ಪಾಕಿಸ್ತಾನ ಸೇನೆಗೆ ತೀವ್ರ ಶಸ್ತ್ರಾಸ್ತ್ರ ಕೊರತೆ: ಯುದ್ಧವಾದರೆ ಕೇವಲ 4 ದಿನಕ್ಕೆ ಎಲ್ಲ ಖಾಲಿ..?
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದ್ದು, ಪಾಕ್ ಸೇನೆ ಯುದ್ಧಕ್ಕೆ ಸಜ್ಜಾಗಿದೆ ಎಂದು ವರದಿಯಾಗಿದೆ;
ಪಾಕಿಸ್ತಾನದ ಸೇನೆಯು ತೀವ್ರ ಶಸ್ತ್ರಾಸ್ತ್ರ ಕೊರತೆ ಎದುರಿಸುತ್ತಿದ್ದು, ಭಾರತದ ಜತೆ ಯುದ್ಧವಾದರೆ ಕೇವಲ 96 ಗಂಟೆಗಳು ಅಥವಾ 4 ದಿನಗಳವರೆಗೆ ಮಾತ್ರ ತಡೆದುಕೊಳ್ಳಬಲ್ಲ ಸ್ಥಿತಿಯಲ್ಲಿದೆ ಎಂಬುದಾಗಿ ವರದಿಯಾಗಿದೆ. ಕೊರತೆಯು ಮುಖ್ಯವಾಗಿ ಪಾಕಿಸ್ತಾನದ ಇತ್ತೀಚಿನ ಶಸ್ತ್ರಾಸ್ತ್ರ ವ್ಯವಹಾರಗಳಿಂದ, ವಿಶೇಷವಾಗಿ ಉಕ್ರೇನ್ ಮತ್ತು ಇಸ್ರೇಲ್‌ಗೆ ಮಾಡಿದ ರಫ್ತಿನಿಂದಾಗಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಇದು ದೇಶದ ಯುದ್ಧ ಸಂಗ್ರಹವನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಪಾಕ್ ಸೇನೆಯ ಯುದ್ಧ ಸಿದ್ಧತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಪಾಕಿಸ್ತಾನವು ತನ್ನ ಫಿರಂಗಿ ಕೇಂದ್ರಿತ ಯುದ್ಧ ತಂತ್ರಕ್ಕೆ ನಿರ್ಣಾಯಕವಾದ 155 ಎಂಎಂ ಫಿರಂಗಿ ಶೆಲ್‌ಗಳನ್ನು ಉಕ್ರೇನ್‌ಗೆ ರಫ್ತು ಮಾಡಿದೆ. ಈ ವ್ಯವಹಾರವು ಜಾಗತಿಕ ಬೇಡಿಕೆಯ ಏರಿಕೆ ಮತ್ತು ಆಕರ್ಷಕ ಒಪ್ಪಂದಗಳ ಮಧ್ಯೆ ನಡೆದಿದೆ. , ಪಾಕಿಸ್ತಾನದ ಈ ಯೋಜನೆ ಶಸ್ತ್ರಾಸ್ತ್ರ ಸಂಗ್ರಹವನ್ನು ಗಣನೀಯವಾಗಿ ಕಡಿಮೆಗೊಳಿಸಿದೆ. ಇದರ ಪರಿಣಾಮವಾಗಿ, ಪಾಕಿಸ್ತಾನದ ಪ್ರಬಲ M109 ಹೊವಿಟ್ಜರ್‌ಗಳು ಮತ್ತು BM-21 ರಾಕೆಟ್ಗಳನ್ನು ಕಾರ್ಯಾಚರಣೆಗೆ ಇಳಿಸಲು ಸಾಧ್ಯವಾಗುವುದಿಲ್ಲ.
ಪಾಕಿಸ್ತಾನ ಆರ್ಡನೆನ್ಸ್ ಫ್ಯಾಕ್ಟರೀಸ್ (POF), ದೇಶದ ಪ್ರಾಥಮಿಕ ಶಸ್ತ್ರಾಸ್ತ್ರ ಉತ್ಪಾದಕ ಸಂಸ್ಥೆಯಾಗಿದೆ. ಹಳೆಯದಾಗಿರುವ ಮೂಲಸೌಕರ್ಯ ಮತ್ತು ಸೀಮಿತ ಉತ್ಪಾದನಾ ಸಾಮರ್ಥ್ಯದಿಂದಾಗಿ ಪ್ರಸ್ತುತ ಎದುರಾಗಿರುವ ಕೊರತೆ ನೀಗಿಸಲು ವಿಫಲವಾಗಿದೆ. ಪಿಎಎಫ್ ಆದ್ಯತೆಯು ದೇಶೀಯ ಅಗತ್ಯಗಳನ್ನು ಪೂರೈಸುವುದಾದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅಷ್ಟೊಂದು ಸಾಮರ್ಥ್ಯ ಹೊಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2022-23ರ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ರಫ್ತು 415 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಇದು ಹಿಂದಿನ ವರ್ಷದ 13 ಮಿಲಿಯನ್ ಡಾಲರ್‌ಗಿಂತ 3,000% ಏರಿಕೆಯಾಗಿದೆ. ಆದರೆ, ಈ ಆರ್ಥಿಕ ಲಾಭವು ದೇಶದ 6 ಲಕ್ಷ ಸೈನಿಕರನ್ನು ಹೊಂದಿರುವ ಸೇನೆಗೆ ಅಗತ್ಯವಾಗಿರುವ ಶಸ್ತ್ರಾಸ್ತ್ರ ಸಂಗ್ರಹ ಗಣನೀಯವಾಗಿ ಕಡಿಮೆ ಮಾಡಿದೆ.
ಸೇನಾ ನಾಯಕರ ಸಭೆಯಲ್ಲಿ ಆತಂಕ
ಶಸ್ತ್ರಾಸ್ತ್ರ ಕೊರತೆಯು ಮೇ 2ರಂದು ನಡೆದ ವಿಶೇಷ ಕಾರ್ಪ್ಸ್ ಕಮಾಂಡರ್ಸ್ ಸಮ್ಮೇಳನದಲ್ಲಿ ಪ್ರಮುಖ ಅಜೆಂಡಾವಾಗಿತ್ತು. ಪಾಕಿಸ್ತಾನದ ಸೇನಾ ನಾಯಕತ್ವವು ಈ ಕೊರತೆಯಿಂದ ತೀವ್ರ ಆತಂಕಕ್ಕೊಳಗಾಗಿದ್ದು, ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರು ಈ ಹಿಂದೆಯೇ ಪಾಕಿಸ್ತಾನದ ಸೀಮಿತ ಯುದ್ಧ ಸಾಮರ್ಥ್ಯದ ಬಗ್ಗೆ ಎಚ್ಚರಿಕೆ ನೀಡಿದ್ದರು, ಆರ್ಥಿಕ ಮತ್ತು ಲಾಜಿಸ್ಟಿಕ್ ಸಮಸ್ಯೆಗಳಿಂದ ದೇಶವು ದೀರ್ಘಕಾಲೀನ ಸಂಘರ್ಷವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದ್ದರು.
ಆರ್ಥಿಕ ಸಂಕಷ್ಟದಿಂದ ಸೇನೆಗೆ ತೊಂದರೆ
ಪಾಕಿಸ್ತಾನದ ಆರ್ಥಿಕ ಸಂಕಷ್ಟವು ಈ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಹಣದುಬ್ಬರ, ಏರುತ್ತಿರುವ ಸಾಲದ ಹೊರೆ, ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಸಂಗ್ರಹವು ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯ ತೀವ್ರವಾಗಿ ಕುಗ್ಗಿಸಿದೆ. ಇದರ ಪರಿಣಾಮವಾಗಿ, ಪಾಕ್ ಸೇನೆಯು ತರಬೇತಿ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ, ಸೈನಿಕರಿಗೆ ಒದಗಿಸುವ ಆಹಾರದ ಪ್ರಮಾಣವನ್ನು ಕಡಿಮೆಗೊಳಿಸಿದೆ ಮತ್ತು ಇಂಧನ ಕೊರತೆಯಿಂದಾಗಿ ಪರೇಡ್ಗಳನ್ನು ಕಡಿಮೆ ಮಾಡಿದೆ.
ಭಾರತದೊಂದಿಗೆ ಉದ್ವಿಗ್ನತೆ, ವಿಫಲ ತಂತ್ರಗಾರಿಕೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಸ್ಥಿತಿ ಗರಿಷ್ಠ ಮಟ್ಟಕ್ಕೆ ಏರಿದೆ. ಈ ದಾಳಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೇ ಕಾರಣ ಎಂದು ಭಾರತ ಆರೋಪಿಸಿದ್ದು, ಹಲವು ಪ್ರತೀಕಾರಾತ್ಮಕ ಕ್ರಮಗಳನ್ನು ಘೋಷಿಸಿದೆ.
ತ್ವೇಷಮಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನವು ಪಾಕಿಸ್ತಾನ ಗಡಿಯ ಸಮೀಪ ಹೊಸ ಶಸ್ತ್ರಾಸ್ತ್ರ ಡಿಪೋಗಳನ್ನು ನಿರ್ಮಿಸಲು ಆರಂಭಿಸಿದೆ. ಆದರೆ, ಈ ಡಿಪೋಗಳನ್ನು ತುಂಬಲು ಸಾಕಷ್ಟು ಶಸ್ತ್ರಾಸ್ತ್ರ ಸಂಗ್ರಹವಿಲ್ಲದಿರುವುದರಿಂದ ಹಿನ್ನಡೆ ಉಂಟಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಡಿಜಿಟಲ್ ಯುದ್ಧದಲ್ಲಿ ಪಾಕಿಸ್ತಾನದ ಕೀಳುಮಟ್ಟದ ಕೃತ್ಯ
ಪಾಕಿಸ್ತಾನವು ಡಿಜಿಟಲ್ ಕ್ಷೇತ್ರದಲ್ಲಿಯೂ ಭಾರತದ ವಿರುದ್ಧ ಆಕ್ರಮಣಕಾರಿ ದಾಳಿ ಮಾಡಲು ಮುಂದಾಗಿದೆ. ಪಾಕಿಸ್ತಾನ ಪ್ರಾಯೋಜಿತ ಹ್ಯಾಕರ್ ಗುಂಪುಗಳಾದ “ಸೈಬರ್ ಗ್ರೂಪ್ HOAX1337” ಮತ್ತು “ನಾನಿನ್‌ನಲ್ ಸೈಬರ್ ಕ್ರೂ” ಭಾರತೀಯ ವೆಬ್‌ಸೈಟ್‌ಗಳನ್ನು ಭೇದಿಸಲು ಪ್ರಯತ್ನ ಮಾಡಿವೆ. ಪಹಲ್ಗಾಮ್ ದಾಳಿಯ ಬಲಿಪಶುಗಳನ್ನು ಅಪಹಾಸ್ಯ ಮಾಡುವ ಸಂದೇಶಗಳನ್ನು ಕಳುಹಿಸಲು ಯತ್ನಿಸಿತ್ತು.
ಭಾರತದ ಸ್ಥಿತಿಯೇನು?
ಪಾಕಿಸ್ತಾನದ ಈ ದೌರ್ಬಲ್ಯ ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ತದ್ವಿರುದ್ಧವಾಗಿದೆ. 2024ರಲ್ಲಿ ಭಾರತದ ಸೇನಾ ವೆಚ್ಚವು ಪಾಕಿಸ್ತಾನಕ್ಕಿಂತ ಸುಮಾರು 9 ಪಟ್ಟು ಹೆಚ್ಚಾಗಿತ್ತು ಎಂದು ವರದಿಯು ತಿಳಿಸಿದೆ. ಭಾರತದ ಬೃಹತ್ ಸೇನೆಯನ್ನು ಎದುರಿಸಲು ಪಾಕಿಸ್ತಾನದ ಫಿರಂಗಿ ಶಕ್ತಿಯ ಮೇಲೆ ಅವಲಂಬಿತವಾಗಬೇಕಾಗಿದೆ. ಪ್ರಸ್ತುತ ಶಸ್ತ್ರಾಸ್ತ್ರ ಕೊರತೆಯಿಂದ ಈ ತಂತ್ರವು ಸಂಪೂರ್ಣವಾಗಿ ವಿಫಲವಾಗಲಿದೆ.