ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಶಾಂತಿ ಒಪ್ಪಂದಕ್ಕೆ ಭಂಗ; ಮತ್ತೆ ಆತಂಕ
ಈ ಘಟನೆಯಿಂದಾಗಿ ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ಶಾಂತಿ ಒಪ್ಪಂದಕ್ಕೆ ಹಾನಿಯಾಗಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಹೆಲ್ಬೊಲ್ಲಾ ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಲು ಮುಂದಾಗಿದೆ.;
ಲೆಬನಾನ್ ಗಡಿಯಿಂದ ತನ್ನ ಮೇಲೆ ನಡೆದ ರಾಕೆಟ್ ದಾಳಿಗೆ ಪ್ರತಿಯಾಗಿ, ಇಸ್ರೇಲ್ ಶನಿವಾರ ಲೆಬನಾನ್‌ನ ಹಲವೆಡೆ ವೈಮಾನಿಕ ದಾಳಿಗಳನ್ನು ನಡೆಸಿದೆ. ಈ ಮಾರಕ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ತಾತ್ಕಾಲಿಕ ಶಾಂತಿ ಒಪ್ಪಂದದ ನಂತರ ನಡೆದ ಭೀಕರ ದಾಳಿ ಇದಾಗಿದೆ.
ಈ ಘಟನೆಯಿಂದಾಗಿ ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ಶಾಂತಿ ಒಪ್ಪಂದಕ್ಕೆ ಹಾನಿಯಾಗಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಹೆಲ್ಬೊಲ್ಲಾ ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ದಾಳಿಗೆ ಯಾರು ಹೊಣೆ ಎಂಬುದು ಸ್ಪಷ್ಟವಾಗಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯಿಂದ ಹೆಜ್ಬೊಲ್ಲಾ ಮೇಲೆ ಪ್ರತಿದಾಳಿಗೆ ಸೇನೆಗೆ ಆದೇಶ ನೀಡಲಾಗಿದೆ.
ಲೆಬನಾನ್ ಮತ್ತು ಇಸ್ರೇಲ್ ಗಡಿ ಪ್ರದೇಶದ ಮೆತುಲಾ ಪಟ್ಟಣದ ಕಡೆ ಆರು ರಾಕೆಟ್‌ಗಳು ಹೊತ್ತಿ ಬಿದ್ದಿದ್ದು, ಅವರಲ್ಲಿ ಮೂರು ಇಸ್ರೇಲ್ ಗಡಿಯೊಳಗೆ ಪ್ರವೇಶಿಸಿದ್ದನ್ನು ಸೇನೆ ಖಚಿತಪಡಿಸಿದೆ. ಆದರೆ, ದಾಳಿ ನಡೆಸಿದ ಸಂಘಟನೆಯು ಯಾವುದು ಎಂಬುದನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದೂ ಇಸ್ರೇಲ್ ಸೇನೆ ಹೇಳಿದೆ. ಆದಾಗ್ಯೂ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಕಮಾಂಡ್ ಸೆಂಟರ್‌ಗಳು ಹಾಗೂ ರಾಕೆಟ್ ಉಡಾವಣೆ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ಮುಂದುವರಿಸಿದೆ.
ದಾಳಿಯಲ್ಲಿ ಮಹಿಳೆ-ಮಕ್ಕಳ ಸಾವು
ಇಸ್ರೇಲ್ ನಡೆಸಿದ ದಾಳಿಯಲ್ಲಿ ದಕ್ಷಿಣ ಲೆಬನಾನ್‌ನ ಟೌಲಿನ್ ಗ್ರಾಮದಲ್ಲಿ ಐವರು ಮೃತಪಟ್ಟಿದ್ದು,ಅದರಲ್ಲಿ ಮಗೂ ಸೇರಿದೆ. 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದಾಗಿಯೂ ವರದಿಯಾಗಿದೆ. ಶನಿವಾರ ರಾತ್ರಿ ತೈರ್ ನಗರದ ಗ್ಯಾರೇಜ್ ಮೇಲೆಯೂ ದಾಳಿ ನಡೆಸಲಾಗಿದ್ದು, ಒಬ್ಬ ಮೃತಪಟ್ಟು ಏಳು ಮಂದಿ ಗಾಯಗೊಂಡಿದ್ದಾರೆ. ನವೆಂಬರ್ 27ರ ಶಾಂತಿ ಒಪ್ಪಂದ ಬಳಿಕ ತೈರ್ ನಗರದ ಮೇಲೆ ನಡೆಯುವ ಮೊದಲ ಇಸ್ರೇಲ್ ದಾಳಿ ಇದಾಗಿದೆ. ಸಿರಿಯಾ ಗಡಿಯ ಹೌಶ್ ಅಲ್ ಸೈಯದ್ ಅಲಿ ಗ್ರಾಮದ ಮೇಲೆ ನಡೆದ ಇನ್ನೊಂದು ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ (NNA) ವರದಿ ಮಾಡಿದೆ.
ಹೆಜ್ಬೊಲ್ಲಾ ಸ್ಪಷ್ಟನೆ
ಈ ದಾಳಿಗೆ ತನ್ನ ಕಡೆಯಿಂದ ಆಗಿ್ಲ್ಲ ಎಂದು ಹೆಜ್ಬೊಲ್ಲಾ ಸಂಘಟನೆ ಹೇಳಿದ್ದು, ಶಾಂತಿ ಒಪ್ಪಂದದ ಪಾಲನೆಗೆ ಬದ್ಧ ಎಂದು ಖಾತರಿ ನೀಡಿದೆ. ಇದೇ ವೇಳೆ ಲೆಬನಾನ್ ಪ್ರಧಾನಿ ನವಾಫ್ ಸಲಾಂ, ತುರ್ತು ಕ್ರಮ ಕೈಗೊಳ್ಳಲು ಸೇನೆಗೆ ಸೂಚನೆ ನೀಡಿದ್ದು, “ದೇಶ ಮತ್ತೆ ಯುದ್ಧದ ಕಡೆಗೆ ಹೋಗಬಾರದು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಗಾಜಾ ಮೇಲೆ ಇಸ್ರೇಲ್ ದಾಳಿಗಳು ನಿರಂತರ
ಹಮಾಸ್ ಸಂಘಟನೆಯು ಇನ್ನೂ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ 59 ಮಂದಿ ಇಸ್ರೇಲ್ ಪ್ರಜೆಗಳನ್ನು ಬಿಡುಗಡೆ ಮಾಡದವರೆಗೆ ಗಾಜಾದ ಮೇಲೆ ದಾಳಿ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಶುಕ್ರವಾರ ರಾತ್ರಿ ಗಾಜಾ ನಗರದಲ್ಲಿನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ.
ಇಸ್ರೇಲ್ ಸೇನೆ ಇದೀಗ ಗಾಜಾ ನಗರದ ಪಶ್ಚಿಮ ಭಾಗದ ಮೂರು ಪ್ರದೇಶಗಳಿಗೆ ಹೊಸ ದಾಳಿ ನಡೆಸಲು ತಯಾರಿ ನಡೆಸುತ್ತಿದೆ. ಸ್ಥಳೀಯರಿಗೆ ಸ್ಥಳ ಖಾಲಿ ಮಾಡುವಂತೆ ಸಾಮಾಜಿಕ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಲಾಗಿದೆ. ಇಸ್ರೇಲ್ ಯುದ್ಧ ಪುನರಾರಂಭಿಸಿದ ನಂತರದಿಂದ ಇಂದಿನವರೆಗೆ 600ಕ್ಕೂ ಹೆಚ್ಚು ಪ್ಯಾಲೆಸ್ತೀನೀಯರು ಮೃತಪಟ್ಟಿದ್ದಾರೆ.
ಗಾಜಾದ 20 ಲಕ್ಷ ನಿವಾಸಿಗಳಿಗೆ ಆಹಾರ, ಇಂಧನ ಮತ್ತು ಮಾನವೀಯ ಸಹಾಯ ತಡೆಯುವ ಮೂಲಕ ಹಮಾಸ್ ಮೇಲೆ ಒತ್ತಡ ಹಾಕಿದೆ.