ಪುಟಿನ್-ಟ್ರಂಪ್ ಭೇಟಿ ಫಲಿತಾಂಶವಿಲ್ಲದೆ ಅಂತ್ಯ, ಯುದ್ಧ ಅಂತ್ಯದ ಬಗ್ಗೆ ಸುಳಿವಿಲ್ಲ

ಟ್ರಂಪ್ ಮತ್ತು ಪುಟಿನ್ ಜಂಟಿ ಬೇಸ್ ಎಲ್ಮೆಂಡೋರ್ಫ್-ರಿಚರ್ಡ್ಸ್​​ನಲ್ಲಿ ಕೆಂಪುಹಾಸಿನ ಮೇಲೆ ದೀರ್ಘಕಾಲ ಹಸ್ತಲಾಘವ ಮಾಡಿದರು. ಅವರ ಮಾತುಕತೆಯ ವೇಳೆ, ಪುಟಿನ್ ನಗುತ್ತಾ ಆಕಾಶದತ್ತ ಬೆರಳು ತೋರಿಸಿದರು.;

Update: 2025-08-16 05:11 GMT

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಸ್ತಲಾಘನ ಮಾಡಿದರು.

ಬಹು ನಿರೀಕ್ಷಿತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಭೇಟಿಯು ಯಾವುದೇ ನಿರ್ದಿಷ್ಟ ಒಪ್ಪಂದವಿಲ್ಲದೆ, ಅನಿರೀಕ್ಷಿತವಾಗಿ ಅಂತ್ಯಗೊಂಡಿದೆ. ಶೀತಲ ಸಮರದ ಇತಿಹಾಸ ಹೊಂದಿರುವ ಅಲಸ್ಕಾದ ಆಂಕರೇಜ್​​ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯಲ್ಲಿ ನಡೆಯಿತು. ಈ ಮೂಲಕ ಪುಟಿನ್ ಅವರು ಒಂದು ದಶಕದ ನಂತರ ಅಮೆರಿಕದ ನೆಲಕ್ಕೆ ಕಾಲಿಟ್ಟರು, ವಿಶ್ವ ಶಾಂತಿ ಮತ್ತು ವ್ಯಾಪಾರದ ದೃಷ್ಟಿಯಿಂದ ಮಹತ್ವ ಪಡೆದಿದ್ದ ಈ ಭೇಟಿಯಲ್ಲಿ, ಟ್ರಂಪ್ ಅವರು ಪುಟಿನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರೂ, ಕೊನೆಯಲ್ಲಿ ಸಭೆ ಯಾವುದೇ ಸ್ಪಷ್ಟ ಫಲಿತಾಂಶ ನೀಡಲಿಲ್ಲ.

ಟ್ರಂಪ್ ಮತ್ತು ಪುಟಿನ್ ಜಂಟಿ ಬೇಸ್ ಎಲ್ಮೆಂಡೋರ್ಫ್-ರಿಚರ್ಡ್ಸ್​​ನಲ್ಲಿ ಕೆಂಪುಹಾಸಿನ ಮೇಲೆ ದೀರ್ಘಕಾಲ ಹಸ್ತಲಾಘವ ಮಾಡಿದರು. ಅವರ ಮಾತುಕತೆಯ ವೇಳೆ, ಪುಟಿನ್ ನಗುತ್ತಾ ಆಕಾಶದತ್ತ ಬೆರಳು ತೋರಿಸಿದರು. ಅಲ್ಲಿ ಶೀತಲ ಸಮರದ ಸಮಯದಲ್ಲಿ ರಷ್ಯಾವನ್ನು ಎದುರಿಸಲು ವಿನ್ಯಾಸಗೊಳಿಸಲಾದ ಬಿ-2 ಮತ್ತು ಎಫ್-22 ಯುದ್ಧವಿಮಾನಗಳು ಹಾರುತ್ತಿದ್ದವು.

ಭೇಟಿಯ ಮುಖ್ಯಾಂಶಗಳು

1. ಕದನ ವಿರಾಮಕ್ಕೆ ಒಪ್ಪಂದವಿಲ್ಲ: ಉಕ್ರೇನ್​ನಲ್ಲಿ ಕದನ ವಿರಾಮ ಸಾಧಿಸುವುದು ಟ್ರಂಪ್ ಅವರ ಪ್ರಮುಖ ಉದ್ದೇಶವಾಗಿದ್ದರೂ, ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಟ್ರಂಪ್, "ನಾವು ಆ ಹಂತಕ್ಕೆ ತಲುಪಲಿಲ್ಲ" ಎಂದು ಹೇಳಿದ್ದು, ಪುಟಿನ್ "ಅರ್ಥಮಾಡಿಕೊಂಡಿರುವುದಾಗಿ" ಹೇಳಿಕೆ ನೀಡಿದ್ದಾರೆ.

2. ಝೆಲೆನ್ಸ್ಕಿ ಅನುಪಸ್ಥಿತಿ ಟೀಕೆ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಮಾತುಕತೆಯಲ್ಲಿ ಭಾಗವಹಿಸದಿರುವುದು ಕೈವ್ ಮತ್ತು ಯುರೋಪಿಯನ್ ಮಿತ್ರರಿಂದ ತೀವ್ರ ಟೀಕೆಗೆ ಗುರಿಯಾಯಿತು.

3. ಸಂಕ್ಷಿಪ್ತ ಸಭೆ: ಉನ್ನತ ಅಧಿಕಾರಿಗಳ ಸಣ್ಣ ತಂಡದೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಯಿತು. ಮೊದಲೇ ನಿಗದಿಪಡಿಸಿದ್ದ ದೊಡ್ಡ ಭೋಜನ ಸಭೆಯನ್ನು ರದ್ದುಗೊಳಿಸಲಾಗಿದ್ದು, ಮಾತುಕತೆ ನಿರೀಕ್ಷೆಗಿಂತ ಬೇಗನೆ ಮುಕ್ತಾಯಗೊಂಡಿದೆ.

4. "ಫೀಲ್-ಔಟ್ ಮೀಟಿಂಗ್" ಎಂದ ಟ್ರಂಪ್: ಟ್ರಂಪ್ ಈ ಸಭೆಯನ್ನು "ಫೀಲ್-ಔಟ್ ಮೀಟಿಂಗ್" ಎಂದು ಬಣ್ಣಿಸಿದ್ದು, ಝೆಲೆನ್ಸ್ಕಿ ಒಳಗೊಂಡ ಭವಿಷ್ಯದ ತ್ರಿಪಕ್ಷೀಯ ಸಭೆಗೆ "ಅಡಿಪಾಯ ಹಾಕುವ" ಉದ್ದೇಶ ಹೊಂದಿದೆ ಎಂದರು.

5. ನಿರ್ಬಂಧಗಳ ಭವಿಷ್ಯ ಅಸ್ಪಷ್ಟ: "ಆರ್ಥಿಕವಾಗಿ ತೀವ್ರ" ನಿರ್ಬಂಧಗಳ ಎಚ್ಚರಿಕೆ ನೀಡಿದ್ದ ಟ್ರಂಪ್, ಒಪ್ಪಂದ ಆಗದ ಕಾರಣ ಮುಂದಿನ ಕ್ರಮಗಳು ಅಸ್ಪಷ್ಟ.

6. "ಪ್ರದೇಶ ವಿನಿಮಯ" ಚರ್ಚೆ: "ಪ್ರದೇಶ ವಿನಿಮಯ" ಎಂಬ ವಿವಾದಾತ್ಮಕ ಕಲ್ಪನೆಯನ್ನು ಚರ್ಚಿಸಲಾಯಿತು, ಇದು ಉಕ್ರೇನ್ ಮತ್ತು ಅದರ ಮಿತ್ರರನ್ನು ಆತಂಕಕ್ಕೀಡು ಮಾಡಿದೆ. ಟ್ರಂಪ್, ಉಕ್ರೇನ್​ಗಾಗಿ ತಾನು ಮಾತುಕತೆ ನಡೆಸುತ್ತಿಲ್ಲ ಮತ್ತು ಭೂಮಿ ವಿನಿಮಯದ ಯಾವುದೇ ಅಂತಿಮ ನಿರ್ಧಾರ ಅವರದೇ ಆಗಿರುತ್ತದೆ ಎಂದು ಹೇಳಿದರು.

7. ಪುಟಿನ್​​ಗೆ ರಾಜತಾಂತ್ರಿಕ ಗೆಲುವು: 2022 ರ ಉಕ್ರೇನ್ ಆಕ್ರಮಣದ ನಂತರ ಪಶ್ಚಿಮದಿಂದ ಹೆಚ್ಚಾಗಿ ಪ್ರತ್ಯೇಕಗೊಂಡಿದ್ದ ಪುಟಿನ್ ಅವರಿಗೆ ಈ ಶೃಂಗಸಭೆ ಮಹತ್ವದ ಗೆಲುವು ಎಂದು ಪರಿಗಣಿಸಲಾಯಿತು. ಕೆಂಪುಹಾಸಿನ ಸ್ವಾಗತ ಮತ್ತು ಜಂಟಿ ಪತ್ರಿಕಾಗೋಷ್ಠಿ ಅವರ ಅಂತರರಾಷ್ಟ್ರೀಯ ಸ್ಥಾನಮಾನಕ್ಕೆ ಉತ್ತೇಜನ ನೀಡಿತು.

8. ಸಂಕ್ಷಿಪ್ತ ಪತ್ರಿಕಾಗೋಷ್ಠಿ: ನಾಯಕರ ಜಂಟಿ ಪತ್ರಿಕಾಗೋಷ್ಠಿ ಸಂಕ್ಷಿಪ್ತವಾಗಿತ್ತು ಮತ್ತು ಪ್ರಶ್ನೋತ್ತರ ಅಧಿವೇಶನವಿರಲಿಲ್ಲ. ಇಬ್ಬರೂ ನಾಯಕರು ಸಿದ್ಧಪಡಿಸಿದ ಹೇಳಿಕೆಗಳನ್ನು ನೀಡಿದರು, ಹೊಸ ಮಾಹಿತಿ ನೀಡಲಿಲ್ಲ.

9. ಮುಂದೂಡಿದ ಸವಾಲು: ಯಾವುದೇ ನಿರ್ಣಯವಿಲ್ಲದ ಕಾರಣ, ಉಕ್ರೇನ್ ಯುದ್ಧ ಮುಂದುವರಿಯುವ ಸಾಧ್ಯತೆಯಿದೆ. ಟ್ರಂಪ್ ಅವರು ಝೆಲೆನ್ಸ್ಕಿ ಮತ್ತು ಯುರೋಪಿಯನ್ ನಾಯಕರನ್ನು ಕರೆಯುವ ಭರವಸೆಯನ್ನು ಈಡೇರಿಸುವ ಹೊಣೆಗಾರಿಕೆ ಅವರ ಮೇಲಿದೆ.

10. ಭಾರತಕ್ಕೆ ಹೆಚ್ಚಿದ ಕಳವಳ: ಮಾತುಕತೆಗಳು ಫಲಿತಾಂಶವಿಲ್ಲದೆ ಕೊನೆಗೊಂಡಿರುವುದರಿಂದ ಭಾರತವೂ ಆತಂಕದಲ್ಲಿದೆ. ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕ ಮತ್ತಷ್ಟು ಹೆಚ್ಚಾಗುತ್ತದೆಯೇ ಎಂಬುದು ಈಗ ದೊಡ್ಡ ಕಳವಳವಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

Tags:    

Similar News