ಲೆಬೆನಾನ್ ಹಿಜ್ಬುಲ್ಲಾ ದಮನಕ್ಕೆ ಇಸ್ರೇಲ್ ತಂತ್ರ | ಏಕಕಾಲಕ್ಕೆ ಸಾವಿರಾರು ಪೇಜರ್ ಸ್ಫೋಟ; 9ಕ್ಕೂ ಹೆಚ್ಚು ಸಾವು, 3000 ಮಂದಿಗೆ ಗಾಯ
ಈ ದಾಳಿಗೆ ಹಿಜ್ಬುಲ್ಲಾ ಸಂಘಟನೆ, ಇಸ್ರೇಲಿ ಸೇನೆಯನ್ನು ದೂಷಿಸಿದೆ ಮತ್ತು ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ಆದರೆ, ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಲೆಬನಾನ್ ಮತ್ತು ಸಿರಿಯಾದ ಕೆಲವು ಭಾಗಗಳಲ್ಲಿ ಹೆಜ್ಬೊಲ್ಲಾ ಕಾರ್ಯಕರ್ತರು ಇರಿಸಿದ್ದ ಸಾವಿರಾರು ಪೇಜರ್‌ಗಳು ಏಕಕಾಲದಲ್ಲಿ ಮಂಗ ಳವಾರ ಸ್ಫೋಟಗೊಂಡಿದ್ದು, ಒಂಬತ್ತು ಮಂದಿ ಸಾವಿಗೀಡಾಗಿ, 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇಸ್ರೇಲ್‌ನ ಬೇಹುಗಾರಿಕಾ ಸಂಸ್ಥೆ ಮೊಸ್ಸಾದ್ 5,000 ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ ಐದು ತಿಂಗಳ ಮೊದಲು ಸ್ಪೋಟಕಗಳನ್ನು ಅಳವಡಿಸಿತ್ತು ಎಂದು ವರದಿಗಳು ಹೇಳಿವೆ.
ಲೆಬನಾನ್‌ಗೆ ಆಮದು ಮಾಡಿಕೊಂಡಿದ್ದ ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ ಬ್ಯಾಟರಿ ಪಕ್ಕದಲ್ಲಿ ಸಣ್ಣ ಪ್ರಮಾಣದ ಸ್ಫೋಟಕ ವಸ್ತು ಅಳವಡಿಸಲಾಗಿತ್ತು. ಈ ಗೋಲ್ಡ್ ಅಪೊಲೋ ಪೇಜರ್‌ಗಳಲ್ಲಿ ರಿಮೋಟ್‌ನಿಂದ ಪ್ರಚೋದಿಸಬಹುದಾದ ಸ್ವಿಚ್ ಕೂಡ ಇದ್ದಿತ್ತು. ಮಧ್ಯಾಹ್ನ 3.30ಕ್ಕೆ ಪೇಜರ್‌ಗಳಿಗೆ ಸ್ಫೋಟಕಗಳನ್ನು ಸಕ್ರಿಯಗೊಳಿಸುವ ಸಂದೇಶ ಬಂದಿದೆ.
ಪೇಜರ್ ಏಕೆ?: ಈ ವರ್ಷದ ಆರಂಭದಲ್ಲಿ ಹಿಜ್ಬುಲ್ಲಾ ಮುಖ್ಯಸ್ಥರಾದ ಹಸನ್ ನಸ್ರಲ್ಲಾ, ಹೊಸ ಭದ್ರತಾ ಸಂಹಿತೆಯನ್ನು ಜಾರಿಗೊಳಿಸಿ, ಮೊಬೈಲ್ ಫೋನ್‌ಗಳ ಬಳಕೆಯನ್ನು ಸೀಮಿತಗೊಳಿಸಿದರು. ತೈವಾನಿನ ಗೋಲ್ಡ್ ಅಪೊಲೊ ಕಂಪನಿಯಿಂದ ಸುಮಾರು 5,000 ಪೇಜರ್ ತಂದು, ಲೆಬನಾನ್‌ನಾದ್ಯಂತ ಹಿಜ್ಬುಲ್ಲಾ ಸದಸ್ಯರಿಗೆ ವಿತರಿಸಲಾಯಿತು. ಇದು ಹಿಜ್ಬುಲ್ಲಾ ಅನುಭವಿಸಿದ ಅತಿ ದೊಡ್ಡ ಭದ್ರತಾ ಉಲ್ಲಂಘನೆ ಎಂದು ಹೇಳಲಾಗಿದೆ.
ಗೋಲ್ಡ್ ಅಪೊಲೊದ ಸಂಸ್ಥಾಪಕ ಹ್ಸು ಚಿಂಗ್-ಕುವಾಂಗ್,ʻಪೇಜರ್‌ಗಳನ್ನು ತಮ್ಮ ಕಂಪನಿ ತಯಾರಿಸಿಲ್ಲ. ಗೋಲ್ಡ್ ಅಪೊಲೊ ಬ್ರ್ಯಾಂಡ್ ಬಳಸುವ ಹಕ್ಕನ್ನು ಹೊಂದಿರುವ ಯುರೋಪಿನ ಸಂಸ್ಥೆ ತಯಾರಿಸಿದೆ,ʼ ಎಂದು ಹೇಳಿದ್ದಾರೆ.
ಸ್ಫೋಟದ ಹಿಂದೆ ಇಸ್ರೇಲ್?: ʻಈ ಕ್ರಿಮಿನಲ್ ಆಕ್ರಮಣಕ್ಕೆ ಇಸ್ರೇಲ್ ಸಂಪೂರ್ಣ ಜವಾಬ್ದಾರ. ಇದಕ್ಕೆ ನ್ಯಾಯಯುತ ಶಿಕ್ಷೆ ಪಡೆಯುತ್ತದೆ,ʼ ಎಂದು ಹಿಜ್ಬುಲ್ಲಾ ಹೇಳಿದೆ. ಗಾಜಾದಲ್ಲಿ ಇಸ್ರೇಲ್‌ನೊಂದಿಗೆ ಯುದ್ಧದಲ್ಲಿ ತೊಡಗಿರುವ ಹಮಾಸ್, ಪೇಜರ್ ಸ್ಫೋಟ ಇಸ್ರೇಲಿನ ಸೋಲಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ʻಮೊಸ್ಸಾದ್ ಪೇಜರಿನಲ್ಲಿಅಳವಡಿಸಿರುವ ಸ್ಫೋಟಕ ವಸ್ತುವನ್ನು ಯಾವುದೇ ಸಾಧನ ಅಥವಾ ಸ್ಕ್ಯಾನರ್‌ನಿಂದ ಪತ್ತೆ ಹಚ್ಚುವುದು ಕಷ್ಟ,ʼ ಎಂದು ಹೇಳಿದೆ.
ಇಸ್ರೇಲ್ ಪ್ರತಿಕ್ರಿಯೆ ಏನು?: ಇಸ್ರೇಲ್ ಅಧಿಕಾರಿಗಳು ಅಥವಾ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅಮೆರಿಕದ ರಾಷ್ಟ್ರೀಯ ಭದ್ರತಾ ಏಜೆನ್ಸಿಯ ವಿಶ್ಲೇಷಕರೊಬ್ಬರು, ಇಸ್ರೇಲ್ ಈ ಹಿಂದೆ ಇಂಥ ತಂತ್ರಗಳನ್ನು ಬಳಸಿದೆ. ಇಸ್ರೇಲ್‌ನ ಶಿನ್ ಬೆಟ್ 1996 ರಲ್ಲಿ ಹಮಾಸ್ ನಾಯಕ ಯಾಹ್ಯಾ ಅಯಾಶ್‌ನನ್ನು ಕೊಲ್ಲಲು ಮೊಬೈಲ್ ಫೋನ್‌ನಲ್ಲಿ ಆರ್‌ಡಿಎಕ್ಸ್ ಸ್ಫೋಟಕ ಅಳವಡಿಸಿದ್ದರು. ಫೋನ್ ಕರೆ ಮಾಡಿದಾಗ ಆರ್‌ಡಿಎಕ್ಸ್ ಸ್ಪೋಟಗೊಂಡಿತು ಎಂದು ಹೇಳಿದ್ದಾರೆ.
2,800 ಗಾಯಾಳುಗಳಲ್ಲಿ 200 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಹೇಳಿದ್ದಾರೆ.
ಹಿಜ್ಬುಲ್ಲಾ ಅಪರಾಧಕ್ಕೆ ಇಸ್ರೇಲಿ ಸೇನೆಯನ್ನು ಹೊಣೆಗಾರರನ್ನಾಗಿ ಮಾಡಿದೆ. ಈ ಕೃತ್ಯಕ್ಕೆ ಬೆಲೆ ತೆರಲಿದೆ ಎಂದಿದೆ. ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್)ಯ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲ್ವೆರಿ, ದೇಶ ಯಾವುದೇ ದಾಳಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.