Los Angeles wildfire: ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: ತುರ್ತು ಪರಿಸ್ಥಿತಿ ಘೋಷಣೆ, ಹಾಲಿವುಡ್ ಸೆಲೆಬ್ರಿಟಿಗಳ ಮನೆಗಳಿಗೆ ಬೆಂಕಿ
Los Angeles wildfire: ಕ್ಯಾಲಿಫೋರ್ನಿಯಾ ಕಂಡಿರುವ ಇತಿಹಾಸದ ಅತಿದೊಡ್ಡ ಕಾಡ್ಗಿಚ್ಚು ಇದಾಗಿದೆ. ಬೆಂಕಿ ನಂದಿಸಲು ನೀರಿನ ಅಭಾವ ಉಂಟಾಗಿರುವ ಜತೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯ ಕೊರತೆಯು ಸಂಕಷ್ಟವೂ ಎದುರಾಗಿದೆ.;
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಕಾಡ್ಗಿಚ್ಚು (Los Angeles wildfire) ಹಬ್ಬುತ್ತಿದೆ. ಬೃಹತ್ ಬೆಂಕಿಯ ಜ್ವಾಲೆಗೆ 5 ಮಂದಿ ಬಲಿಯಾಗಿದ್ದಾರೆ. ಕಾಡ್ಗಿಚ್ಚುಆಗಿರುವ ಪ್ರದೇಶದಿಂದ 70 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಈಟನ್ ಮತ್ತು ಹರ್ಸ್ಟ್ ಪ್ರದೇಶಗಳಲ್ಲಿ ವೇಗದಲ್ಲಿ ಗಾಳಿ ಬೀಸುತ್ತಿದ್ದು ಬೆಂಕಿ ನಿಯಂತ್ರಣ ಕಷ್ಟವಾಗುವ ಜತೆಗೆ ಇನ್ನಷ್ಟು ಪ್ರದೇಶಕ್ಕೆ ಹಬ್ಬುತ್ತಿದೆ.
ಕಾಡ್ಗಿಚ್ಚು ಹಾಲಿವುಡ್ ಕ್ಷೇತ್ರದ ಪ್ರಮುಖ ತಾರೆಯರು, ಗಾಯಕರು ಸೇರಿದಂತೆ ಸೆಲೆಬ್ರಿಟಿಗಳಿಗೂ ತಟ್ಟಿದೆ. ಅವರನ್ನು ಅಲ್ಲಿಂದ ಸ್ಥಳಾಂತರ ಮಾಡುವ ಯೋಜನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ ಆಡಳಿತವು ಈ ಪ್ರಾಂತ್ಯದಲ್ಲಿ “ಕಾಡ್ಗಿಚ್ಚು ತುರ್ತು ಪರಿಸ್ಥಿತಿ” ಘೋಷಿಸಿದೆ.
ಕ್ಯಾಲಿಫೋರ್ನಿಯಾ ಕಂಡಿರುವ ಇತಿಹಾಸದ ಅತಿದೊಡ್ಡ ಕಾಡ್ಗಿಚ್ಚು ಇದಾಗಿದೆ. ಬೆಂಕಿ ನಂದಿಸಲು ನೀರಿನ ಅಭಾವ ಉಂಟಾಗಿರುವ ಜತೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯ ಕೊರತೆಯು ಸಂಕಷ್ಟವೂ ಎದುರಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ.
ನಿವೃತ್ತಿ ಪಡೆದವರಿಗೆ ಬುಲಾವ್
ಬೆಂಕಿ ನಂದಿರುವ ಕಾರ್ಯಕ್ಕಾಗಿ ಅಗ್ನಿಶಾಮಕ ದಳದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದಂಥ ಸಿಬ್ಬಂದಿಯನ್ನು ಸಂಪರ್ಕಿಸಿ ನೆರವು ಕೋರಲಾಗುತ್ತದಿಎ. ಕ್ಯಾಲಿಫೋರ್ನಿಯಾ ಅಮೆರಿಕದ ಎರಡನೇ ಅತಿದೊಡ್ಡ ನಗರವಾಗಿದ್ದು ಇಲ್ಲಿನ ಅರಣ್ಯ ಬೆಂಕಿಯುಂಡೆಯಂತಾಗಿದೆ. ಅಡವಿಯ ಕಿಚ್ಚಿಗೆ ಕಟ್ಟಡಗಳು ಆಹುತಿಯಾಗಿವೆ. ಸಾವಿರಾರು ಜನರು ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ಹೋಗಿದ್ದಾರೆ. ಗಾಳಿಯೂ ಕಲುಷಿತಗೊಂಡಿದ್ದು ಕಡುಕಪ್ಪು ಹೊಗೆಯ ಹೊದಿಕೆ ಆವರಿಸಿದೆ.
ಹಾಲಿವುಡ್ ತಾರೆಯರ ಮನೆಗಳಿಗೆ ಬೆಂಕಿ
ಲಾಸ್ ಏಂಜಲೀಸ್‌ನಲ್ಲಿ ಸೆಲೆಬ್ರಿಟಿಗಳ ಐಷಾರಾಮಿ ಮನೆಗಳಿಗೆ. ಇಲ್ಲಿನ ಪೆಸಿಫಿಕ್ ಪ್ಯಾಲಿಸೇಡ್ಸ್ ಪ್ರದೇಶವು ದುಬಾರಿ ಬಂಗಲೆಗಳಿಂದ ಕೂಡಿದ್ದು ಹಾಲಿವುಡ್ ನಟರು, ಸಂಗೀತಗಾರರು, ಕಲಾವಿದರು ನೆಲೆಸಿದ್ದಾರೆ. ಗಾಳಿಯೊಂದಿಗೆ ಬರುವ ಬೆಂಕಿಯು ಶ್ರೀಮಂತರ ಮನೆಗಳನ್ನು ಸುಡುತ್ತಿವೆ. ಬೆಂಕಿಯ ಕೆನ್ನಾಲಿಗೆಯು ಸುಮಾರು 16,000 ಎಕರೆ ಪ್ರದೇಶವನ್ನು ವ್ಯಾಪಿಸಿದೆ. ಸಾವಿರಕ್ಕೂ ಹೆಚ್ಚು ಮನೆಗಳು, ಹೊರಗೆ ನಿಲ್ಲಿಸಿದ್ದ ಕೋಟ್ಯಂತರು ರೂಪಾಯಿ ಬೆಲೆಯ ಐಷಾರಾಮಿ ವಾಹನಗಳು ಸುಟ್ಟು ಕರಕಲಾಗಿವೆ.
ಕಾರ್ಯಕ್ರಮಗಳು ರದ್ದು
ಬೆಂಕಿಯ ಪ್ರತಾಪ ನಿಲ್ಲದ ಕಾರಣ ಈ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಲಾಗಿದೆ. ಜನರು ಆಗುತ್ತಿರುವ ಕಷ್ಟವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತೋಡಿಕೊಂಡಿದ್ದಾರೆ. ನಾನು ನನ್ನ ಮಕ್ಕಳು ಮತ್ತು ಸಾಕು ಪ್ರಾಣಿಗಳೊಂದಿಗೆ ಮನೆ ತೊರೆಯಬೇಕಾಯಿತು ಎಂದು ಗಾಯಕಿ ಮ್ಯಾಂಡಿ ಮೂರ್ ಅವರು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ʼಎಮ್ಮಿ ಪ್ರಶಸ್ತಿ ಪುರಸ್ಕೃತ ನಟ ಜೇಮ್ಸ್ ವುಡ್ಸ್ ಅವರು ತಮ್ಮ ಮನೆಯು ಬೆಂಕಿಗಾಹುತಿಯಾಗುತ್ತಿರುವ ವಿಡಿಯೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಬಿಕ್ಕಳಿಸಿದ್ದಾರೆ. ಆಸ್ಕರ್ ವಿಜೇತ ನಟ ಜೇಮಿ ಲೀ ಕರ್ಟಿಸ್ ಅವರೂ ಕಾಡ್ಗಿಚ್ಚಿನ ತೀವ್ರತೆ ಎಷ್ಟಿದೆ ಎಂಬುದನ್ನು ಹೇಳುತ್ತಾ ಆಗುತ್ತಿರುವ ಅನಾಹುಗಳನ್ನು ಬಣ್ಣಿಸಿದ್ದಾರೆ .
ಅಧ್ಯಕ್ಷ ಬೈಡೆನ್ ಭೇಟಿ
ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಲಾಸ್ ಏಂಜಲೀಸ್ ಗೆ ಭೇಟಿ ನೀಡಿದ್ದು, ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಂತೆ ಸೂಚನೆ ನೀಡಿದ್ದಾರೆ.