ಇರಾನ್​​ನಿಂದ ಸೇಡಿನ ಶಪಥ: ಅಮೆರಿಕ ನೌಕಾಪಡೆಗೆ ದಾಳಿ, ಹರ್ಮುಜ್ ಜಲಸಂಧಿ ಬಂದ್‌ ಎಚ್ಚರಿಕೆ ನೀಡಿದ ಖಮೇನಿ!

ಖಮೇನಿ ಅವರ ಪ್ರತೀಕಾರದ ಸಂಕಲ್ಪಕ್ಕೆ ಪುಷ್ಟಿ ನೀಡುವಂತೆ, ಅವರ ಪ್ರತಿನಿಧಿ ಮತ್ತು ಕೇಹಾನ್ ಪತ್ರಿಕೆಯ ಸಂಪಾದಕ ಹೊಸೈನ್ ಶರಿಯತ್ಮದಾರಿ ತಕ್ಷಣದ ಸೇಡಿನ ಕ್ರಮಕ್ಕೆ ಕರೆ ನೀಡಿದ್ದಾರೆ.;

Update: 2025-06-22 09:04 GMT

ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕಾ ರಾತ್ರೋರಾತ್ರಿ ನಡೆಸಿದ ಮಿಂಚಿನ ದಾಳಿಗೆ ಇರಾನ್‌ ಕೆಂಡಾಮಂಡಲವಾಗಿದೆ. ಫೋರ್ಡೊ, ಇಸ್ಫಾಹಾನ್, ಮತ್ತು ನತಾಂಜ್‌ನಂತಹ ಪ್ರಮುಖ ಪರಮಾಣು ತಾಣಗಳ ಮೇಲೆ ಅಮೆರಿಕಾದ ಬಿ-2 ಸ್ಟೆಲ್ತ್ ಬಾಂಬರ್‌ಗಳು ಅಬ್ಬರಿಸಿದ ಬೆನ್ನಲ್ಲೇ, ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಮೆರಿಕದ ವಿರುದ್ಧ ಪ್ರಬಲ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ. "ಅಮೆರಿಕನ್ನರು ಈಗ ತಾವು ಹಿಂದೆಂದೂ ಎದುರಿಸದ ದೊಡ್ಡ ದಾಳಿ ಹಾಗೂ ಭಾರಿ ಹಾನಿಯನ್ನು ಎದುರಿಸಲು ಸಿದ್ಧರಾಗಲಿ" ಎಂದು ಖಮೇನಿ ಗುಡುಗಿದ್ದಾರೆ. ಇದು ಈಗಾಗಲೇ ಉದ್ವಿಗ್ನಗೊಂಡಿರುವ ಮಧ್ಯಪ್ರಾಚ್ಯದಲ್ಲಿ ಭೀಕರ ಯುದ್ಧದ ಕಾರ್ಮೋಡವನ್ನು ಇನ್ನಷ್ಟು ದಟ್ಟವಾಗಿಸಿದೆ.

ಖಮೇನಿ ಅವರ ಪ್ರತೀಕಾರದ ಸಂಕಲ್ಪಕ್ಕೆ ಪುಷ್ಟಿ ನೀಡುವಂತೆ, ಅವರ ಪ್ರತಿನಿಧಿ ಮತ್ತು ಕೇಹಾನ್ ಪತ್ರಿಕೆಯ ಸಂಪಾದಕ ಹೊಸೈನ್ ಶರಿಯತ್ಮದಾರಿ ತಕ್ಷಣದ ಸೇಡಿನ ಕ್ರಮಕ್ಕೆ ಕರೆ ನೀಡಿದ್ದಾರೆ. "ಈಗ ನಮ್ಮ ಸರದಿ. ವಿಳಂಬವಿಲ್ಲದೆ ಕಾರ್ಯನಿರ್ವಹಿಸಬೇಕು. ಮೊದಲ ಹೆಜ್ಜೆಯಾಗಿ, ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ ಮೇಲೆ ಕ್ಷಿಪಣಿ ದಾಳಿ ನಡೆಸಬೇಕು. ಇದೇ ವೇಳೆ, ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್‌ನ ಹಡಗುಗಳಿಗೆ ಹರ್ಮುಜ್ ಜಲಸಂಧಿಯನ್ನು ಮುಚ್ಚಬೇಕು" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಕರೆ ಟೆಹ್ರಾನ್‌ನಲ್ಲಿ ತೀವ್ರ ಸೇನಾ ಪ್ರತಿಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ.

ವಿಶ್ವದ ಶೇ.20ಕ್ಕಿಂತ ಹೆಚ್ಚು ಕಚ್ಚಾ ತೈಲ ಸಾಗಣೆಗೆ ನಿರ್ಣಾಯಕ ಮಾರ್ಗವಾಗಿರುವ ಹರ್ಮುಜ್ ಜಲಸಂಧಿಯನ್ನು ಮುಚ್ಚುವ ಯಾವುದೇ ಪ್ರಯತ್ನವು ಜಾಗತಿಕ ತೈಲ ಬೆಲೆಗಳನ್ನು ಗಗನಕ್ಕೇರಿಸಬಹುದು, ಇಂಧನ ಮಾರುಕಟ್ಟೆಗಳಿಗೆ ತೀವ್ರ ಆಘಾತ ನೀಡಬಹುದು. ಈ ಎಚ್ಚರಿಕೆಯು ಜಾಗತಿಕ ಮಾರುಕಟ್ಟೆಗಳು ಮಾತ್ರವಲ್ಲದೆ, ಭಾರತ ಸೇರಿದಂತೆ ಇಂಧನ ಆಮದಿಗಾಗಿ ಈ ಮಾರ್ಗವನ್ನು ಅವಲಂಬಿಸಿರುವ ಅನೇಕ ದೇಶಗಳಲ್ಲಿ ಆತಂಕ ಮೂಡಿಸಿದೆ.

ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಗಳನ್ನು "ಅತ್ಯದ್ಭುತ ಸೇನಾ ಯಶಸ್ಸು" ಎಂದು ಕೊಂಡಾಡಿದ್ದಾರೆ. ಆದರೆ, ಇರಾನ್‌ನಿಂದ ಯಾವುದೇ ಪ್ರತೀಕಾರದ ಕ್ರಮವನ್ನು "ಅಗಾಧ ಶಕ್ತಿಯಿಂದ" ಎದುರಿಸಲಾಗುವುದು ಎಂದೂ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಈ ದಾಳಿಗಳನ್ನು "ಯುದ್ಧದ ಕೃತ್ಯ" ಎಂದು ಬಲವಾಗಿ ಖಂಡಿಸಿದ್ದು, ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಬೆಳೆದಿರುವ ಈ ಉದ್ವಿಗ್ನ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಜಾಗತಿಕ ಸಮುದಾಯದ ಕುತೂಹಲಕ್ಕೆ ಕಾರಣವಾಗಿದೆ. 

Tags:    

Similar News