Gaza Airstrikes: ಗಾಜಾದ ಮೇಲೆ ಇಸ್ರೇಲ್​ನಿಂದ ವೈಮಾನಿಕ ದಾಳಿ ; 200 ಮಂದಿ ಸಾವು

Gaza Airstrikes :ರಂಜಾನ್ ಪವಿತ್ರ ಮಾಸದ ವೇಳೆಯಲ್ಲಿ ಗಾಜಾ ನಗರ, ದೇರ್ ಅಲ್ ಬಲಾಹ್, ಖಾನ್ ಯೂನಿಸ್ ಮತ್ತು ರಫಾಹ್ ಸೆಂಟ್ರಲ್ ಪ್ರದೇಶಗಳ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದೆ.;

Update: 2025-03-18 05:51 GMT

ಇಸ್ರೇಲ್​ ದಾಳಿಯಿಂದ ಮೃತಪಟ್ಟ ವ್ಯಕ್ತಿಯನ್ನು ಸುತ್ತುವರಿದಿರುವ ನಾಗರಿಕರು.

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಕದನವಿರಾಮ ಘೋಷಿಸಿದ್ದರೂ, ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ದಾಳಿ ಮುಂದುವರಿಸಿದೆ. ಮಂಗಳವಾರ ಬೆಳಗ್ಗೆ ಇಸ್ರೇಲ್ ಗಾಜಾ ಮೇಲೆ ಭೀಕರ ವಾಯುದಾಳಿ ನಡೆಸಿದ್ದು, ಸುಮಾರು 200 ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನ್ ಆರೋಗ್ಯ ವಿಭಾಗ ವರದಿ ಮಾಡಿದೆ. ಕದನವಿರಾಮದ ನಂತರ ಸ್ವಲ್ಪ ಸಮಯದವರೆಗೆ ಶಾಂತಿ ನೆಲೆಸಿದ್ದ ಗಾಜಾ ಪಟ್ಟಿಯಲ್ಲಿ ಮತ್ತೆ ರಕ್ತಪಾತ ಆರಂಭವಾಗಿದ್ದು ರಂಜಾನ್ ತಿಂಗಳಲ್ಲಿ ಅಶಾಂತಿ ಸೃಷ್ಟಿಯಾಗಿದೆ.

ರಂಜಾನ್ ಪವಿತ್ರ ಮಾಸದ ವೇಳೆಯಲ್ಲಿ ಗಾಜಾ ನಗರ, ದೇರ್ ಅಲ್ ಬಲಾಹ್, ಖಾನ್ ಯೂನಿಸ್ ಮತ್ತು ರಫಾಹ್ ಸೆಂಟ್ರಲ್ ಪ್ರದೇಶಗಳ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸೇರಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೆ ಮುಂಚೆಯೇ ಇಸ್ರೇಲ್ ಭದ್ರತಾ ಪಡೆಗಳು (ಐಡಿಎಫ್) ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗುವುದಾಗಿ ಮಾಹಿತಿ ನೀಡಿದ್ದವು. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಜನವರಿ 19ರಂದು ಕದನವಿರಾಮ ಘೋಷಿಸಲಾಗಿತ್ತು. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಇಸ್ರೇಲ್ ಆ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿ ಮತ್ತೆ ದಾಳಿ ನಡೆಸಿದೆ.

ಈ ದಾಳಿಯ ಬಗ್ಗೆ ಇಸ್ರೇಲ್ ಸ್ಪಷ್ಟೀಕರಣ ನೀಡಿದೆ. "ಇಸ್ರೇಲ್​ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಹಮಾಸ್ ಉಗ್ರರಿಗೆ ಪದೇ ಪದೇ ಮನವಿ ಮಾಡಿದರೂ ಅವರು ತಿರಸ್ಕರಿಸುತ್ತಿದ್ದಾರೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ನೀಡಿದ ಪ್ರಸ್ತಾಪಗಳನ್ನು ಹಮಾಸ್ ಉಗ್ರರು ತಿರಸ್ಕರಿಸಿದ್ದಾರೆ. ಹೀಗಾಗಿ, ಈ ದಾಳಿ ಅನಿವಾರ್ಯವಾಗಿದೆ" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ದಾಳಿಗೆ ಮುಂಚೆಯೇ ಇಸ್ರೇಲ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.

ಹಮಾಸ್​ನಿಂದ ಖಂಡನೆ

ಇಸ್ರೇಲ್​​ನ "ಅಪ್ರಚೋದಿತ ದಾಳಿ " ಎಂದು ಹಮಾಸ್ ತನ್ನ ಹೇಳಿಕೆಯಲ್ಲಿ ಖಂಡನೆ ವ್ಯಕ್ತಪಡಿಸಿದೆ. ನೆತನ್ಯಾಹು ಕದನ ವಿರಾಮ ಒಪ್ಪಂದ ಉಲ್ಲಂಘಿಸಿದ್ದಾರೆ ಮತ್ತು ಒತ್ತೆಯಾಳುಗಳನ್ನು ಜೀವವನ್ನು ಪಣಕ್ಕೆ ಒಡ್ಡಿದ್ದಾರೆ ಎಂದು ಹಮಾಸ್ ಆರೋಪಿಸಿದೆ.ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಇಸ್ರೇಲ್ ಅನ್ನು ಸಂಪೂರ್ಣವಾಗಿ ಹೊಣೆಗಾರರನ್ನಾಗಿ ಮಾಡಬೇಕು ಎಂದು ಕರೆಕೊಟ್ಟಿದೆ.

ಕಾರ್ಯಾಚರಣೆಯ ಮಾತನಾಡಿದ ಇಸ್ರೇಲಿ ಅಧಿಕಾರಿ, ಇಸ್ರೇಲ್ ಹಮಾಸ್ ಮಿಲಿಟರಿ, ನಾಯಕರು ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುತ್ತಿದೆ. ವಾಯು ದಾಳಿಯನ್ನು ಮೀರಿ ಕಾರ್ಯಾಚರಣೆ ವಿಸ್ತರಿಸಲು ಯೋಜಿಸಿದ್ದೇವೆ ಎಂದು ಹೇಳಿದರು.   

Tags:    

Similar News