Kashmir Issue : ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ ಡೊನಾಲ್ಡ್ ಟ್ರಂಪ್
ಭಾರತ ಮತ್ತು ಪಾಕಿಸ್ತಾನದ ಬಲಿಷ್ಠ ಮತ್ತು ದೃಢವಾದ ನಾಯಕತ್ವವು, ಯುದ್ಧದಿಂದಾಗಿ ಸಾವಿರಾರು ಜನರ ಸಾವು-ನಾಶವನ್ನು ತಡೆಗಟ್ಟಲು ಬೇಕಾದ ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯವನ್ನು ತೋರಿದ್ದಕ್ಕಾಗಿ ನನಗೆ ಹೆಮ್ಮೆ ಇದೆ ಎಂದು ಟ್ರಂಪ್ ಬರದುಕೊಂಡಿದ್ದಾರೆ.;
ಭಾರತ ಹಾಗೂ ಪಾಕಿಸ್ತಾನದ "ಬಲಿಷ್ಠ ಮತ್ತು ದೃಢ" ನಾಯಕತ್ವವನ್ನು ಶ್ಲಾಘಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಾಶ್ಮೀರ ವಿಷಯದಲ್ಲಿ ಎರಡೂ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸಲು ಮತ್ತೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಎರಡೂ ದೇಶಗಳ ನಡುವೆ ಗಡಿಯಾಚೆಗಿನ ಕದನ ವಿರಾಮ ಒಪ್ಪಂದ ಘೋಷಣೆಯಾದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಇದೇ ವೇಳೆ ಅವರು ಎರಡೂ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸುವ ಭರವಸೆ ನೀಡಿದ್ದಾರೆ.
ತಮ್ಮದೇ ಸೋಶಿಯಜ 'ಟ್ರುಥ್' ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಾಯಕತ್ವವನ್ನು ಹಾಡಿಹೊಗಳಿದ್ದಾರೆ. "ಭಾರತ ಮತ್ತು ಪಾಕಿಸ್ತಾನದ ಬಲಿಷ್ಠ ಮತ್ತು ದೃಢವಾದ ನಾಯಕತ್ವವು, ಯುದ್ಧದಿಂದಾಗಿ ಸಾವಿರಾರು ಜನರ ಸಾವು-ನಾಶವನ್ನು ತಡೆಗಟ್ಟಲು ಬೇಕಾದ ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯವನ್ನು ತೋರಿದ್ದಕ್ಕಾಗಿ ನನಗೆ ಹೆಮ್ಮೆ ಇದೆ" ಎಂದು ಬರದುಕೊಂಡಿದ್ದಾರೆ.
"ಲಕ್ಷಾಂತರ ನಿರಪರಾಧಿ ಜನರ ಪ್ರಾಣ ಉಳಿಯಲಿದೆ! ನಿಮ್ಮ ಈ ಧೀರ ಕ್ರಮದಿಂದ ನಿಮ್ಮ ವಿಶಿಷ್ಟ ಕೀರ್ತಿ ಹೆಚ್ಚಾಗಿದೆ," ಎಂದು ಅವರು ಹೇಳಿದ್ದಾರೆ.
ವ್ಯಾಪಾರದ ಭರವಸೆ
ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಕದನ ವಿರಾಮಕ್ಕೆ ಅಮೆರಿಕದ ಪಾತ್ರವನ್ನು ಉಲ್ಲೇಖಿಸಿ, ಭವಿಷ್ಯದಲ್ಲಿ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. "ಈ ಐತಿಹಾಸಿಕ ಮತ್ತು ವೀರೋಚಿತ ನಿರ್ಧಾರಕ್ಕೆ ತಲುಪಲು ಅಮೆರಿಕ ನಿಮಗೆ ಸಹಾಯ ಮಾಡಿದ್ದಕ್ಕೆ ನನಗೆ ಹೆಮ್ಮೆ ಇದೆ. ಈ ವಿಷಯದ ಬಗ್ಗೆ ಚರ್ಚೆಯೇ ಆಗಿಲ್ಲವಾದರೂ, ಈ ಎರಡೂ ಶ್ರೇಷ್ಠ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಜೊತೆಗೆ, 'ಸಾವಿರ ವರ್ಷಗಳ' ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾನು ನಿಮ್ಮಿಬ್ಬರೊಂದಿಗೂ ಕೆಲಸ ಮಾಡಲಿದ್ದೇನೆ. ಭಾರತ ಮತ್ತು ಪಾಕಿಸ್ತಾನದ ನಾಯಕತ್ವವನ್ನು ದೇವರು ಆಶೀರ್ವದಿಸಲಿ!!!" ಎಂದು ಟ್ರಂಪ್ ಬರೆದಿದ್ದಾರೆ.
ಕದನ ವಿರಾಮ ಘೋಷಣೆಯ ಹಿನ್ನೆಲೆ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸಶಸ್ತ್ರ ಪಡೆಗಳು ಕಳೆದ ವಾರ 'ಆಪರೇಷನ್ ಸಿಂದೂರ್' ಆರಂಭಿಸಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಒಂಬತ್ತು ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿದ್ದವು. ಇದರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿತ್ತು. ಶನಿವಾರ, ಈ ಉದ್ವಿಗ್ನತೆಯ ನಡುವೆಯೇ ಕದನ ವಿರಾಮ ಘೋಷಣೆ ಹೊರಬಿದ್ದಿತು.
ಅಘೋಷಿತ ಪ್ರಕಟಣೆ
ಶನಿವಾರ ಮಧ್ಯಾಹ್ನ ಆಶ್ಚರ್ಯಕರ ಬೆಳವಣಿಗೆಯಾಗಿ, ಭಾರತೀಯ ಅಧಿಕಾರಿಗಳು ಅಧಿಕೃತವಾಗಿ ಕದನ ವಿರಾಮವನ್ನು ಘೋಷಿಸುವ ಕೆಲವೇ ಕ್ಷಣಗಳ ಮೊದಲು, ಟ್ರಂಪ್ ಅವರು ತಾವು ಮಧ್ಯಸ್ಥಿಕೆ ವಹಿಸಿರುವುದಾಗಿ ಮತ್ತು ಎರಡೂ ದೇಶಗಳು ತಕ್ಷಣದ ಕದನ ವಿರಾಮ"ಕ್ಕೆ ಒಪ್ಪಿಕೊಂಡಿರುವುದಾಗಿ ವಿಶ್ವಕ್ಕೆ ಘೋಷಿಸಿದರು. ಈ ಬೆಳವಣಿಗೆ ಅನಿರೀಕ್ಷಿತವಾಗಿತ್ತು, ಏಕೆಂದರೆ ಕೆಲವೇ ಗಂಟೆಗಳ ಹಿಂದೆ ಎರಡೂ ರಾಷ್ಟ್ರಗಳು ಭಾರೀ ಗುಂಡಿನ ದಾಳಿಯಲ್ಲಿ ತೊಡಗಿದ್ದವು ಎಂದು ವರದಿಯಾಗಿತ್ತು.
ಟ್ರಂಪ್ ಅವರ ಪ್ರಕಟಣೆಯ ನಂತರ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಅಧಿಕೃತವಾಗಿ ಕದನ ವಿರಾಮವನ್ನು ದೃಢಪಡಿಸಿದರು. ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕರು (DGMOs) ಶನಿವಾರ ಸಂಜೆ 5 ಗಂಟೆಯಿಂದ ಭೂಮಿ, ವಾಯು ಮತ್ತು ಸಮುದ್ರದಲ್ಲಿ ಎಲ್ಲ ಗುಂಡಿನ ದಾಳಿ ಮತ್ತು ಸೇನಾ ಕಾರ್ಯಾಚರಣೆ ನಿಲ್ಲಿಸಲು ಒಪ್ಪಿಕೊಂಡಿದ್ದಾರೆ ಎಂದು ಅವರು ಘೋಷಿಸಿದರು. ಭಾರತದ ಕಡೆಯಿಂದ ಯಾವುದೇ ಬಾಹ್ಯ ಮಧ್ಯಸ್ಥಿಕೆಯ ಬಗ್ಗೆ ಉಲ್ಲೇಖ ಮಾಡಲಿಲ್ಲ, ಒಪ್ಪಂದವು ನೇರ DGMOಗಳ ಚರ್ಚೆಯಿಂದಾಗಿದೆ ಎಂದು ನಂತರ ವರದಿಗಳು ಸ್ಪಷ್ಟಪಡಿಸಿದವು .