ಗೋಬಿ, ಕಬಾಬ್ ಬಳಿಕ ಗೋಲ್‌ಗಪ್ಪಾ ನಿಷೇಧ? ಯೂರಿಯಾ, ಹಾರ್ಪಿಕ್ ಬಳಕೆ ಆರೋಪ
ಬೆಂಗಳೂರಿನಲ್ಲಿ ರ‍್ಯಾಂಡಮ್ ಆಗಿ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದಾದ್ಯಂತ 200 ಕ್ಕೂ ಹೆಚ್ಚು ಕಡೆ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.;
ರಾಜ್ಯದಲ್ಲಿ ಗೋಬಿ ಮಂಚೂರಿ, ಕಬಾಬ್‌ನಲ್ಲಿ ಕೃತಕ ಬಣ್ಣ, ರಾಸಾಯನಿಕ ಬಳಕೆಗೆ ರಾಜ್ಯ ಸರ್ಕಾರ ಈಗಾಗಲೇ ನಿರ್ಬಂಧ ವಿಧಿಸಿದ್ದು, ಇದೀಗ ಗೋಲ್ ಗಪ್ಪಾದ ಗುಣಮಟ್ಟದ ಬಗ್ಗೆಯೂ ಅನೇಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಗೋಲ್ ಗಪ್ಪಾ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆಹಾರ ಇಲಾಖೆಯಿಂದ ಆಹಾರ ತಪಾಸಣೆ ಮತ್ತು ಪರೀಕ್ಷೆಯ ಕಾರ್ಯಾಚರಣೆ ಮುಂದುವರಿದಿದ್ದು, ಗೋಲ್ ಗಪ್ಪಾವನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ರ‍್ಯಾಂಡಮ್ ಆಗಿ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದಾದ್ಯಂತ 200 ಕ್ಕೂ ಹೆಚ್ಚು ಕಡೆ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಗೋಲ್ ಗಪ್ಪಾಗೆ ಬಳಸುವ ಪೂರಿ ಹೇಗೆ ತಯಾರು ಮಾಡುತ್ತಾರೆ? ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತದೆ? ಇದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಆಹಾರ ಇಲಾಖೆ ಮುಂದಾಗಿದೆ.
ಕಳೆದ ಎರಡು ದಿನಗಳಿಂದ ಗೋಲ ಗಪ್ಪಾ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸಿದೆ. ಸಂಗ್ರಹಿಸಿದ ಮಾದರಿಗಳನ್ನು ಇದೀಗ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಕೆಲವೇ ದಿನಗಳಲ್ಲಿ ವರದಿ ಬರಲಿದೆ.
ಗೋಲ್ ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ ಹಾಗೂ ಹಾರ್ಪಿಕ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ರಾಜ್ಯಗಳಲ್ಲಿ ಇಂತಹ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಕರ್ನಾಟಕ ಆಹಾರ ಹಾಗೂ ಗುಣಮಟ್ಟ ಇಲಾಖೆ ಎಚ್ಚೆತ್ತುಕೊಂಡಿದ್ದು, ಕ್ರಮಕ್ಕೆ ಮುಂದಾಗಿದೆ.