ಪಾಕಿಸ್ತಾನ ಪ್ರಧಾನಿ ಭೇಟಿ ಮಾಡಲಿರುವ ದೊಡ್ಡಣ್ಣ ಟ್ರಂಪ್
ಟ್ರಂಪ್ ಇಂದು ಬೆಳಿಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎರಡನೇ ಬಾರಿಗೆ ಅಧ್ಯಕ್ಷರಾದ ನಂತರ ವಿಶ್ವ ನಾಯಕರನ್ನು ಉದ್ದೇಶಿಸಿ ಟ್ರಂಪ್ ಮಾಡುವ ಮೊದಲ ಭಾಷಣ ಇದಾಗಿದೆ.
ಶಹಬಾಜ್ ಷರೀಫ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ನ್ಯೂಯಾರ್ಕ್ ತಲುಪಿದ್ದು, ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಲಿದ್ದಾರೆ.
ಟ್ರಂಪ್ ಇಂದು ಬೆಳಿಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎರಡನೇ ಬಾರಿಗೆ ಅಧ್ಯಕ್ಷರಾದ ನಂತರ ವಿಶ್ವ ನಾಯಕರನ್ನು ಉದ್ದೇಶಿಸಿ ಟ್ರಂಪ್ ಮಾಡುವ ಮೊದಲ ಭಾಷಣ ಇದಾಗಿದೆ.
ಸೋಮವಾರ ಆಯೊಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಮಾತನಾಡಿ, ಟ್ರಂಪ್ ವಿಶ್ವ ನಾಯಕರನ್ನು ಉದ್ದೇಶಸಿ ಮಾತನಾಡುವ ನಾಳಿನ ತಮ್ಮ ಭಾಷಣದಲ್ಲಿ ಪ್ರಪಂಚದಾದ್ಯಂತ ಇರುವ ಅಮೆರಿಕದ ಶಕ್ತಿ, ಭಾರತ & ಪಾಕ್ ಯುದ್ಧ ಸೇರಿದಂತೆ ಏಳು ಜಾಗತಿಕ ಯುದ್ಧಗಳನ್ನು ನಿಲ್ಲಿಸಿದ್ದು, ಎಂಟು ತಿಂಗಳಲ್ಲಿ ಅವರು ಮಾಡಿದ ಆಡಳಿತಾತ್ಮಕ ಸಾಧನೆಗಳು, ವಿಶ್ವಸಂಸ್ಥೆಯ ಜಾಗತಿಕ ಸಂಸ್ಥೆಗಳು ವಿಶ್ವದ ವ್ಯವಸ್ಥೆಯನ್ನು ಕೆಡಿಸಿರುವುದು ಹಾಗೂ ಪ್ರಪಂಚದ ಬಗ್ಗೆ ತಮ್ಮಲ್ಲಿರುವ ನೇರ ಮತ್ತು ರಚನಾತ್ಮಕ ದೃಷ್ಟಿಕೋನಗಳನ್ನು ಟ್ರಂಪ್ ಸ್ಪಷ್ಟವಾಗಿ ಬಿಚ್ಚಿಡಲಿದ್ದಾರೆ. ಬಳಿಕ, ಟ್ರಂಪ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸೇರಿದಂತೆ ಉಕ್ರೇನ್, ಅರ್ಜೆಂಟಿನಾ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಧ್ಯಕ್ಷರು ಮಂಗಳವಾರ ಸಂಜೆ ಕತಾರ್, ಸೌದಿ ಅರೇಬಿಯಾ, ಇಂಡೋನೇಷ್ಯಾ, ಟರ್ಕಿ, ಪಾಕಿಸ್ತಾನ, ಈಜಿಪ್ಟ್, ಯುಎಇ ಮತ್ತು ಜೋರ್ಡಾನ್ ಜೊತೆ ವಿವಿಧ ಹಂತದಲ್ಲಿ ಬಹುಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಲೀವಿಟ್ ಹೇಳಿದ್ದರು.
ಸೆ.22ರಿಂದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 80ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗಕ್ಕೆ ಪಾಕಿಸ್ತಾನಿ ನಿಯೋಗವನ್ನು ಪ್ರಧಾನಿ ಷರೀಫ್ ಮುನ್ನಡೆಸಲಿದ್ದಾರೆ. ಪ್ರಧಾನಿಗೆ ವಿದೇಶಾಂಗ ಸಚಿವರೂ ಆಗಿರುವ ಉಪ ಪ್ರಧಾನಿ ಮೊಹಮ್ಮದ್ ಇಶಾಕ್ ದಾರ್, ಇತರೆ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸಾಥ್ ನೀಡಲಿದ್ದಾರೆ ಎಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ಶಾಶ್ವತ ರಾಯಭಾರ ಕಚೇರಿ ತಿಳಿಸಿದೆ.
ಭಯೋತ್ಪಾದಕರು ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆಸಿದ ಗುಂಡಿನ ದಾಳಿಗೆ 26 ಭಾರತೀಯರು ಬಲಿಯಾಗಿದ್ದರು. ಆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಂಟಾಯಿತು. ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಕಳೆದ ಮೇ 7ರಂದು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಭದ್ರಕೋಟೆ ಬಹಾವಲ್ಪುರ್ ಸೇರಿದಂತೆ ಭಯೋತ್ಪಾದಕರ ಇತರೆ ನೆಲೆಗಳ ಮೇಲೆ ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆಯ ಭಾಗವಾಗಿ ಭೀಕರವಾದ ಕ್ಷಿಪಣಿ ದಾಳಿ ನಡೆಸಿ ತಕ್ಕ ಪ್ರತ್ಯುತ್ತರ ನೀಡಿತ್ತು.
ಮೇ 10ರಂದು ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದ ಟ್ರಂಪ್, ನಾನೇ ಮಧ್ಯಸ್ಥಿಕೆ ವಹಿಸಿ ರಾತ್ರಿ ಇಡೀ ಸುದೀರ್ಘ ಮಾತುಕತೆ ನಡೆಸಿದ್ದರಿಂದ ಭಾರತ ಮತ್ತು ಪಾಕಿಸ್ತಾನ "ಪೂರ್ಣ ಪ್ರಮಾಣದ ಮತ್ತು ತಕ್ಷಣದ" ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂದು ಘೋಷಿಸಿದ್ದರು. ಅದಾದ ಬಳಿಕವೂ ಟ್ರಂಪ್ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಇತ್ಯರ್ಥಪಡಿಸಲು ಸಹಾಯ ಮಾಡಿದೆನೆಂದು 40ಕ್ಕೂ ಹೆಚ್ಚು ಬಾರಿ ಪುನರ್ ಉಚ್ಛರಿಸುತ್ತಿದ್ದರು. ಈ ನಡುವೆ ಯುದ್ಧ ನಿಲ್ಲಿಸುವ ಬಗ್ಗೆ ಉಭಯ ದೇಶಗಳ ಡಿಜಿಎಂಒಗಳೇ ನೇರ ಮಾತುಕತೆ ನಡೆಸಿದ ನಂತರ ಯುದ್ಧ ಸ್ಥಗಿತ ಒಪ್ಪಂದಕ್ಕೆ ಬರಲಾಯಿತೆಂದು ಭಾರತ ಸರ್ಕಾರವು ಸ್ಪಷ್ಟನೆ ಕೂಡ ನೀಡಿತು.