ಬೆಂಗಳೂರಿನಲ್ಲಿ ಮಾನವ ಹಕ್ಕುಗಳ ಹೋರಾಟಗಾರ ನದೀಮ್ ಖಾನ್ ಬಂಧನಕ್ಕೆ ಯತ್ನ; ದೆಹಲಿ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ
ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿಹಿಡಿಯಲು ಕೆಲಸ ಮಾಡುತ್ತಿರುವ ಎಪಿಸಿಆರ್ ಮತ್ತು ಇತರ ಸಂಘಟನೆಗಳಿಗೆ ಕಿರುಕುಳ ನೀಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು ಎಂದು ಪಿಯುಸಿಎಲ್ ಆಗ್ರಹಿಸಿದೆ.;
ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಎಪಿಸಿಆರ್(ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಸ್ಥೆ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನದೀಮ್ ಖಾನ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಪಿಯುಸಿಎಲ್( ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್) ಖಂಡಿಸಿದೆ.
ನ.30 ರಂದು ದೆಹಲಿಯ ಎಪಿಸಿಆರ್ ಕಚೇರಿಗೆ ಭೇಟಿ ನೀಡಿದ ಪೊಲೀಸರು ನದೀಮ್ ಖಾನ್ ಕುರಿತು ಭದ್ರತಾ ಸಿಬ್ಬಂದಿಯನ್ನು ವಿಚಾರಿಸಿದ್ದು, ಅವರು ಬೆಂಗಳೂರಿನ ಸಹೋದರನ ಮನೆಯಲ್ಲಿರುವ ಮಾಹಿತಿ ಪಡೆದು ಬಂಧಿಸಲು ಯತ್ನಿಸಿದ್ದಾರೆ. ಯಾವುದೇ ನೋಟಿಸ್, ವಾರೆಂಟ್ ನೀಡದೇ ಪೊಲೀಸರು ನದೀಮ್ ಖಾನ್ ಹಾಗೂ ಅವರ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ. ಬಲವಂತವಾಗಿ ಬಂಧಿಸಲು ಪ್ರಯತ್ನಿಸಿದ್ದಾರೆ ಎಂದು ಪಿಯುಸಿಎಲ್ ಕರ್ನಾಟಕ ಆರೋಪಿಸಿದೆ.
ಕಾನೂನು ಬಾಹಿರ ಕಿರುಕುಳ ಹಾಗೂ ಬೆದರಿಕೆ ಹಾಕಿರುವ ದೆಹಲಿ ಪೊಲೀಸರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿಹಿಡಿಯಲು ಕೆಲಸ ಮಾಡುತ್ತಿರುವ ಎಪಿಸಿಆರ್ ಮತ್ತು ಇತರ ಸಂಘಟನೆಗಳಿಗೆ ಕಿರುಕುಳ ನೀಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದೆ.
ಟ್ವಿಟ್ಟರ್(ಎಕ್ಸ್)ನಲ್ಲಿ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿರುವ ಕಾರಣಕ್ಕೆ ನದೀಮ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಆಘಾತ ತಂದಿದೆ. ದೆಹಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಎಸ್ಎಚ್ಒ ಸೇರಿದಂತೆ ನಾಲ್ವರು ಪೊಲೀಸರು ನದೀಮ್ ಖಾನ್ ಸಹೋದರನ ಬೆಂಗಳೂರಿನ ನಿವಾಸಕ್ಕೆ ಬಂದು ಬಂಧಿಸಲು ಪ್ರಯತ್ನಿಸಿದ್ದಾರೆ. ಡಿ.1 ರಂದು ಮಧ್ಯಾಹ್ನ 12:48 ಕ್ಕೆ ದಾಖಲಾದ ಎಫ್ಐಆರ್ ಸಂಖ್ಯೆ 0280/2024 ಸಂಬಂಧ ತನಿಖೆಗಾಗಿ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ. BNSS ಸೆಕ್ಷನ್ 35(3) ಅಡಿ ನೋಟಿಸ್ ನೀಡದೆ, ಬಂಧನ ವಾರೆಂಟ್ ಇಲ್ಲದೆ ನದೀಮ್ ಸಹೋದರನ ಮನೆಗೆ ಪ್ರವೇಶಿಸಿದ್ದು ಅಕ್ಷಮ್ಯ. ಬೆಳಿಗ್ಗೆ 10.45 ರಿಂದ ಸಂಜೆ 5.45 ರವರೆಗೆ ಕಿರುಕುಳ ನೀಡಿದ್ದಲ್ಲದೇ ನದೀಮ್ ಅವರ ಮನೆಯ ಗೋಡೆ ಮೇಲೆ ನೋಟಿಸ್ ಅಂಟಿಸಿದ್ದಾರೆ ಎಂದು ಪಿಯುಸಿಎಲ್ ಆರೋಪಿಸಿದೆ.
BNS ಸೆಕ್ಷನ್ 196, 353(2) ಮತ್ತು 61 ರಡಿ ದಾಖಲಾಗಿರುವ ಆರೋಪಗಳು 3 ವರ್ಷಗಳಿಗಿಂತ ಕಡಿಮೆಯಿರುವ ಶಿಕ್ಷೆಗಳು. ಯಾವುದೇ ಅಪರಾಧಕ್ಕೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಇದ್ದಲ್ಲಿ ಆರೋಪಿಯನ್ನು ಬಂಧಿಸಕೂಡದು ಎಂದು ಸುಪ್ರೀಂ ಕೋರ್ಟ್, ಅರ್ನೇಶ್ ಕುಮಾರ್ ವಿರುದ್ಧ ಬಿಹಾರ ರಾಜ್ಯ ಪ್ರಕರಣದಲ್ಲಿ ತೀರ್ಪು ನೀಡಿದೆ. ಹಾಗಾಗಿ ನದೀಮ್ ಬಂಧನ ಯತ್ನ ಕಾನೂನು ಬಾಹಿರ. ಇದರ ಹೊರತಾಗಿಯೂ ಎಸ್‌ಎಚ್‌ಒ ಮತ್ತು ಇತರ ಪೊಲೀಸ್ ಅಧಿಕಾರಿಗಳು ಅವರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಅಪರಾಧಿಗಳಂತೆ ಬೆದರಿಸಿರುವುದು ಖಂಡನೀಯ ಎಂದಿದೆ.
ನ.29 ರಂದು ರಾತ್ರಿ ಸುಮಾರು 9 ಗಂಟೆಗೆ 20-25 ಅಧಿಕಾರಿಗಳು ದೆಹಲಿಯ ಎಪಿಸಿಆರ್ ಕಚೇರಿಗೆ ನೋಟಿಸ್ ಇಲ್ಲದೇ, ಎಫ್ಐಆರ್ ದಾಖಲಿಸದೇ ಆಗಮಿಸಿ, ನದೀಮ್ ಖಾನ್ ಮತ್ತು ಸಂಸ್ಥೆಯ ಇತರ ಸದಸ್ಯರು ಬಗ್ಗೆ ವಿಚಾರಿಸಿದ್ದಾರೆ. ಈ ಕ್ರಮ ದುರುದ್ದೇಶಪೂರಿತವಾಗಿದೆ.
ಎಪಿಸಿಆರ್ ಸಂಸ್ಥೆ ಮಾಬ್ ಲಿಂಚಿಂಗ್ ಪ್ರಕರಣಗಳು ಮತ್ತು ದ್ವೇಷ ಪ್ರಕರಣಗಳ ವಿರುದ್ಧವಾಗಿ ಹೋರಾಟ ನಡೆಸುತ್ತಿದೆ. ಇದನ್ನೇ ಗುರಿಯಾಗಿಸಿಕೊಂದು ದೆಹಲಿ ಪೊಲೀಸರು ಅವರನ್ನು ಬಂಧಿಸಲು ಯತ್ನಸಿದ್ದಾರೆ.
ನದೀಮ್ ವಿರುದ್ಧ ಎಫ್‌ಐಆರ್ ಏಕೆ?
ಭಾರತದಲ್ಲಿ ಇತ್ತೀಚಿಗೆ ನಡೆದಿರುವ ದ್ವೇಷಾಪರಾಧ ಮತ್ತು ದ್ವೇಷ ಭಾಷಣಗಳ ಕುರಿತು ಹೈದರಾಬಾದ್‌ನಲ್ಲಿ ಮೂರು ದಿನಗಳ ಪ್ರದರ್ಶನ ಆಯೋಜಿಸಿದ್ದರು. ಜಮಾತ್-ಎ-ಇಸ್ಲಾಮಿ ರಾಷ್ಟ್ರೀಯ ಸಂಯೋಜಕರ ನೇತೃತ್ವದಲ್ಲಿ ನ.15 ರಿಂದ ಮೂರು ದಿನಗಳ ಕಾಲ ಪ್ರದರ್ಶನ ಆಯೋಜಿಸಲಾಗಿತ್ತು.
ಈ ಪ್ರದರ್ಶನದಲ್ಲಿ ತೆಹ್ಸೀನ್ ಪೂನವಾಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಇತ್ತೀಚಿಗೆ ಸುಪ್ರೀಂ ಕೋರ್ಟ್ ನೀಡಿದ್ದ ದೊಂಬಿ ಹಿಂಸಾಚಾರಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಹ ಪ್ರದರ್ಶಿಸಲಾಗಿತ್ತು. ಈ ಕಾರಣದಿಂದ ನದೀಮ್ ಖಾನ್ ವಿರುದ್ಧ ಕಿರುಕುಳ, ದಬ್ಬಾಳಿಕೆ ನಡೆಸಲು ಕೇಂದ್ರ ಸರ್ಕಾರ ಪೊಲೀಸರನ್ನು ಬಳಸಿದೆ ಎಂದು ಪಿಯುಸಿಎಲ್ ದೂರಿದೆ.
ದೆಹಲಿ ಪೊಲೀಸರಿಂದ ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ
ಕೇಂದ್ರ ಸರ್ಕಾರ ದೆಹಲಿ ಪೊಲೀಸರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಿದೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದಾಗಲೂ ದೆಹಲಿ ಪೊಲೀಸರು ಕಾನೂನು ಉಲ್ಲಂಘಿಸಿ ಯುವ ಪರಿಸರ ಹೋರಾಟಗಾರರಾದ ದಿಶಾ ಅವರನ್ನು ಬಂಧಿಸಿ ಕರೆದೋಯ್ದಿದ್ದರು. ಆಗ ಕರ್ನಾಟಕ ಸರ್ಕಾರ ಅದನ್ನು ತಡೆದಿರಲಿಲ್ಲ. ಈಗ ನದೀಮ್ ಖಾನ್ ಬಂಧಿಸಲು ಯತ್ನಿಸಿರುವುದು ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸುವಂತಿದೆ. ಈ ಹಿಂದೆ ಸಿಬಿಐ ಗೆ ಅನುಮತಿ ಇಲ್ಲದೆ ರಾಜ್ಯದೊಳಗೆ ತನಿಖೆ ಪ್ರಾರಂಭಿಸಲು ಅನುಮತಿ ಇತ್ತು. ಈಗ ಸಿಬಿಐಗೆ ನೀಡಿದ್ದ ತಾತ್ವಿಕ ಅನುಮತಿಯನ್ನು ಹಿಂಪಡೆಯಲಾಗಿದೆ.
ದೆಹಲಿ ಹೈಕೋರ್ಟ್ Sandeep Kumar v NCT of Delhi ಪ್ರಕರಣದಲ್ಲಿ ದೆಹಲಿ ಪೊಲೀಸರು ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಹೋಗಿ ಯಾರನ್ನಾದರೂ ಬಂಧಿಸಬೇಕೆಂದರೆ ಹಲವು ನಿಯಮಗಳನ್ನು ವಿಧಿಸಿದೆ. ನದೀಮ್ ಪ್ರಕರಣದಲ್ಲಿ ಆ ಯಾವುದೇ ನಿಯಮ ಪಾಲನೆಯಾಗಿಲ್ಲ. ಆ ನಿಯಮಗಳ ಪ್ರಕಾರ ದೆಹಲಿ ಪೊಲೀಸರು ಮೊದಲು ಕರ್ನಾಟಕ ಪೊಲೀಸರನ್ನು ಸಂಪರ್ಕಿಸಬೇಕಿತ್ತು. ಅವರ ಸಹಯೋಗದಿಂದ ಇಲ್ಲಿಗೆ ಬಂದು ಬಂಧಿಸಬೇಕು. ಆದರೆ ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ರಾತ್ರಿ 11ರವರೆಗೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಲಿಲ್ಲ . ಇದು ಕಾನೂನಿನ ಉಲ್ಲಂಘನೆ ಮಾತ್ರವಲ್ಲ , ಇದು ಒಕ್ಕೂಟ ವ್ಯವಸ್ಥೆಯ ವಿರುದ್ಧದ ನಡಯಾಗಿದೆ ಎಂದು ಪಿಯುಸಿಎಲ್ ಆರೋಪೊಇಸಿದೆ.
ಪಿಯುಸಿಎಲ್ ಹಕ್ಕೊತ್ತಾಯಗಳೇನು?
ನದೀಮ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಿಂಪಡೆಯಬೇಕು.ದೆಹಲಿ ಪೊಲೀಸರು ನದೀಮ್ ಖಾನ್ ಮತ್ತು ಅವರ ಕುಟುಂಬಕ್ಕೆ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು. ಈಗ ನೀಡಿರುವ ಆಗಿರುವ ಹಿಂಸೆಗೆ ಪರಿಹಾರ ನೀಡಬೇಕು.
ನದೀಮ್ ಖಾನ್ ಖಾನ್ ಹಾಗೂ ಅವರ ಕುಟುಂಬದ ಮೇಲೆ ಮಾಡಿದ ದಬ್ಬಾಳಿಕೆ, ಬೆದರಿಕೆ ಹಾಗೂ ಮನೆಯೊಳಗೇ ಅತಿಕ್ರಮ ಪ್ರವೇಶ ಮಾಡಿದ ದೆಹಲಿ ಶಾಹಿನ್ ಭಾಗ್ ಪೊಲೀಸರ ವಿರುದ್ಧ FIR ದಾಖಲಿಸಬೇಕು.
ಕರ್ನಾಟಕ ಸರ್ಕಾರ ನದೀಮ್ ಖಾನ್ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಹುತ್ವ ಕರ್ನಾಟಕ, ತಮಟೆ, ಪಿ.ಯು.ಸಿ.ಎಲ್ ಕರ್ನಾಟಕ, ದ್ವೇಷದ ಮಾತಿನ ವಿರುದ್ಧ ಜನಾಂದೋಲನ, ಎದ್ದೇಳು ಕರ್ನಾಟಕ, ಕರ್ನಾಟಕ ಜನಶಕ್ತಿ, ಜಾಗೃತ ಕರ್ನಾಟಕ ಸಂಘಟನೆಗಳು ಒತ್ತಾಯಿಸಿವೆ.