ಸಿಖ್ ಪ್ರತ್ಯೇಕತಾವಾದಿ ಕೊಲೆಗೆ R&AW ಸಂಚು | ಅಮೆರಿಕದ ನ್ಯಾಯಾಂಗ ಇಲಾಖೆ ಗಂಭೀರ ಆರೋಪ

ಸಿಖ್ ಪ್ರತ್ಯೇಕತಾವಾದಿಯನ್ನು ಹತ್ಯೆ ಮಾಡುವ ಸಂಚಿನಲ್ಲಿ ಅಮೆರಿಕದಲ್ಲಿರುವ ಭಾರತೀಯ ಗೂಢಾಚಾರಿ ಇಲಾಖೆಯ ಅಧಿಕಾರಿಯೊಬ್ಬರು ಭಾಗಿಯಾಗಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಗುರುವಾರ ನ್ಯೂಯಾರ್ಕ್‌ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿಆರೋಪಿಸಿದ್ದಾರೆ.

Update: 2024-10-18 11:51 GMT
US ನ್ಯಾಯಾಂಗ ಇಲಾಖೆ

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಅಮೆರಿಕದಲ್ಲಿರುವ ಭಾರತೀಯ ಗೂಡಾಚಾರ ಇಲಾಖೆ(RAW) ಅಧಿಕಾರಿಯೊಬ್ಬರು ಸಿಖ್ ಪ್ರತ್ಯೇಕತಾವಾದಿ ಹತ್ಯೆಗೆ ಸಂಚು ನಡೆಸಿದ್ದರು ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್‌ ಆರೋಪಿಸಿದ್ದಾರೆ. ಗುರುವಾರ ನ್ಯೂಯಾರ್ಕ್‌ನಲ್ಲಿರುವ  ನ್ಯಾಯಾಂಗ ಇಲಾಖೆಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಈ ಗಂಭೀರ ಆರೋಪ ಮಾಡಿದ್ದು, ಕೆನಡಾದ ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಭಾರತದ ಗುಪ್ತಚರ ಸಂಸ್ಥೆಯಾದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ (RAW) ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಉದ್ಯೋಗಿಯಾಗಿದ್ದ ವಿಕಾಸ್ ಯಾದವ್ (39) ವಿರುದ್ಧ ನ್ಯಾಯಾಂಗ ಇಲಾಖೆ ಕ್ರಿಮಿನಲ್ ಆರೋಪ ಹೊರಿಸಿದೆ. ಬಾಡಿಗೆ ಕ್ರಿಮಿನಲ್‌ಗಳ ನೆರವಿನಿಂದ ಕೊಲೆಯತ್ನ ಹಾಗೂ ಅಕ್ರಮ ಹಣ ವರ್ಗಾವಣೆಗೆ ಸಂಚು ರೂಪಿಸಿದ ಆರೋಪ ಸೇರಿದಂತೆ ಮೂರು ಗುರುತರ ಆರೋಪಗಳನ್ನು ಹೊರಿಸಲಾಗಿದೆ. ಸಂಚಿನಲ್ಲಿ ಭಾಗಿಯಾಗಿದ್ದ ಸಹ ಆರೋಪಿ ನಿಖಿಲ್ ಗುಪ್ತಾ ಎಂಬುವರನ್ನು ಕಳೆದ ವರ್ಷ ಜೆಕೊಸ್ಲೊವಾಕಿಯಾದಲ್ಲಿ ಬಂಧಿಸಲಾಗಿತ್ತು. ಹಸ್ತಾಂತರದ ನಂತರ ಅವರನ್ನು ಅಮೆರಿಕದ ಜೈಲಿನಲ್ಲಿ ಇರಿಸಲಾಗಿದೆ. ಕಳೆದ ಬೇಸಿಗೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಗೆ ಭೇಟಿ ನೀಡಿದ್ದ ವೇಳೆ ಈ ಸಂಚು ನಡೆದಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕನ್ನರನ್ನು ಗುರಿಯಾಗಿಸಿ, ಅಪಾಯಕ್ಕೆ ಸಿಲುಕಿಸುವ ಪ್ರಯತ್ನಗಳನ್ನು ನ್ಯಾಯಾಂಗ ಇಲಾಖೆ ಸಹಿಸುವುದಿಲ್ಲ. ಪ್ರತಿ ಅಮೆರಿಕದ ಪ್ರಜೆಗೆ ಅರ್ಹವಾಗಿರುವ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನ ಇಂದಿನ ಆರೋಪಗಳಿಂದ ತಿಳಿಯುತ್ತದೆ ಎಂದು ಅಮೆರಿಕದ ಅಟಾರ್ನಿ ಜನರಲ್ ಮೆರಿಕ್ ಬಿ. ಗಾರ್ಲ್ಯಾಂಡ್ ಹೇಳಿದರು.

ಆರೋಪಿಯು ಭಾರತೀಯ ಸರ್ಕಾರಿ ಉದ್ಯೋಗಿ. ಕ್ರಿಮಿನಲ್ ಅಪರಾಧಿಯೊಂದಿಗೆ ಸೇರಿ ಸಂಚು ರೂಪಿಸಿದ್ದಾರೆ. ಸಂವಿಧಾನದ ತನ್ನ ಮೊದಲ ತಿದ್ದುಪಡಿ ಹಕ್ಕನ್ನು ಚಲಾಯಿಸುವ ಮೂಲಕ ಅಮೆರಿಕಾದ ನೆಲದಲ್ಲಿ ಒಬ್ಬ ಅಮೆರಿಕ ಪ್ರಜೆಯನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಹೇಳಿದ್ದಾರೆ. 

ಅಮೆರಿಕದ ಫೆಡರಲ್‌ ಪ್ರಾಸಿಕ್ಯೂಟರ್‌ಗಳ ಆರೋಪ ತಳ್ಳಿಹಾಕಿರುವ ಭಾರತ, ಅಮೆರಿಕದ ನೆಲದಲ್ಲಿ ಯಾವುದೇ ಹತ್ಯೆ ಸಂಚಿನಲ್ಲಿ ಭಾರತ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅಮೆರಿಕದ ಆರೋಪ ಕುರಿತು ತನಿಖೆ ನಡೆಸಲು ಭಾರತ ತನಿಖಾ ಸಮಿತಿ ರಚಿಸಿದೆ. 

ಎಫ್‌ಬಿಐ, ಅಮೆರಿಕದ ನ್ಯಾಯಾಂಗ ಇಲಾಖೆ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಅಂತರ ಸಂಸ್ಥೆಯ ತಂಡದೊಂದಿಗೆ ತನಿಖಾ ಸಮಿತಿ ಸಭೆ ನಡೆಸಲಿದೆ. ಭಾರತದ ತನಿಖಾ ಸಮಿತಿ ಅಮೆರಿಕಕ್ಕೆ ಬಂದ 48 ಗಂಟೆಗಳೊಳಗೆ ಆರೋಪಗಳ ಕುರಿತು ನ್ಯಾಯಾಲಯಕ್ಕೆ ಎರಡನೇ ಚಾರ್ಜ್‌ಶೀಟ್ ಸಲ್ಲಿಸಬೇಕಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗಾರರಿಗೆ ತಿಳಿಸಿದರು.

ರಾಜತಾಂತ್ರಿಕ ಸಂಬಂಧ ಸುಧಾರಿಸುವುದು ನಿರಂತರ ಪ್ರಕ್ರಿಯೆ. ಅಮೆರಿಕವು ಭಾರತದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ಅಮೆರಿಕ ಹಾಘೂ ಭಾರತ ಪರಸ್ಪರರು ತನಿಖೆಯಲ್ಲಿ ಮಧ್ಯಸ್ಥಿಕೆ ವಹಿಸುವುದನ್ನು ನಾವು ನಿರೀಕ್ಷಿಸಿದ್ದೇವೆ ಎಂದು ಮಿಲ್ಲರ್ ಹೇಳಿದರು.

ನ್ಯಾಯಾಂಗ ಇಲಾಖೆಯ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾದ ವ್ಯಕ್ತಿಯು ಇನ್ನು ಮುಂದೆ ಭಾರತ ಸರ್ಕಾರದ ಉದ್ಯೋಗಿ ಇರುವುದಿಲ್ಲ ಎಂದು ತಿಳಿಸಲಾಗಿದೆ. ಎಫ್‌ಬಿಐ ಸಲ್ಲಿಸಿರುವ  18 ಪುಟಗಳ ದೋಷಾರೋಪಣ ಪಟ್ಟಿಯು ಮಿಲಿಟರಿ ಉಡುಪಿನಲ್ಲಿರುವ ಯಾದವ್ ಅವರ ಚಿತ್ರಗಳನ್ನು ಒಳಗೊಂಡಿದೆ. ನ್ಯೂಯಾರ್ಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಡಾಲರ್ ವಿನಿಮಯ ಮಾಡಿಕೊಳ್ಳುತ್ತಿರುವ ಚಿತ್ರವೂ ಇದೆ. ಸಿಖ್ ಪ್ರತ್ಯೇಕತಾವಾದಿ ನಾಯಕನನ್ನು ಹತ್ಯೆ ಮಾಡಲು ಗುಪ್ತಾ ಮತ್ತು ಯಾದವ್ ಪರವಾಗಿ ವ್ಯಕ್ತಿಯೊಬ್ಬ ಕೊಲೆಗಾರನಿಗೆ ಹಣ ಸಂದಾಯ ಮಾಡಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ದೂರಿದ್ದರು.  ಅಮೆರಿಕ ಪ್ರಜೆಯಾಗಿರುವ ಸಿಖ್ ಪ್ರತ್ಯೇಕತಾವಾದಿಯ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ.

ಕಳೆದ ಎರಡು ದಿನಗಳ ಹಿಂದಷ್ಟೇ ಕೆನಡಾ ಪ್ರಧಾನಿ ಜಸ್ಟೀನ್‌ ಟ್ರುಡೊ ಅವರು ಭಾರತದ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದರು, ಇದಾದ ಬಳಿಕ ಕೆನಡಾ ಹಾಗೂ ಭಾರತದ ನಡುವೆ ರಾಜತಾಂತ್ರಿಕ ಸಂಬಂಧ ಹಳಸಿತ್ತು. ಎರಡೂ ಕಡೆಯ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಲಾಗಿತ್ತು.

Tags:    

Similar News