ಟ್ರಂಪ್ ವಿರುದ್ಧ ಅಮೆರಿಕಾದಲ್ಲಿ ಭಾರೀ ಪ್ರತಿಭಟನೆ: ಎಲಾನ್​ ಮಸ್ಕ್​ ಬಗ್ಗೆಯೂ ಆಕ್ರೋಶ

ಶನಿವಾರದಂದು ದೇಶದಾದ್ಯಂತ 1,200 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದವು, ಇದರಲ್ಲಿ ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ಚಿಕಾಗೊ, ಬೋಸ್ಟನ್, ಮತ್ತು ಲಾಸ್ ಏಂಜಲೀಸ್‌ನಂತಹ ಪ್ರಮುಖ ನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.;

Update: 2025-04-06 10:06 GMT
ಅಮೆರಿಕಾದ್ಯಂತ ಎಲಾನ್ ಮಸ್ಕ್​ ಹಾಗೂ ಟ್ರಂಪ್ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದವು.

ಅಮೆರಿಕದಾದ್ಯಂತ ಶನಿವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉದ್ಯಮಿ ಎಲಾನ್ ಮಸ್ಕ್ ಅವರ ನೀತಿಗಳ ವಿರುದ್ಧ "ಹ್ಯಾಂಡ್ಸ್ ಆಫ್!" ಎಂಬ ಘೋಷವಾಕ್ಯದೊಂದಿಗೆ ಜೋರು ಪ್ರತಿಭಟನೆಗಳು ನಡೆದಿವೆ. ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಜಾರಿಗೊಂಡಿರುವ ಸರ್ಕಾರಿ ಉದ್ಯೋಗದ ಕಡಿತ, ಆರ್ಥಿಕ ನೀತಿಗಳು, ವಲಸೆ ಕಾನೂನುಗಳು ಮತ್ತು ಮಾನವ ಹಕ್ಕುಗಳ ಮೇಲಿನ ನೀತಿಗಳನ್ನು ವಿರೋಧಿಸಿ ಲಕ್ಷಾಂತರ ಮಂದಿ ಪ್ರತಿಭಟನೆ ನಡೆಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇದು ಟ್ರಂಪ್ ಮತ್ತು ಮಸ್ಕ್ ಅವರ ನಾಯಕತ್ವದ ವಿರುದ್ಧ ಇದುವರೆಗಿನ ಅತಿದೊಡ್ಡ ಜನಾಕ್ರೋಶದ ಪ್ರತಿಭಟನೆಯಾಗಿದೆ.

ಶನಿವಾರದಂದು ದೇಶದಾದ್ಯಂತ 1,200 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದವು, ಇದರಲ್ಲಿ ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ಚಿಕಾಗೊ, ಬೋಸ್ಟನ್, ಮತ್ತು ಲಾಸ್ ಏಂಜಲೀಸ್‌ನಂತಹ ಪ್ರಮುಖ ನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಟ್ರಂಪ್ ಜನವರಿ 20ರಂದು ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ, ಅವರು ಎಲಾನ್ ಮಸ್ಕ್ ಅವರನ್ನು "ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯೆನ್ಸಿ" (DOGE) ಎಂಬ ಹೊಸ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಮಸ್ಕ್ ಸರ್ಕಾರಿ ಖರ್ಚನ್ನು 1 ಟ್ರಿಲಿಯನ್‌ ಡಾಲರ್​ಗಿಂತಲೂ ಕಡಿಮೆ ಮಾಡುವ ಗುರಿಯೊಂದಿಗೆ ಆಕ್ರಮಣಕಾರಿ ಉದ್ಯೋಗ ಕಡಿತವನ್ನು ಜಾರಿಗೊಳಿಸಿದ್ದಾರೆ. ಇದರ ಫಲವಾಗಿ, ಐಆರ್‌ಎಸ್‌ನಲ್ಲಿ 20,000 ಉದ್ಯೋಗಗಳು ಸೇರಿದಂತೆ ಒಟ್ಟು 2,00,000 ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಿಗಳು ನೌಕರಿ ಕಳೆದುಕೊಂಡಿದ್ದಾರೆ.

ಪ್ರಜಾಪ್ರಭುತ್ವದ ಮೇಲಿನ ದಾಳಿ

ಪ್ರತಿಭಟನಾಕಾರರು ಮಸ್ಕ್​ ಜಾರಿಗೊಳಿಸಿರುವ ನೀತಿಗಳನ್ನು "ಪ್ರಜಾಪ್ರಭುತ್ವದ ಮೇಲಿನ ದಾಳಿ" ಮತ್ತು "ಶ್ರೀಮಂತರ ಆಡಳಿತ" ಎಂದು ಟೀಕಿಸಿದ್ದಾರೆ. ಮಸ್ಕ್ ಮತ್ತು ಟ್ರಂಪ್ ಅವರ ಆರ್ಥಿಕ ಯೋಜನೆಗಳು ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಇತರ ಸಾರ್ವಜನಿಕ ಸೇವೆಗಳ ಮೇಲೆ ಪರಿಣಾಮ ಬೀರಿವೆ ಎಂದು ಆರೋಪಿಸಿದ್ದಾರೆ. , ಯುರೋಪಿಯನ್ ಒಕ್ಕೂಟದ ದೇಶಗಳ ಮೇಲೆ 20% ಸುಂಕ ವಿಧಿಸಿರುವುದು ಮತ್ತು ವಲಸೆ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ ನೀತಿಗಳು ಜನರ ಕೋಪಕ್ಕೆ ಕಾರಣವಾಗಿವೆ.

ಪ್ರತಿಭಟನೆಯ ವಿಶೇಷತೆಗಳು

ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್‌ನಲ್ಲಿ ಸಾವಿರಾರು ಜನರು ಜಮಾಯಿಸಿ, ಟ್ರಂಪ್ ಮತ್ತು ಮಸ್ಕ್ ಅವರ ಪ್ರತಿಕೃತಿಗಳನ್ನು ಪ್ರದರ್ಶಿಸಿ ಆಕ್ರೋಶ ತೋರಿದರು. ''ನಮ್ಮ ಪ್ರಜಾಪ್ರಭುತ್ವದಿಂದ ಹೊರಕ್ಕೆ ನಡೆಯಿರಿ" ಎಂದು ಘೋಷಣೆ ಕೂಗಿದರು. ಡೆಮಾಕ್ರಟಿಕ್ ಪಕ್ಷದ ಕಾಂಗ್ರೆಸ್ ಸದಸ್ಯರು ಮತ್ತು ಮಾನವ ಹಕ್ಕುಗಳ ಸಂಘಟನೆಯ ಮುಖಂಡರು ಭಾಷಣ ಮಾಡಿದರು.

ನ್ಯೂಯಾರ್ಕ್​​ನ ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಲ್ಲಿ ಪ್ರತಿಭಟನಾಕಾರರು ಟೆಸ್ಲಾ ಶೋರೂಂಗಳ ಮುಂದೆ ರ್ಯಾಲಿ ನಡೆಸಿದರು. ಮಸ್ಕ್ "ಅಧಿಕಾರದ ದುರುಪಯೋಗ" ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚಿಕಾಗೊದಲ್ಲಿ ಸ್ಥಳೀಯ ನಾಗರಿಕರು ತಮ್ಮ ಉದ್ಯೋಗಗಳು ಮತ್ತು ಸೇವೆಗಳ ಮೇಲಿನ ಕಡಿತಗಳ ವಿರುದ್ಧ ಧ್ವನಿ ಎತ್ತಿದರು.

ಈ ರ್ಯಾಲಿಗಳನ್ನು 150 ಕ್ಕೂ ಹೆಚ್ಚು ಗುಂಪುಗಳು, ಒಕ್ಕೂಟಗಳು, ಪರಿಸರವಾದಿಗಳು, ಮತ್ತು ಎಲ್‌ಜಿಬಿಟಿಕ್ಯೂ+ ಸಮುದಾಯದ ಸಂಘಟನೆಗಳು ಸೇರಿ ಆಯೋಜಿಸಿದ್ದವು. ಪ್ರತಿಭಟನೆಗಳು ಶಾಂತಿಯುತವಾಗಿ ನಡೆದವು ಮತ್ತು ತಕ್ಷಣದ ಬಂಧನದ ವರದಿಗಳು ಬಂದಿಲ್ಲ. ಈ ಚಳವಳಿಯು 2017 ರ ವಿಮೆನ್ಸ್ ಮಾರ್ಚ್ ಮತ್ತು 2020 ರ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನೆಗಳ ನಂತರ ಅತಿದೊಡ್ಡ ಸಾರ್ವಜನಿಕ ಅಭಿಯಾನ ಎನಿಸಿದೆ.

ಪ್ರತಿಭಟನೆಯ ಹಿನ್ನೆಲೆ

ಮಸ್ಕ್ ತಮ್ಮ ಈ ಕ್ರಮಗಳನ್ನು "ಸರ್ಕಾರಿ ದಕ್ಷತೆ" ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಟೀಕಾಕಾರರು ಇದನ್ನು "ಪ್ರಜಾಪ್ರಭುತ್ವದ ಸವಕಳಿ " ಎಂದು ಬೇಸರದಲ್ಲಿಹೇಳಿದ್ದಾರೆ. ಮಸ್ಕ್ ಅವರ ಉದ್ಯಮ ಟೆಸ್ಲಾ ಕೂಡ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದ್ದು. ಟೆಸ್ಲಾ ಶೋರೂಂಗಳ ಮುಂದೆ ರ್ಯಾಲಿಗಳು ನಡೆದವು.

ಎಲಾನ್​ ಮಸ್ಕ್ , ಟ್ರಂಪ್ ಆಡಳಿತದಲ್ಲಿ "ಮಿತಿಮೀರಿದ ಪ್ರಭಾವ" ಹೊಂದಿದ್ದಾರೆ ಎಂದು ಆರೋಪಿಸಿದರು. ಟ್ರಂಪ್ ಅವರು ಮಸ್ಕ್ ತಮ್ಮ ಸಲಹೆಗಾರರ ವಲಯದಿಂದ ಹೊರಕ್ಕೆ ಬರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಆದಾಗ್ಯೂ ಪ್ರತಿಭಟನಾಕಾರರು ಅದನ್ನು ಆಲಿಸಿಲ್ಲ.

Tags:    

Similar News