ಅಮೆರಿಕದಲ್ಲೇ ಚಿಪ್ ತಯಾರಿಸಿ, ಇಲ್ಲವೇ ಶೇ. 100ರಷ್ಟು ಸುಂಕ ಕಟ್ಟಿ: ಟ್ರಂಪ್ ಖಡಕ್ ಎಚ್ಚರಿಕೆ

"ನಾವು ಚಿಪ್​​ಗಳನ್ನು ಮತ್ತು ಸೆಮಿಕಂಡಕ್ಟರ್​ಗಳ ಮೇಲೆ ಸುಮಾರು ಶೇ. 100ರಷ್ಟು ಸುಂಕವನ್ನು ವಿಧಿಸಲಿದ್ದೇವೆ. ಆದರೆ ನೀವು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಉತ್ಪಾದನೆ ಮಾಡುತ್ತಿದ್ದರೆ, ನಿಮಗೆ ಯಾವುದೇ ಶುಲ್ಕವಿರುವುದಿಲ್ಲ," ಎಂದು ಟ್ರಂಪ್ ತಿಳಿಸಿದ್ದಾರೆ.;

Update: 2025-08-07 06:50 GMT

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಂಪ್ಯೂಟರ್ ಚಿಪ್​​ಗಳಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವುದಾಗಿ ಬುಧವಾರ ಘೋಷಿಸಿದ್ದಾರೆ. ಒಂದು ವೇಳೆ ಕಂಪನಿಗಳು ಅಮೆರಿಕದಲ್ಲಿಯೇ ಚಿಪ್​​ಗಳನ್ನು ತಯಾರಿಸಿದರೆ, ಈ ಸುಂಕದಿಂದ ವಿನಾಯಿತಿ ನೀಡುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ. ಈ ಕ್ರಮವು, ಡಿಜಿಟಲ್ ಯುಗಕ್ಕೆ ಅತ್ಯಗತ್ಯವಾಗಿರುವ ಎಲೆಕ್ಟ್ರಾನಿಕ್ಸ್, ವಾಹನಗಳು, ಗೃಹೋಪಯೋಗಿ ವಸ್ತುಗಳು ಮತ್ತು ಇತರ ಉತ್ಪನ್ನಗಳ ಬೆಲೆ ಏರಿಕೆಯ ಭೀತಿಯನ್ನು ಸೃಷ್ಟಿಸಿದೆ.

ಆಪಲ್ ಸಿಇಒ ಟಿಮ್ ಕುಕ್ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಟ್ರಂಪ್, "ನಾವು ಚಿಪ್​​ಗಳನ್ನು ಮತ್ತು ಸೆಮಿಕಂಡಕ್ಟರ್​ಗಳ ಮೇಲೆ ಸುಮಾರು ಶೇ. 100ರಷ್ಟು ಸುಂಕವನ್ನು ವಿಧಿಸಲಿದ್ದೇವೆ. ಆದರೆ ನೀವು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಉತ್ಪಾದನೆ ಮಾಡುತ್ತಿದ್ದರೆ, ನಿಮಗೆ ಯಾವುದೇ ಶುಲ್ಕವಿರುವುದಿಲ್ಲ," ಎಂದು ಹೇಳಿದರು.

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಕಂಪ್ಯೂಟರ್ ಚಿಪ್​ಗಳ ಕೊರತೆಯು ವಾಹನಗಳ ಬೆಲೆಯನ್ನು ಹೆಚ್ಚಿಸಿ, ಹಣದುಬ್ಬರಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿಯೇ ಚಿಪ್ ಉತ್ಪಾದನೆಯನ್ನು ಉತ್ತೇಜಿಸಲು ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕ್ರಮವು, ಹೆಚ್ಚು ಚಿಪ್​​ಗಳು ಮತ್ತು ಇತರ ಘಟಕಗಳನ್ನು ಅಮೆರಿಕದಲ್ಲಿಯೇ ತಯಾರಿಸಲು ಈಗಾಗಲೇ ಬೃಹತ್ ಆರ್ಥಿಕ ಬದ್ಧತೆಗಳನ್ನು ಮಾಡಿರುವ ಆ್ಯಪಲ್ ಮತ್ತು ಇತರ ಪ್ರಮುಖ ಟೆಕ್ ಕಂಪನಿಗಳಿಗೆ ಸಕಾರಾತ್ಮಕವಾಗಿದೆ ಎಂದು ಹೂಡಿಕೆದಾರರು ಭಾವಿಸಿದ್ದಾರೆ.

ಷೇರುಗಳ ಮೌಲ್ಯ ಹೆಚ್ಚಳ

ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ, ಪ್ರಮುಖ ಟೆಕ್ ಕಂಪನಿಗಳು ಅಮೆರಿಕದಲ್ಲಿ ಸುಮಾರು 1.5 ಟ್ರಿಲಿಯನ್ ಡಾಲರ್​ ಹೂಡಿಕೆ ಮಾಡುವ ಬದ್ಧತೆ ವ್ಯಕ್ತಪಡಿಸಿವೆ. ಇದರಲ್ಲಿ ಐಫೋನ್ ತಯಾರಕ ಆಪಲ್ ಕಂಪನಿಯೇ 600 ಡಾಲರ್ ಬಿಲಿಯನ್ ಹೂಡಿಕೆಯ ಭರವಸೆ ನೀಡಿದೆ. ಟ್ರಂಪ್ ಅವರ ಈ ಘೋಷಣೆಯ ನಂತರ, ಆಪಲ್, ಎನ್ವಿಡಿಯಾ ಮತ್ತು ಇಂಟೆಲ್​​ನಂಥ ಚಿಪ್ ತಯಾರಕ ಕಂಪನಿಗಳ ಷೇರು ಮೌಲ್ಯವು ಗಣನೀಯವಾಗಿ ಏರಿಕೆ ಕಂಡಿದೆ.

ಟ್ರಂಪ್ ಅವರ ಈ ಸುಂಕ ಆಧಾರಿತ ನೀತಿಯು, ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದ ನೀತಿಗಿಂತ ಸಂಪೂರ್ಣ ಭಿನ್ನವಾಗಿದೆ. ಬೈಡನ್ ಅವರು 2022ರಲ್ಲಿ ಜಾರಿಗೆ ತಂದಿದ್ದ 'ಚಿಪ್ಸ್ ಮತ್ತು ವಿಜ್ಞಾನ ಕಾಯ್ದೆ'ಯು, ಹೊಸ ಕಂಪ್ಯೂಟರ್ ಚಿಪ್ ಘಟಕಗಳನ್ನು ಸ್ಥಾಪಿಸಲು, ಸಂಶೋಧನೆಗೆ ಮತ್ತು ತರಬೇತಿಗೆ 50 ಬಿಲಿಯನ್​ ಡಾಲರ್​ಗಿಂತಲೂ ಹೆಚ್ಚು ಹಣಕಾಸಿನ ನೆರವು ಮತ್ತು ತೆರಿಗೆ ವಿನಾಯಿತಿಗಳನ್ನು ಒದಗಿಸಿತ್ತು. ಆದರೆ ಟ್ರಂಪ್, ಬೆದರಿಕೆ ತಂತ್ರದ ಮೂಲಕವೇ ಕಂಪನಿಗಳನ್ನು ದೇಶೀಯವಾಗಿ ಕಾರ್ಖಾನೆಗಳನ್ನು ತೆರೆಯುವಂತೆ ಒತ್ತಾಯಿಸುತ್ತಿದ್ದಾರೆ.

Tags:    

Similar News