American Dollar : ಡಾಲರ್‌ಗೆ ಪರ್ಯಾಯ ಹುಡುಕಿದರೆ ಜೋಕೆ ; ಭಾರತ ಸದಸ್ಯತ್ವ ಹೊಂದಿರುವ ʼ‌ಬ್ರಿಕ್ಸ್‌ʼ ಒಕ್ಕೂಟಕ್ಕೆ ಟ್ರಂಪ್‌ ಎಚ್ಚರಿಕೆ

ಬ್ರಿಕ್ಸ್ ದೇಶಗಳು ಡಾಲರ್ನಿಂದ ದೂರ ಸರಿಯಲು ಪ್ರಯತ್ನಿಸುತ್ತಿವೆ ಎಂಬ ಕಲ್ಪನೆಯನ್ನು ಕೊನೆಗೊಳಿಸುವೆ " ಎಂದು ಟ್ರಂಪ್ ತಮ್ಮ ಒಡೆತನದ ವೇದಿಕೆಯಾದ ಟ್ರುಥ್‌ ಸೋಶಿಯಲ್‌ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.;

Update: 2024-12-01 08:16 GMT
ಡೊನಾಲ್ಡ್‌ ಟ್ರಂಪ್‌.

ಅಮೆರಿಕದ ಡಾಲರ್ ಅನ್ನು ಅಂತಾರಾಷ್ಟ್ರೀಯ ಕರೆನ್ಸಿಯಿಂದ ಬದಲಾಯಿಸುವ ಬ್ರಿಕ್‌ ಸದಸ್ಯರ ಯೋಜನೆಗೆ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡ್ಡಗಾಲು ಇಟ್ಟಿದ್ದಾರೆ. ಇಂಥ ಯೋಜನೆಗೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತ, ರಷ್ಯಾ, ಚೀನಾ ಮತ್ತು ಬ್ರೆಜಿಲ್ ಒಳಗೊಂಡ ಒಂಬತ್ತು ಸದಸ್ಯರ ಗುಂಪಿಗೆ ಸಂದೇಶ ರವಾನಿಸಿದ್ದಾರೆ.

2009ರಲ್ಲಿ ರೂಪುಗೊಂಡ ʼಬ್ರಿಕ್ಸ್ʼ, ಅಮೆರಿಕ ಸದಸ್ಯತ್ವ ಹೊಂದಿರದ ಏಕೈಕ ಪ್ರಮುಖ ಅಂತರರಾಷ್ಟ್ರೀಯ ಶೃಂಗವಾಗಿದೆ. ದಕ್ಷಿಣ ಆಫ್ರಿಕಾ, ಇರಾನ್, ಈಜಿಪ್ಟ್, ಇಥಿಯೋಪಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಇದರ ಇತರ ಸದಸ್ಯ ರಾಷ್ಟ್ರಗಳು. ಇವರಲ್ಲಿ ರಷ್ಯಾ ಮತ್ತು ಚೀನಾ, ಯುಎಸ್ ಡಾಲರ್‌ಗೆ ಪರ್ಯಾಯವನ್ನು ಹುಡುಕುತ್ತಿವೆ. ತಮ್ಮದೇ ಆದ ಬ್ರಿಕ್ಸ್ ಕರೆನ್ಸಿಯನ್ನು ರಚಿಸುತ್ತಿವೆ. ಭಾರತವು ಇಲ್ಲಿಯವರೆಗೆ ಈ ಕ್ರಮದ ಭಾಗವಾಗಿಲ್ಲ. ಆದಾಗ್ಯೂ ಸದಸ್ಯರ ಯೋಜನೆ ವಿರುದ್ಧ ಟ್ರಂಪ್ ಶನಿವಾರ ಎಚ್ಚರಿಕೆ ರವಾನಿಸಿದ್ದಾರೆ.

ಬ್ರಿಕ್ಸ್ ದೇಶಗಳು ಡಾಲರ್ನಿಂದ ದೂರ ಸರಿಯಲು ಪ್ರಯತ್ನಿಸುತ್ತಿವೆ ಎಂಬ ಕಲ್ಪನೆಯನ್ನು ಕೊನೆಗೊಳಿಸುವೆ " ಎಂದು ಟ್ರಂಪ್ ತಮ್ಮ ಒಡೆತನದ ವೇದಿಕೆಯಾದ ಟ್ರುಥ್‌ ಸೋಶಿಯಲ್‌ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

"ಈ ದೇಶಗಳು ಹೊಸ ಬ್ರಿಕ್ಸ್ ಕರೆನ್ಸಿಯನ್ನು ರಚಿಸುವುದಿಲ್ಲ. ಪ್ರಬಲ ಯುಎಸ್ ಡಾಲರ್ ಬದಲಿಗೆ ಬೇರೆ ಯಾವುದೇ ಕರೆನ್ಸಿಯನ್ನು ಬೆಂಬಲಿಸುವುದಿಲ್ಲ. ಹಾಗೆನಾದರೂ ಮಾಡಿದರೆ ಅವರು 100% ಸುಂಕ ಎದುರಿಸಬೇಕಾಗುತ್ತದೆ. ಯುಎಸ್ ಆರ್ಥಿಕತೆಗೆ ಅವರಿಗೆ ಪ್ರವೇಶ ಇರುವುದಿಲ್ಲ" ಎಂದು ಟ್ರಂಪ್ ಎಚ್ಚರಿಸಿದ್ದಾರೆ.

"ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಯುಎಸ್ ಡಾಲರ್ ಅನ್ನು ಬ್ರಿಕ್ಸ್ ಬದಲಾಯಿಸುವ ಯಾವುದೇ ಅವಕಾಶವಿಲ್ಲ. ಪ್ರಯತ್ನಿಸುವ ಯಾವುದೇ ದೇಶವು ಅಮೆರಿಕಕ್ಕೆ ವಿದಾಯ ಹೇಳಬೇಕು" ಎಂದು ಅವರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ 2023ರ ಶೃಂಗಸಭೆಯಲ್ಲಿ, ಬ್ರಿಕ್ಸ್ ದೇಶಗಳು ಹೊಸ ಸಾಮಾನ್ಯ ಕರೆನ್ಸಿಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಬದ್ಧ ಎಂದು ಹೇಳಲಾಗಿತ್ತು. ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಿ ಸಿಲ್ವಾ ಈ ಪ್ರಸ್ತಾಪ ಮುಂದಿಟ್ಟಿದ್ದರು.

ಬ್ರಿಕ್ಸ್ ನ ಪ್ರಮುಖ ಆಧಾರಸ್ತಂಭವಾಗಿರುವ ಭಾರತವು ಡಾಲರ್ ರದ್ದತಿಗೆ ಸಮ್ಮತಿಸಿಲ್ಲ. "ನಾವು ಎಂದಿಗೂ ಡಾಲರ್‌ಗೆ ಪರ್ಯಾಯ ಎಂಬ ನಿಟ್ಟಿನಲ್ಲಿ ಯೋಚಿಸಿಲ್ಲ. ಅದು ನಮ್ಮ ಆರ್ಥಿಕ ನೀತಿ ಅಥವಾ ನಮ್ಮ ರಾಜಕೀಯ ಅಥವಾ ಕಾರ್ಯತಂತ್ರದ ನೀತಿಯ ಭಾಗವಲ್ಲ,ʼʼ ಎಂದು ಈ ಹಿಂದೆ ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದರು. 

Tags:    

Similar News