ಅಮೆರಿಕದಲ್ಲಿ ಅಂಗಡಿಗೆ ನುಗ್ಗಿ ಗುಂಡಿನ ದಾಳಿ: ಭಾರತೀಯ ವ್ಯಕ್ತಿ ಮತ್ತು ಮಗಳ ದಾರುಣ ಹತ್ಯೆ!
ಅಂಗಡಿ ತೆರೆಯುತ್ತಿದ್ದ ಸಮಯದಲ್ಲೇ ಈ ದಾಳಿ ನಡೆದಿದ್ದು, ಸ್ಥಳದಲ್ಲೇ ಪ್ರದೀಪ್ ಪಟೇಲ್ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಊರ್ಮಿ ಪಟೇಲ್ ಆಸ್ಪತ್ರೆಗೆ ಕರೆದೊಯ್ಯಲ್ಪಟ್ಟರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.;
ಅಮೆರಿಕದಲ್ಲಿ ಭಾರತೀಯ ಮೂಲದವರ ವಿರುದ್ಧ ನಡೆಯುತ್ತಿರುವ ಹತ್ಯೆಗಳ ಸರಣಿಗೆ ಇನ್ನೊಂದು ಘಟನೆ ಸೇರ್ಪಡೆಗೊಂಡಿದೆ. ವರ್ಜೀನಿಯಾ ರಾಜ್ಯದ ಅಕೊಮ್ಯಾಕ್ ಕೌಂಟಿಯೊಂದರ ಅಂಗಡಿಗೆ ನುಗ್ಗಿದ ದುಷ್ಕರ್ಮಿಯೊಬ್ಬ, ಭಾರತೀಯ ಮೂಲದ 56 ವರ್ಷದ ಪ್ರದೀಪ್ ಪಟೇಲ್ ಮತ್ತು ಅವರ 24 ವರ್ಷದ ಮಗಳು ಊರ್ಮಿ ಎಂಬುವರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಭಾರಿ ಆತಂಕ ಮೂಡಿಸಿದೆ.
ಅಂಗಡಿ ತೆರೆಯುತ್ತಿದ್ದ ಸಮಯದಲ್ಲೇ ಈ ದಾಳಿ ನಡೆದಿದ್ದು, ಸ್ಥಳದಲ್ಲೇ ಪ್ರದೀಪ್ ಪಟೇಲ್ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಊರ್ಮಿ ಪಟೇಲ್ ಆಸ್ಪತ್ರೆಗೆ ಕರೆದೊಯ್ಯಲ್ಪಟ್ಟರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಆರೋಪಿ ಬಂಧನ
ಘಟನೆ ಸಂಬಂಧ ಪೊಲೀಸರು ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಎಂಬಾತನನ್ನು ಬಂಧಿಸಿದ್ದು, ಮುಂಜಾನೆ ಮದ್ಯ ಖರೀದಿಸಲು ಅಂಗಡಿಗೆ ಬಂದು, ಮದ್ಯ ದೊರಕದ ಕಾರಣ ಆಕ್ರೋಶಗೊಂಡು ಗುಂಡು ಹಾರಿಸಿದ್ದಾನೆ. ಅಂಗಡಿ ಮುಚ್ಚಿದ್ದೇಕೆ ಎಂದು ಪ್ರಶ್ನಿಸಿ , ಉತ್ತರ ಕೇಳುವ ಮುನ್ನವೇ ಏಕಾಏಕಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಗುಜರಾತ್ ಮೂಲದ ಕುಟುಂಬ
ಹತ್ಯೆಗೀಡಾದವರು ಗುಜರಾತ್ ರಾಜ್ಯದ ಮೆಹ್ಸಾನಾ ಜಿಲ್ಲೆಗೆ ಸೇರಿದವರು. ಪ್ರದೀಪ್ ಪಟೇಲ್ ಅವರು ಪತ್ನಿ ಹನ್ಸಾಬೆನ್ ಹಾಗೂ ಮಗಳು ಊರ್ಮಿಯೊಂದಿಗೆ ಆರು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಸ್ಥಳೀಯವಾಗಿ ಅವರ ಸಂಬಂಧಿ ಪರೇಶ್ ಪಟೇಲ್ ಅವರ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಕುಟುಂಬದ ಆಕ್ರೋಶ
ಪರೇಶ್ ಪಟೇಲ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ದುಷ್ಕರ್ಮಿಯ ಕ್ರೌರ್ಯಕ್ಕೆ ನನ್ನ ಕುಟುಂಬದ ಇಬ್ಬರು ಬಲಿಯಾದರು. ನನ್ನ ಸೋದರಸಂಬಂಧಿಯ ಪತ್ನಿ ಮತ್ತು ಅವರ ತಂದೆ ಪ್ರತಿದಿನದಂತೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಪರಿಚಿತ ವ್ಯಕ್ತಿ ಬಂದು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ,” ಎಂದು ಬೇಸರ ತೋಡಿಕೊಂಡಿದ್ದಾರೆ.
ಪ್ರದೀಪ್ ಪಟೇಲ್ ದಂಪತಿಗೆ ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಕೆನಡಾದಲ್ಲಿ, ಮತ್ತೊಬ್ಬರು ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಘಟನೆಯ ಸುದ್ದಿ ತಿಳಿದ ಗ್ರಾಮಸ್ಥರು ಹಾಗೂ ಕುಟುಂಬದವರು ಸಾಮಾಜಿಕ ಮಾಧ್ಯಮ ಮತ್ತು ಟಿವಿ ಚಾನೆಲ್‌ಗಳ ಮೂಲಕ ತಿಳಿದು ಬೆಚ್ಚಿಬಿದ್ದಿದ್ದಾರೆ.
ಪ್ರದೀಪ್ ಪಟೇಲ್ ಅವರ ಚಿಕ್ಕಪ್ಪ ಚಂದು ಪಟೇಲ್, “ಅವರು ಸುಮಾರು 6–7 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಅವರೂ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ,” ಎಂದು ದುಃಖ ವ್ಯಕ್ತಪಡಿಸಿದರು. .