ಪಾಕಿಸ್ತಾನಕ್ಕೆ ಹೋದಾಗ ಸ್ವಂತ ಮನೆಗೆ ಹೋದಂತಾಯಿತು: ಪಿತ್ರೋಡಾ ಹೇಳಿಕೆಗೆ ಬಿಜೆಪಿ ವಿರೋಧ

ಪಿತ್ರೋಡಾ ಈ ಹಿಂದೆಯೂ ಕೂಡ ಭಾರತವು ಚೀನಾ ಒಡ್ಡಿರುವ ಬೆದರಿಕೆಯನ್ನು ಉತ್ಪ್ರೇಕ್ಷಿಸದೆ, ಬೀಜಿಂಗ್‌ನೊಂದಿಗೆ ಹೆಚ್ಚು ಸಹಕಾರದ ನಿಲುವನ್ನು ಹೊಂದಬೇಕು. ನವದೆಹಲಿಯು ಬೀಜಿಂಗ್ ಅನ್ನು ಶತ್ರು ಎಂದು ತೋರಿಸಿಕೊಳ್ಳುವುದನ್ನು ಬಿಟ್ಟು, ಸಹಕಾರ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದಿದ್ದರು.

Update: 2025-09-19 12:17 GMT

ಸ್ಯಾಮ್ ಪಿತ್ರೋಡಾ

Click the Play button to listen to article

ನಾನು ಪಾಕಿಸ್ತಾನಕ್ಕೆ ಹೋದಾಗ ನನ್ನ ಸ್ವಂತ ಮನೆಗೇ ಹೋದಂತೆ ಒಳ್ಳೆಯ ಅನುಭವವಾಯಿತು ಎಂದು ಕಾಂಗ್ರೆಸ್ ನಾಯಕ, ಸಾಗರೋತ್ತರ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಈ ಮೂಲಕ ಹೊಸ ಚರ್ಚೆಯನ್ನು ಪಿತ್ರೋಡಾ ಹುಟ್ಟುಹಾಕಿದ್ದಾರೆ.

ಐಎಎನ್ಎಸ್ ಸುದ್ದಿಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಪಿತ್ರೋಡಾ, ಭಾರತವು ನೆರೆಯ ದೇಶಗಳೊಂದಿಗೆ ಉತ್ತಮ ಮಾತುಕತೆ ನಡೆಸುವ ಮುಖೇನ ವಿದೇಶಾಂಗ ನೀತಿಯನ್ನು ಬದಲಿಸಿಕೊಳ್ಳಲು ಆದ್ಯತೆ ನೀಡಬೇಕು. ಪಾಕಿಸ್ತಾನದ ಜತೆಗೂ ಉತ್ತಮ ಬಾಂಧವ್ಯ ಹೊಂದಬೇಕೆಂದು ಒತ್ತಾಯಿಸಿದ್ದಾರೆ.

ನೆರೆ ದೇಶಗಳಿಗೆ ಮೊದಲ ಆದ್ಯತೆ

ನನ್ನ ಪ್ರಕಾರ, ಭಾರತ ಸರ್ಕಾರವು ತನ್ನ ವಿದೇಶಾಂಗ ನೀತಿಯಲ್ಲಿ ನೆರೆಹೊರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಆದ್ಯತೆ ನೀಡಬೇಕು. ನಮ್ಮ ನೆರೆ ದೇಶಗಳೊಂದಿಗೆ ನಾವು ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಲು ಸಾಧ್ಯವಿಲ್ಲವೇ? ನಾನು ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿದ್ದ ಬಗ್ಗೆ ಇಲ್ಲಿ ಹೇಳಲೇಬೇಕಿದೆ. ಆಗ ನನಗೆ ನಿಜವಾಗಿಯೂ ನನ್ನ ಮನೆಗೆ ಹೋದಷ್ಟೇ ಒಳ್ಳೆಯ ಅನುಭವವಾಯಿತು. ನಾನು ಅದಕ್ಕೂ ಮೊದಲು ಬಾಂಗ್ಲಾದೇಶ ಮತ್ತು ನೇಪಾಳಕ್ಕೂ ಹೋಗಿದ್ದೆ. ಆಗಲೂ ಒಳ್ಳೆಯ ಅನುಭವವೇ ಆಗಿತ್ತು. ನನಗೆ ವಿದೇಶದಲ್ಲಿದ್ದೇನೆ ಎಂಬ ಅನುಭವ ಆಗಲೇ ಇಲ್ಲ ಎಂದಿದ್ದಾರೆ.

ನೆರೆ ದೇಶಗಳಲ್ಲಿ ಹಿಂಸಾಚಾರ, ಭಯೋತ್ಪಾದನೆ ಹೀಗೆ ಎಲ್ಲಾ ಸಮಸ್ಯೆಗಳೂ ಇದ್ದೇ ಇರುತ್ತವೆ. ಆದರೆ ದಿನದ ಕೊನೆಯಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಬೇಕಿದೆ ಎಂದಿದ್ದಾರೆ.

ಪಿತ್ರೋಡಾ ಮಾತಿಗೆ ಬಿಜೆಪಿ ಕೆಂಡ

ಪಿತ್ರೊಡಾ ಅವರು ಇಂತಹ ಹೇಳಿಕೆ ನೀಡುತ್ತಿದ್ದಂತೆ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಕೆಂಡಕಾರಿದೆ.

ಈ ಕುರಿತು ಮಾತನಾಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಕಾಂಗ್ರೆಸ್ ನಾಯಕರು ರಾಷ್ಟ್ರದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದಾರೆ. ಪಿತ್ರೋಡಾ ಅವರು ರಾಹುಲ್ ಗಾಂಧಿ ಅವರ ನೀಲಿ ಕಣ್ಣಿನ ಹುಡುಗನಾಗಿರುವ ಕಾರಣ ಅವರಿಗೆ ಪಾಕಿಸ್ತಾನಕ್ಕೆ ಹೋದರೂ ಮನೆಯಲ್ಲಿ ಇದ್ದಂತೆಯೇ ಅನುಭವವಾಗಿದೆ. 26/11 ಘಟನೆ ನಡೆದಾಗಲೂ ಅಂದಿನ ಯುಪಿಎ ಸರ್ಕಾರ ಪಾಕಿಸ್ತಾನದ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಪಿತ್ರೋಡಾ ಅವರ ಈ ಹೇಳಿಕೆಗೆ ಅಚ್ಚರಿ ಪಡಬೇಕಿಲ್ಲ. ಇದೇ ವಿಚಾರಕ್ಕೆ ಕಾಂಗ್ರೆಸ್ ಪಕ್ಷವು ಪಾಕಿಸ್ತಾನಕ್ಕೂ ಅಚ್ಚುಮೆಚ್ಚು ಆಗಿರಬಹುದೆಂದು ವಾಗ್ದಾಳಿ ನಡೆಸಿದ್ದಾರೆ.

ವಿವಾದಕ್ಕೆ ಕಾರಣವಾಗುತ್ತಿವೆ ಪಿತ್ರೋಡಾ ಹೇಳಿಕೆಗಳು

ಕಾಂಗ್ರೆಸ್ ಪಾಲಿಗೆ ಪಿತ್ರೋಡಾ 1980ರಿಂದಲೂ ಶಾಶ್ವತ ತಂತ್ರಜ್ಞರಾಗಿದ್ದಾರೆ. ಇದರೊಂದಿಗೆ ಗಾಂಧಿ ಕುಟುಂಬಕ್ಕೆ ಬಹಳಷ್ಟು ವರ್ಷಗಳಿಂದಲೂ ಅವರೇ ಸಲಹೆಗಾರರಾಗಿದ್ದಾರೆ. ಪಿತ್ರೋಡಾ ಈ ಹಿಂದೆಯೂ ಕೂಡ ಭಾರತವು ಚೀನಾ ಒಡ್ಡಿರುವ ಬೆದರಿಕೆಯನ್ನು ಉತ್ಪ್ರೇಕ್ಷಿಸದೆ, ಬೀಜಿಂಗ್‌ನೊಂದಿಗೆ ಹೆಚ್ಚು ಸಹಕಾರದ ನಿಲುವನ್ನು ತಾಳಬೇಕು. ನವದೆಹಲಿಯು ಬೀಜಿಂಗ್ ಅನ್ನು ಶತ್ರು ಎಂದು ತೋರಿಸಿಕೊಳ್ಳುವುದನ್ನು ಬಿಟ್ಟು, ಸಹಕಾರ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದಿದ್ದರು.

ಭಾರತದ ವಿದೇಶಾಂಗ ನೀತಿಯ ಮೇಲೆ ಪಿತ್ರೋಡಾ ನೀಡುವ ಹೇಳಿಕೆಗಳು ಬಿಜೆಪಿಗೆ ಯಾವಾಗಲೂ ಆಹಾರವಾಗುತ್ತಿದ್ದು, ದೇಶದ ಭದ್ರತೆ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಯಾವ ಬದ್ಧತೆ ಇದೆ ಎಂದು ಬಿಜೆಪಿಯು ನಿರಂತರವಾಗಿ ಪ್ರಶ್ನಿಸುತ್ತಾ ಬರುತ್ತಿದೆ.

ಚೀನಾ ಬಗ್ಗೆ ಪಿತ್ರೋಡಾ ವಾದವೇನು?

ಚೀನಾದಿಂದ ಭಾರತಕ್ಕೆ ಅಪಾಯವಿದೆ ಎಂಬುದನ್ನು ನಾನು ನಂಬುವುದಿಲ್ಲ ಎಂದಿದ್ದ ಸ್ಯಾಮ್ ಪಿತ್ರೋಡಾ, ಅಮೆರಿಕಾಗೆ ಶತ್ರು ರಾಷ್ಟ್ರಗಳನ್ನು ತೆಗಳುವ ಅಭ್ಯಾಸವಿದೆ. ಹಾಗಾಗಿ ನನ್ನ ಹೇಳಿಕೆಯನ್ನೂ ಕೂಡ ಹಲವಾರು ನಿರ್ಲಕ್ಷಿಸುತ್ತಾರೆ. ಎಲ್ಲಾ ರಾಷ್ಟ್ರಗಳೂ ಸಹಬಾಳ್ವೆಯಿಂದ ಬದುಕುವ ಕಾಲ ಬಂದೇ ಬರುತ್ತದೆ ಎಂಬುದನ್ನು ನಾನು ನಂಬಿದ್ದೇನೆ. ನಮ್ಮ ದೃಷ್ಟಿಕೋನವು ಆರಂಭದಿಂದಲೂ ಸ್ಪಷ್ಟವಾಗಿದೆ. ನಮ್ಮ ದೃಷ್ಟಿಕೋನಕ್ಕೆ ಕೆಲವರು ಶತ್ರುಗಳಿರಬಹುದು. ಆದರೆ ಅಷ್ಟೇ ಪ್ರಮಾಣದ ಬೆಂಬಲವೂ ದೇಶದಲ್ಲಿ ದೊರೆಯಲಿದೆ. ಈ ರೀತಿಯ ಮನೋಭಾವವನ್ನು ನಾವು ಬದಲಿಸಬೇಕಿದ್ದು, ನೆರೆಯ ಚೀನಾ ದೇಶವನ್ನು ಒಂದೇ ಕಣ್ಣಿನಲ್ಲಿ ನೋಡಿ ಶತ್ರು ಎಂದು ಪರಿಗಣಿಸುವುದನ್ನು ಮೊದಲು ನಿಲ್ಲಿಸಿ ಎಂದು ಪಿತ್ರೋಡಾ ಬಿಜೆಪಿ ನಾಯಕರನ್ನು ಒತ್ತಾಯಿಸಿದ್ದಾರೆ.

Tags:    

Similar News