ಇಸ್ರೇಲ್‌ನ ಇರಾನ್ ಮೇಲಿನ ದಾಳಿ: ಯುದ್ಧ ಸಾಧ್ಯತೆ ಕಡಿಮೆ ಎಂದ ತಜ್ಞರು, ಯಾಕೆ?

ಇತ್ತೀಚೆಗೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ (IAEA) ಇರಾನ್ ಯುರೇನಿಯಂ ಅನ್ನು ಶಸ್ತ್ರಾಸ್ತ್ರ ಮಟ್ಟಕ್ಕೆ ಕೊಂಡೊಯ್ದಿದೆ ವರದಿ ನೀಡಿರುವುದು ಈ ದಾಳಿಗೆ ಪ್ರಮುಖ ಕಾರಣವಾಗಿದೆ.;

Update: 2025-06-14 01:30 GMT


Full View

ಇಸ್ರೇಲ್ ಇತ್ತೀಚೆಗೆ ಇರಾನ್‌ನ ಅನೇಕ ಸೈನ್ಯ ಮತ್ತು ಪರಮಾಣು ಗುರಿಗಳ ಮೇಲೆ ಆಘಾತಕಾರಿ ದಾಳಿಗಳನ್ನು ನಡೆಸಿದೆ. ಈ ದಾಳಿಗಳು ಪಶ್ಚಿಮ ಏಷಿಯಾದಲ್ಲಿ ವಿಶಾಲ ಸಂಘರ್ಷದ ಆತಂಕವನ್ನು ಮತ್ತೆ ಹುಟ್ಟುಹಾಕಿದ್ದರೂ, ತಜ್ಞರ ಪ್ರಕಾರ, ಇದು ದೊಡ್ಡ ಪ್ರಮಾಣದ ಯುದ್ಧಕ್ಕೆ ಕಾರಣವಾಗುವ ಸಾಧ್ಯತೆ ಕಡಿಮೆಯಿದೆ.

ಪಶ್ಚಿಮ ಏಷಿಯಾದಲ್ಲಿ ಇರಾನ್‌ನ ಪರಮಾಣು ಯೋಜನೆಯ ಅಭಿವೃದ್ಧಿಯು ಅತಿ ಗಮನಾರ್ಹ ಸಮಸ್ಯೆಯಾಗಿದೆ. 1979ರ ಇರಾನ್ ಕ್ರಾಂತಿಯ ನಂತರ ಇಸ್ರೇಲ್ ಮತ್ತು ಇರಾನ್ ವಿರೋಧಿಗಳಾಗಿಯೇ ಮುಂದುವರಿದಿವೆ. ಇಸ್ರೇಲ್ ಇರಾನ್ ಅನ್ನು ತನ್ನ ಅಸ್ತಿತ್ವಕ್ಕೆ ಧಕ್ಕೆಯಾಗುವ ಎದುರಾಳಿ ಎಂದು ಪರಿಗಣಿಸಿದೆ. ಕಳೆದ 25 ವರ್ಷಗಳಲ್ಲಿ ಇರಾನ್ ತನ್ನ ಪರಮಾಣು ಯೋಜನೆಯನ್ನು ತೀವ್ರವಾಗಿ ವಿಸ್ತರಿಸಿದೆ. ಪಶ್ಚಿಮ ದೇಶಗಳು ಇದನ್ನು ಸೇನಾ ಉದ್ದೇಶಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿದರೆ, ಇರಾನ್ ಇದನ್ನು ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಎಂದು ಸದಾ ಸಮಜಾಯಿಷಿ ಕೊಡುತ್ತಿವೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ (IAEA) ಇರಾನ್ ಯುರೇನಿಯಂ ಅನ್ನು ಶಸ್ತ್ರಾಸ್ತ್ರ ಮಟ್ಟಕ್ಕೆ ಕೊಂಡೊಯ್ದಿದೆ ವರದಿ ನೀಡಿರುವುದು ಈ ದಾಳಿಗೆ ಪ್ರಮುಖ ಕಾರಣವಾಗಿದೆ. ಇಸ್ರೇಲ್‌ನ ಪ್ರಕಾರ, ಇರಾನ್ ಈ ಪ್ರದೇಶದಲ್ಲಿ ಗಂಭೀರ ಸವಾಲು ಎದುರಿಸಬಲ್ಲ ಏಕೈಕ ದೇಶವಾಗಿದ್ದು, 1979ರಿಂದ ಇರಾನ್ ಇಸ್ರೇಲ್‌ನ ಅಸ್ತಿತ್ವವನ್ನು ವಿರೋಧಿಸುತ್ತಿದೆ.

ಪೂರ್ಣ ಯುದ್ಧಕ್ಕೆ ಕಾರಣವಾಗುತ್ತದೆಯೇ?

ವಿಶಾಲ ಸಂಘರ್ಷದ ಆತಂಕ ಈಗ ದೊಡ್ಡ ಸಮಸ್ಯೆಯಾಗಿದ್ದರೂ, ಇದು ಇಸ್ರೇಲ್‌ನ ಮೊದಲ ದಾಳಿ ಅಲ್ಲ. ಹಿಂದೆ ಇಸ್ರೇಲ್, ಸದ್ದಾಮ್ ಹುಸೇನ್‌ನ ಇರಾಕ್ ಮತ್ತು 2007ರಲ್ಲಿ ಸಿರಿಯಾದ ಪರಮಾಣು ಸೌಲಭ್ಯಗಳ ಮೇಲೂ ದಾಳಿ ನಡೆಸಿದೆ. ಅದೇ ರೀತಿ ಯುಎಸ್‌ನ 2018ರಲ್ಲಿ ಪರಮಾಣು ಒಪ್ಪಂದದಿಂದ ಹಿಂದೆ ಸರಿದ ಪ್ರಸಂಗವೂ ನಡೆದಿದೆ. ಇಸ್ರೇಲ್. ಅಮರಿಕ ಮತ್ತು ಇರಾನ್‌ ಒಪ್ಪಂದವನ್ನು ನೇರವಾಗಿ ವಿರೋಧಿಸಿ, ನೇರ ಸೇನಾ ಕ್ರಮಗಳನ್ನು ಆಯ್ಕೆ ಮಾಡಿಕೊಂಡಿತ್ತು.

ಇಸ್ರೇಲ್ ಈಗ ಆ ಪ್ರದೇಶದಲ್ಲಿ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯನ್ನು ತಡೆಯುವ ನಿಲುವಿನಲ್ಲಿದ್ದು, ಇರಾನ್‌ನ ಸೇನಾ ಸಾಮರ್ಥ್ಯ ಮತ್ತು ದೂರದ ಹಿನ್ನೆಲೆಯಲ್ಲಿ ಇದೀಗ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಾಧ್ಯವಿಲ್ಲ. ಆದರೆ, ಇರಾನ್ ಪ್ರತೀಕಾರಕ್ಕೆ ಮುಂದಾಗಬಹುದು, ಇದು ಮಿಸೈಲ್ ದಾಳಿ ಅಥವಾ ಸೀಮಿತ ಪ್ರತೀಕಾರದ ರೂಪದಲ್ಲಿ ಇರಬಹುದು. ಇಸ್ರೇಲ್. ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಯ ಮೇಲೆ ದಾಳಿ ನಡೆಸಿದಾಗ ಇರಾನ್ ಪ್ರತೀಕಾರ ಕೊಟ್ಟಿತ್ತು. ಈ ಎಲ್ಲ ಉದಾಹರಣೆಗಳು ಇದು ಪೂರ್ಣ ಯುದ್ಧಕ್ಕೆ ತಿರುಗುವು ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಅಮೆರಿಕ ಇಸ್ರೇಲ್‌ನ ದಾಳಿಯಲ್ಲಿ ಭಾಗಿಯಾಗಿದೆಯೇ?

ಅಮರಿಕ ಇಸ್ರೇಲ್‌ನ ಅತಿ ದೊಡ್ಡ ಬೆಂಬಲ ದೇಶ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಈ ದಾಳಿಯಲ್ಲಿ ತನ್ನ ಪಾತ್ರ ಇಲ್ಲ ಎಂದು ಅಮೆರಿಕ ಹೇಳಿದೆ. ಇದು ಇರಾನ್ ಮತ್ತು ಅಮೆರಿಕ ನಡುವಣ ಪರಮಾಣು ಮಾತುಕತೆಗಳ ಸಮಯದಲ್ಲಿ ನಡೆದ ದಾಳಿಯಾಗಿದೆ. ಈಗಾಗಲೇ ಐದು ಸುತ್ತಿನ ಮಾತುಕತೆಗಳು ನಡೆದಿದ್ದು. ಆರನೇ ಸುತ್ತು ಒಮಾನ್‌ನಲ್ಲಿ ಶೀಘ್ರದಲ್ಲಿ ನಡೆಯಲಿದೆ. ಡೊನಾಲ್ಡ್ ಟ್ರಂಪ್ ಶಾಂತಿಯುತ ಮಾರ್ಗದ ಮೂಲಕ ಸಮಸ್ಯೆ ಪರಿಹರಿಸುವ ಸಾಧ್ಯತೆಯನ್ನು ಒತ್ತಿ ಹೇಳಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಟ್ರಂಪ್ ನಡುವೆ ಈ ವಿಚಾರದಲ್ಲಿ ಒತ್ತಡವಿದ್ದು, ಯುಎಸ್ ಈ ದಾಳಿಯಲ್ಲಿ ಸಹಾಯ ಒದಗಿಸಿಲ್ಲ ಎಂದು ಹೇಳಿಕೊಂಡರೂ, ಆ ದೇಶದ ಲಾಜಿಸ್ಟಿಕ್ ಬೆಂಬಲವಿಲ್ಲದೆ ಇದು ಸಾಧ್ಯವಿಲ್ಲ ಎಂದು ಇರಾನ್​ ಆರೋಪಿಸಿದೆ. ಇರಾನ್ ಯುಎಸ್ ಸೇನಾ ತಾಣಗಳ ಮೇಲೆ ಪ್ರತೀಕಾರ ನಡೆಸಬಹುದೆಂಬ ಪ್ರಶ್ನೆಯೂ ಎದ್ದಿದೆ.

ಇರಾನ್‌ನ ಪರಮಾಣು ಯೋಜನೆಯ ಸ್ಥಿತಿ ಏನು?

ಇರಾನ್ 25 ವರ್ಷಗಳ ಹಿಂದೆ ತನ್ನ ಪರಮಾಣು ಯೋಜನೆಯನ್ನು ವಿದ್ಯುತ್ ಉತ್ಪಾದನೆಗಾಗಿ ಪ್ರಾರಂಭಿಸಿತ್ತು. ಇದಕ್ಕೆ ಯುರೇನಿಯಂ 4%ಗಿಂತ ಕಡಿಮೆಯಲ್ಲಿ ಇರುತ್ತದೆ. ಆದರೆ, IAEA ಇರಾನ್ ಯುರೇನಿಯಂ ಅನ್ನು 60% ತನಕ ಸಂಗ್ರಹಿಸಿದೆ ಎಂದು ವರದಿ ಮಾಡಿದ್ದು, ಇದು ಶಸ್ತ್ರಾಸ್ತ್ರ ಮಟ್ಟಕ್ಕೆ (90%+) ಹತ್ತಿರವಾಗಿದೆ. 2015ರಲ್ಲಿ ಇರಾನ್ ಮತ್ತು ಜಾಗತಿಕ ಶಕ್ತಿಗಳ ನಡುವೆ ಒಪ್ಪಂದ ಆರಂಭವಾಗಿತ್ತು. ಆದರೆ 2018ರಲ್ಲಿ ಟ್ರಂಪ್ ಇದನ್ನು ರದ್ದುಗೊಳಿಸಿದ್ದರು. ಇದರಿಂದ ಇರಾನ್ ಯುರೇನಿಯಂ ಸಂಗ್ರಹ ಮತ್ತೆ ಹೆಚ್ಚಳ ಮಾಡಿದೆ.

ಇರಾನ್ ತನ್ನ ಪರಮಾಣು ಯೋಜನೆಯನ್ನು ಮುಂದುವರಿಸುತ್ತದೆಯೇ?

ಇತ್ತೀಚಿನ ದಾಳಿಗಳು ಇರಾನ್‌ಗೆ ಹಿನ್ನಡೆಯಾಗಿದ್ದರೂ, ಇರಾನ್ ಈ ಪ್ರದೇಶದಲ್ಲಿ ಪ್ರಮುಖ ಶಕ್ತಿಯಾಗಿದೆ. ಹೀಗಾಗಿ ತನ್ನ ಪರಮಾಣು ಗುರಿಗಳನ್ನು ತ್ಯಜಿಸುವುದಿಲ್ಲ. ಇರಾನ್‌ನ ಭೂಗತ ಪರಮಾಣು ಸೌಲಭ್ಯಗಳು ಪಶ್ಚಿಮ ದೇಶಗಳ ಕಣ್ಗಾವಲಿಗೆ ನಿಲುಕದ್ದು. ಈ ದಾಳಿಗಳು ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ, ಆದರೆ ಎಚ್ಚರಿಕೆಯಿಂದ ಮುಂದುವರಿಯಲಿದೆ.

Tags:    

Similar News