Actor Darshan Case | ಜಾಮೀನು ರದ್ದುಪಡಿಸಲು ಸುಪ್ರೀಂಕೋರ್ಟ್ ನಿರಾಕರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ರಾಜ್ಯ ಹೈಕೋರ್ಟ್ ನೀಡಿರುವ ಜಾಮೀನು ರದ್ದುಪಡಿಸಲು ನಿರಾಕರಿಸಿರುವ ಸುಪ್ರೀಂಕೋರ್ಟ್, ದರ್ಶನ್ ಸೇರಿ ಏಳು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳು ಹೈಕೋರ್ಟ್ ಜಾಮೀನು ಪಡೆದು ಹೊರಬಂದಿದ್ದರು. ಆದರೆ, ಅವರಿಗೆ ಜಾಮೀನು ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಶುಕ್ರವಾರ(ಜ.24) ಬೆಂಗಳೂರು ಪೊಲೀಸರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ, ಜಾಮೀನು ರದ್ದು ಮಾಡಲು ನಿರಾಕರಿಸಿದೆ.
ಬೆಂಗಳೂರು ಪೊಲೀಸ್ ಪರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ ವಕೀಲರಾದ ಸಿದ್ಧಾರ್ಥ್ ಲೂಥ್ರಾ ಹಾಗೂ ಅನಿಲ್ ಸಿ ನಿಶಾನಿ , “ಆರೋಪಿಗಳು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ, ನಟ ದರ್ಶನ್ ಅವರು ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ತಮ್ಮ ಪ್ರಭಾವ ಮತ್ತು ಅಭಿಮಾನಿಗಳ ಬಲ ಬಳಸಿ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದೆ. ಹಾಗಾಗಿ ಆರೋಪಿಗಳಿಗೆ ಜಾಮೀನು ರದ್ದು ಮಾಡಬೇಕು” ಎಂದು ವಾದಿಸಿದರು.
ಆ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿದಂತೆ ಏಳು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್, ವಿಚಾರಣೆಯನ್ನು ಮುಂದೂಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರು ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ, ಬೆಂಗಳೂರಿನ ಆರ್ ಆರ್ ನಗರದ ಪಟ್ಟಣಗೆರೆ ಶೆಡ್ನಲ್ಲಿ ಕೂಡಿಹಾಕಿ ಹೊಡೆದು ಸಾಯಿಸಲಾಗಿದೆ. ಅಲ್ಲದೆ ಮೃತ ದೇಹವನ್ನು ಮೋರಿಯಲ್ಲಿ ಬಿಸಾಕಿ ಸಾಕ್ಷ್ಯನಾಶ ಮಾಡುವ ಪ್ರಯತ್ನವನ್ನೂ ನಡೆಸಿದ್ದು, ಇಡೀ ಕೃತ್ಯದಲ್ಲಿ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಪಾತ್ರ ಪ್ರಮುಖವಾಗಿದೆ ಎಂದು ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಪ್ರಕರಣದಲ್ಲಿ 2024ರ ಜೂನ್ 11ರಂದು ಬೆಂಗಳೂರು ಪೊಲೀಸರು ನಟ ದರ್ಶನ್ನನ್ನು ಬಂಧಿಸಿದ್ದರು. ಬರೋಬ್ಬರಿ ಆರು ತಿಂಗಳ ಕಾಲ ವಿಚಾರಣಾಧೀನ ಕೈದಿಗಳಾಗಿದ್ದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ಕಳೆದ ಡಿಸೆಂಬರ್ 13ರಂದು ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ನೀಡಿತ್ತು.