಚೆಂಜ್‌ ನಿಲ್ದಾಣದಲ್ಲಿ ಬಿಎಂಆರ್‌ಸಿಎಲ್‌ ಬ್ಯಾರಿಕೇಡ್‌ ಅಳವಡಿಸಿದೆ.

ಅತಿ ಹೆಚ್ಚು ಜನ ದಟ್ಟಣೆ ಇರುವ ಮೆಜೆಸ್ಟಿಕ್ ನಿಲ್ದಾಣದಲ್ಲಿ ಭದ್ರತೆಗಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರಸ್ತುತ ಹಳದಿ ಮಾರ್ಗದ ಆರ್.ವಿ.ರಸ್ತೆ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಮಾತ್ರ ಬ್ಯಾರಿಕೇಡ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಮಾರ್ಗದ ಎಲ್ಲಾ ನಿಲ್ದಾಣಗಳಿಗೆ ಪ್ಲಾಟ್‌ ಫಾರ್ಮ್ ಸ್ಟೀನ್ ಡೋರ್ (ಪಿಎಸ್‌ಡಿ) ಅಳವಡಿಸಲು ಉದ್ದೇಶಿಸಲಾಗಿದೆ. ಆದರೆ, ಪಿಎಸ್‌ಡಿ ಅಳವಡಿಸುವುದಕ್ಕೆ ನಿಗಮ ಈವರೆಗೆ ಟೆಂಡರ್ ಕರೆದಿಲ್ಲ. ಬದಲಿಗೆ, ಸಿಎಸ್ಆರ್ ಅನುದಾನದಲ್ಲಿ ಪಿಎಸ್‌ಡಿ ಅಳವಡಿಸಲಿದೆ.

ದಟ್ಟಣೆಯಿಂದ ಪ್ರಯಾಣಿಕರು ಮೆಟ್ರೋ ಹಳಿಗೆ ಬೀಳುವ ಆತಂಕದ ಹಿನ್ನೆಲೆಯಲ್ಲಿ ಪ್ಲಾರ್ಟ್‌ ಫಾಮ್‌ ಸ್ಟೀನ್ ಡೋರ್ ಅಳವಡಿಸಬೇಕೆಂಬ ಒತ್ತಡ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಬಿಎಂಆರ್‌ಸಿಎಲ್‌ ಗುಲಾಬಿ ಮತ್ತು ನೀಲಿ ಮಾರ್ಗದ ನಿಲ್ದಾಣಗಳಿಗೆ ಸ್ಕ್ರೀನ್‌ ಡೋರ್‌ ಅಳವಡಿಕೆಗೆ ಮುಂದಾಗಿದೆ.

ಗುಲಾಬಿ, ನೀಲಿ ಮಾರ್ಗದಲ್ಲಿ ಅಳವಡಿಕೆ

ಗುಲಾಬಿ ಮಾರ್ಗದ (ಕಾಳೇನ ಆಗ್ರಹಾರ-ನಾಗವಾರ) 18 ನಿಲ್ದಾಣಗಳ ಪೈಕಿ 12 ಭೂಗತ ನಿಲ್ದಾಣಗಳಲ್ಲಿ ಪೂರ್ಣ ಪರದೆಯ ಸಿಡಿಎಸ್ ಹಾಗೂ ಉಳಿದ 6 ಎತ್ತರಿಸಿದ ನಿಲ್ದಾಣಗಳಲ್ಲಿ ಅರ್ಧ ಪರದೆಯನ್ನು ಅಳವಡಿಸಲಾಗುತ್ತದೆ. ನೀಲಿ ಮಾರ್ಗದ (ರೇಷ್ಮೆ ಮಂಡಳಿಯಿಂದ - ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) 32 ನಿಲ್ದಾಣಗಳ ಪೈಕಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೂರ್ಣ ಪರದೆಯ ಸ್ಕ್ರೀನ್‌ ಡೋರ್, ಉಳಿದೆಡೆ ಅರ್ಧ ಪರದೆಯ ಸ್ಕ್ರೀನ್‌ ಡೋರ್ ಅಳವಡಿಸಲಾಗುತ್ತದೆ.

ಪಿಎಸ್‌ಡಿ ಅಳವಡಿಕೆ, ರೈಲು ವ್ಯವಸ್ಥೆ ಪರೀಕ್ಷೆ, ಸುರಕ್ಷತಾ ತಪಾಸಣೆ ಮತ್ತು ಪ್ರಮಾಣಿಕರಣದಲ್ಲಿ ಪರಿಣತಿ ಸೇರಿದಂತೆ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ ಸೇವೆಗಳ ಒಪ್ಪಂದಕ್ಕಾಗಿ ಬಿಎಂಆರ್‌ಸಿಎಲ್‌ ಬಿಡ್‌ಗಳನ್ನು ಆಹ್ವಾನಿಸಿತ್ತು. ಹಲವು ಸಂಸ್ಥೆಗಳು ಬಿಡ್‌ನಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ಎಂಟು ಸಂಸ್ಥೆಗಳು ತಾಂತ್ರಿಕ ಬಿಡ್‌ಗೆ ಆಯ್ಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.

Tags:    

Similar News