Donald Trump: ನಾನು ಅರೆದ ಕಹಿ ಮದ್ದು ಕೆಲಸ ಮಾಡುತ್ತಿದೆ; ಸುಂಕ ಹೆಚ್ಛಳವನ್ನು ಸಮರ್ಥಿಸಿಕೊಂಡ ಟ್ರಂಪ್​!

ಟ್ರಂಪ್‌ ಸುಂಕ ಘೋಷಣೆಯ ನಂತರ, ಜಾಗತಿಕ ಷೇರು ಮಾರುಕಟ್ಟೆಗಳು ಭಾರೀ ಕುಸಿತ ಕಂಡಿವೆ. ಅಮೆರಿಕದ ಡೌ ಜೋನ್ಸ್ ಸೂಚ್ಯಂಕವು ಒಂದೇ ದಿನದಲ್ಲಿ 1,700 ಪಾಯಿಂಟ್‌ಗಳಷ್ಟು ಕುಸಿದಿದ್ದು, ಇದು 2020 ರಿಂದ ಇಲ್ಲಿಯವರೆಗಿನ ಅತಿದೊಡ್ಡ ಪತನ.;

Update: 2025-04-07 04:40 GMT
ಜಾಗತಿಕವಾಗಿ ಹಾಕಲಾದ ತೆರಿಗೆಯನ್ನು ಸಮರ್ಥನೆ ಮಾಡಿಕೊಂಡ ಡೊನಾಲ್ಡ್​ ಟ್ರಂಪ್​

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾಗತಿಕ ವ್ಯಾಪಾರದ ಮೇಲೆ ವಿಧಿಸಿರುವ ಸಮಗ್ರ ಸುಂಕಗಳು ವಿಶ್ವ ಆರ್ಥಿಕತೆಯಲ್ಲಿ ಭಾರೀ ತಲ್ಲಣ ಉಂಟುಮಾಡಿವೆ. ಆದರೆ ಟ್ರಂಪ್​ ಮಾತ್ರ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಅದು ತಾವು ಅಮೆರಿಕದ ಸಮಸ್ಯೆಗೆ ಅರೆದ ''ಕಹಿ ಮದ್ದು' ಎಂದು ಹೇಳಿಕೊಂಡಿದ್ದಾರೆ.

ಅಮೆರಿಕದ ವ್ಯಾಪಾರ ಕೊರತೆ ಕಡಿಮೆ ಮಾಡುವ ಉದ್ದೇಶದಿಂದ ಈ ನೀತಿಯನ್ನು ಜಾರಿಗೆ ತಂದಿದ್ದೇನೆ ಎಂದು ಟ್ರಂಪ್​ ಹೇಳಿದ್ದಾರೆ. ಆದರೆ, ಈ ನಡೆಯಿಂದ ಜಾಗತಿಕ ಮಾರುಕಟ್ಟೆಗಳು ಕುಸಿಯುತ್ತಿದ್ದು, ರಾಜಕೀಯ ವಿರೋಧ ಮತ್ತು ಆರ್ಥಿಕ ಹಿಂಜರಿಕೆಯ ಮುನ್ಸೂಚನೆ ಲಭಿಸಿದೆ.  

ಕಳೆದ ವಾರ ಜಾರಿಗೆ ಬಂದ ಈ ಸುಂಕಗಳು, ಮೆಕ್ಸಿಕೊ ಮತ್ತು ಕೆನಡಾದಿಂದ ಬರುವ ಸರಕುಗಳನ್ನು ಹೊರತುಪಡಿಸಿ, ಅಮೆರಿಕಕ್ಕೆ ಆಮದಾಗುವ ಎಲ್ಲಾ ಸರಕುಗಳ ಮೇಲೆ ಕನಿಷ್ಠ ಶೇಕಡಾ 10 ದರದಲ್ಲಿ ತೆರಿಗೆ ಹಾಕಲಾಗಿದೆ. ಕೆಲವು ದೇಶಗಳಿಗೆ ಇದು ಶೇಕಡಾ 50 ವರೆಗೂ ಏರಿಕೆಯಾಗಿದೆ. ಟ್ರಂಪ್ ಈ ಸುಂಕಗಳನ್ನು ''ಅತಿ ಸುಂದರ' ಎಂದು ಬಣ್ಣಿಸಿದ್ದಾರೆ. ಆದರೆ, ಈ ನೀತಿಯ ವಿರುದ್ಧ ಟೀಕೆಗಳು ತೀವ್ರವಾಗಿದ್ದು, ಇದು ದೇಶದೊಳಗೆ ಬೆಲೆ ಏರಿಕೆ ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಚೀನಾದಿಂದ ಪ್ರತಿಕಾರ

ಚೀನಾ ಸೇರಿದಂತೆ ಹಲವು ದೇಶಗಳು ಈಗಾಗಲೇ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಂಡಿವೆ. ಚೀನಾ ಶೇಕಡಾ 34 ಸುಂಕವನ್ನು ಅಮೆರಿಕದ ಸರಕುಗಳ ಮೇಲೆ ವಿಧಿಸಿದ್ದು, ಇದು ಏಪ್ರಿಲ್ 10 ರಿಂದ ಜಾರಿಗೆ ಬರಲಿದೆ. ಈ ಪರಸ್ಪರ ಸುಂಕಗಳು ವ್ಯಾಪಾರ ಯುದ್ಧವನ್ನು ತೀವ್ರಗೊಳಿಸುತ್ತಿವೆ ಎಂದು ಆರ್ಥಿಕ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕರಡಿ ಕುಣಿತ  

ಟ್ರಂಪ್‌ ಸುಂಕ ಘೋಷಣೆಯ ನಂತರ, ಜಾಗತಿಕ ಷೇರು ಮಾರುಕಟ್ಟೆಗಳು ಭಾರೀ ಕುಸಿತ ಕಂಡಿವೆ. ಅಮೆರಿಕದ ಡೌ ಜೋನ್ಸ್ ಸೂಚ್ಯಂಕವು ಒಂದೇ ದಿನದಲ್ಲಿ 1,700 ಪಾಯಿಂಟ್‌ಗಳಷ್ಟು ಕುಸಿದಿದ್ದು, ಇದು 2020 ರಿಂದ ಇಲ್ಲಿಯವರೆಗಿನ ಅತಿದೊಡ್ಡ ಪತನ. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಸುಮಾರು 3.8 ಟ್ರಿಲಿಯನ್ ಪೌಂಡ್‌ಗಳಷ್ಟು (5 ಟ್ರಿಲಿಯನ್ ಡಾಲರ್) ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆಪಲ್‌ನಂತಹ ದೊಡ್ಡ ಕಂಪನಿಗಳ ಷೇರುಗಳು ಶೇಕಡಾ 9% ಕುಸಿದಿವೆ. ಏಕೆಂದರೆ ಚೀನಾದಿಂದ ಆಮದು ಮಾಡಿಕೊಳ್ಳುವ ಐಫೋನ್ ಘಟಕಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗಿದೆ.

ರಾಜಕೀಯ ಮತ್ತು ಸಾಮಾಜಿಕ ಪರಿಣಾಮ 

ಟ್ರಂಪ್‌ರ ಈ ನೀತಿಯು ಅಮೆರಿಕದ ಆಡಳಿತದೊಳಗೆ ಭಿನ್ನಾಭಿಪ್ರಾಯ ಉಂಟುಮಾಡಿದೆ. ಉದ್ಯಮಿ ಎಲಾನ್ ಮಸ್ಕ್ ಅವರು ಟ್ರಂಪ್‌ರ ಸಲಹೆಗಾರ ಪೀಟರ್ ನವಾರೊ. ಈ ವ್ಯವಸ್ಥೆಯನ್ನು ಟೀಕಿಸಿದ್ದು ಅಮೆರಿಕ-ಯುರೋಪ್ ನಡುವೆ "ಶೂನ್ಯ ಸುಂಕ ವಲಯ" ಸೃಷ್ಟಿಸುವಂತೆ ಒತ್ತಾಯಿಸಿದ್ದಾರೆ.

ವಿಶ್ವದಾದ್ಯಂತ ದೇಶಗಳು ಈ ಸುಂಕಗಳಿಗೆ ಪ್ರತಿಕ್ರಿಯಿಸುತ್ತಿವೆ. ಬ್ರಿಟನ್​ನಲ್ಲಿ, ಸುಂಕಗಳು ಯೂರೋಪಿಯನ್ ಒಕ್ಕೂಟದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಭಾರತದ ಇದನ್ನು "ಮಿಶ್ರ ಫಲ" ಎಂದಿದೆ.

ಟ್ರಂಪ್‌ ಕೊಟ್ಟ ಸಂದೇಶವೇನು?

ಅಮೆರಿಕವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, "ಗಟ್ಟಿಯಾಗಿ ನಿಲ್ಲಿ, ಇದು ಸುಲಭವಲ್ಲ" ಎಂದು ಹೇಳಿದ್ದಾರೆ. ಈ "ಆರ್ಥಿಕ ಕ್ರಾಂತಿ" ಅಮೆರಿಕನ್ನರಿಗೆ ಐತಿಹಾಸಿಕ ಫಲಿತಾಂಶಗಳನ್ನು ತರುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.  

Tags:    

Similar News