ಗಾಜಾದಲ್ಲಿ ಮತ್ತೆ ಇಸ್ರೇಲಿ ಬಾಂಬ್ ದಾಳಿ: 48 ಪ್ಯಾಲೆಸ್ಟೀನಿಯರ ಹತ್ಯೆ

ವೆಸ್ಟ್ ಬ್ಯಾಂಕ್‌ನಲ್ಲಿ ಮೂವರು ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಇಸ್ರೇಲಿಯನ್ ಪ್ರಜೆ ಮೃತಪಟ್ಟಿದ್ದು, ಕನಿಷ್ಠ ಐವರು ಗಾಯಗೊಂಡಿದ್ದಾರೆ

Update: 2024-02-23 10:34 GMT
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿಯೂ ಉದ್ವಿಗ್ನತೆ ಹೆಚ್ಚುತ್ತಿದ್ದು, ಗುರುವಾರ ಬೆಳಗ್ಗೆ ಮೂವರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. | ಫೈಲ್ ಫೋಟೋ

ಜೆರುಸಲೇಂ, ಫೆ 22: ದಕ್ಷಿಣ ಮತ್ತು ಮಧ್ಯ ಗಾಜಾದಲ್ಲಿ ರಾತ್ರಿಯಿಡೀ ಇಸ್ರೇ‌ಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ‌ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಯುರೋಪಿಯನ್ ರಾಜತಾಂತ್ರಿಕರು ಗುರುವಾರ ಕದನ ವಿರಾಮಕ್ಕೆ ಮತ್ತೆ ಒತ್ತಾಯಿಸಿದ್ದು, ಗಾಜಾ ಪಟ್ಟಿಯಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಆತಂಕವು ಹೆಚ್ಚುತ್ತಿದೆ.

ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು, ಚೆಕ್‌ಪಾಯಿಂಟ್ ಬಳಿಯ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಮೂವರು ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಇಸ್ರೇಲಿಯನ್ ಪ್ರಜೆ ಮೃತಪಟ್ಟಿದ್ದು, ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದ್ದು, ಮೂರನೆಯವನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.‌

ಇಸ್ರೇಲ್ ತನ್ನ ಒತ್ತೆಯಾಳು ಸಮಾಲೋಚಕರ "ಅಧಿಕಾರವನ್ನು ವಿಸ್ತರಿಸುತ್ತದೆ" ಎಂದು ಇಸ್ರೇಲ್ ರಕ್ಷಣಾ ಮಂತ್ರಿ ಯೋವ್‌ ಗಲ್ಲಾಂಟ್ (Yoav Gallant) ಗುರುವಾರ ಹೇಳಿದರು. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದಕ್ಕೆ ಮಾತುಕತೆ ನಡೆಸುತ್ತಿರುವ ಅಂತಾರಾಷ್ಟ್ರೀಯ ಪ್ರಯತ್ನಗಳ ನಡುವೆ ಇದು ಸಣ್ಣ ಪ್ರಗತಿಯ ಸೂಚನೆಯನ್ನು ನೀಡಿದೆ.

ಆದರೆ ಗಾಜಾದಲ್ಲಿ ಉಳಿದಿರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪದಿದ್ದರೆ, ಮುಂಬರುವ ಮುಸ್ಲಿಂ ಪವಿತ್ರ ರಂಜಾನ್ ತಿಂಗಳಲ್ಲಿ ಇಸ್ರೇಲ್ ಜನನಿಬಿಡ ದಕ್ಷಿಣ ನಗರವಾದ ರಫಾದಲ್ಲಿ ಭೂ ಆಕ್ರಮಣವನ್ನು ಪ್ರಾರಂಭಿಸುತ್ತದೆ ಎಂದು ಇಸ್ರೇಲ್‌ನ ಯುದ್ಧ ಕ್ಯಾಬಿನೆಟ್ ಸದಸ್ಯ ಬೆನ್ನಿ ಗ್ಯಾಂಟ್ಜ್ ಬುಧವಾರ ಎಚ್ಚರಿಸಿದ್ದಾರೆ.

ಇಸ್ರೇಲ್‌ನ ಯುದ್ಧವು 2.3 ಮಿಲಿಯನ್ ಜನಸಂಖ್ಯೆಯ ಗಾಜಾದಲ್ಲಿ ಸುಮಾರು 80% ರಷ್ಟು ಜನರನ್ನು ನಿರ್ವಸಿತರನ್ನಾಗಿ ಮಾಡಿದೆ. ದಕ್ಷಿಣಕ್ಕೆ ಸ್ಥಳಾಂತರವಾಗಲು ಹೆಚ್ಚಿನ ಇಸ್ರೇಲ್‌ ಪಡೆ ನೀಡಿರುವ ಆದೇಶಗಳಿಂದ ಸುಮಾರು 1.5 ಮಿಲಿಯನ್ ಜನರು ಈಜಿಪ್ಟ್‌ನ ಗಡಿಯ ಸಮೀಪವಿರುವ ರಫಾದಲ್ಲಿ ಬಂದು ಸೇರಿದ್ದಾರೆ.

ಅಕ್ಟೋಬರ್ 7 ರಂದು ಹಮಾಸ್ ನೇತೃತ್ವದ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್‌ಗೆ ನುಗ್ಗಿ ಸುಮಾರು 1,200 ಜನರನ್ನು ಕೊಂದು ಸುಮಾರು 250 ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡ ನಂತರ ಯುದ್ಧ ಪ್ರಾರಂಭವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್‌ ನಡೆಸಿರುವ ದಾಳಿಯಲ್ಲಿ ಬಹುತೇಕ ಪೆಲೆಸ್ಟೇನ್‌ ಪ್ರದೇಶಗಳು ನಾಶವಾಗಿವೆ. 

Tags:    

Similar News