Trump 2.0: ಟ್ರಂಪ್ ಆಡಳಿತ ಬಳಗ ಸೇರಿದ 3 ಭಾರತೀಯರು; ಒಬ್ಬರು ಬೆಂಗಳೂರಿನವರು
Trump 2.0: ಟ್ರಂಪ್ ಆಡಳಿತ ಪರ ಒಲವು ಹೊಂದಿರುವ ಬೆಂಗಳೂರು ಮೂಲದ ಸೌರಭ್ ಶರ್ಮಾ, ರಿಪಬ್ಲಿಕ್ ಪಕ್ಷದ ಅಭಿಯಾನದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.;
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump 2.0) ಒಂದು ಕಡೆ ವಲಸೆ ನೀತಿಯ ವಿರುದ್ಧ ಸಮರ ಸಾರುತ್ತಿದ್ದಾರೆ. ಇನ್ನೊಂದು ಕಡೆ ಭಾರತದಿಂದ ವಲಸೆ ಹೋಗಿ ನೆಲೆ ನಿಂತಿರುವ ಬುದ್ಧಿವಂತರನ್ನು ತಮ್ಮ ಆಡಳಿತಾತ್ಮಕ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇತ್ತೀಚಿನ ಬೆಳವಣಿಗೆಯಲ್ಲಿ ಮೂವರು ಭಾರತೀಯ ಮೂಲದ ಅಮೆರಿಕನ್ನರನ್ನು ಪ್ರಮುಖ ಕರ್ತವ್ಯಗಳಿಗೆ ನೇಮಿಸಿದ್ದಾರೆ. ರಿಕಿ ಗಿಲ್ ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್ಎಸ್‌ಸಿ) ಹಿರಿಯ ನಿರ್ದೇಶಕರಾಗಿ ನೇಮಕಗೊಂಡಿದ್ದು ದಕ್ಷಿಣ ಮತ್ತು ಮಧ್ಯ ಏಷ್ಯಾಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ. ಬೆಂಗಳೂರು ಮೂಲದ ಸೌರಭ್ ಶರ್ಮಾ ಅವರನ್ನು ಅಧ್ಯಕ್ಷೀಯ ಸಿಬ್ಬಂದಿ ಕಚೇರಿಗೆ ನೇಮಕ ಮಾಡಲಾಗಿದೆ. ಇನ್ನು ಮಾಜಿ ಪತ್ರಕರ್ತ ಕುಶ್ ದೇಸಾಯಿ ಅವರು ಶ್ವೇತಭವನದ ಸಂವಹನ ಉಪ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.
ರಿಕಿ ಗಿಲ್
ಅಂತರರಾಷ್ಟ್ರೀಯ ಸಂಬಂಧಗಳ ತಜ್ಞ ರಿಕಿ ಗಿಲ್ ರಾಷ್ಟ್ರೀಯ ಭದ್ರತಾ ಮಂಡಳಿಗೆ (ಎನ್ಎಸ್‌ಸಿ) ಸೇರ್ಪಡೆಗೊಂಡಿದ್ದಾರೆ. ಟ್ರಂಪ್ ಮೊದಲ ಅವಧಿಯಲ್ಲಿ ಅವರು ರಷ್ಯಾ ಮತ್ತು ಯುರೋಪಿಯನ್ ಇಂಧನ ಭದ್ರತಾ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಬ್ಯೂರೋ ಆಫ್ ಓವರ್‌ಸೀಸ್ ಬಿಲ್ಡಿಂಗ್ಸ್ ಆಪರೇಷನ್ಸ್‌ನ ಹಿರಿಯ ಸಲಹೆಗಾರರಾಗಿದ್ದರು.
ಟ್ರಂಪ್ ಅವಧಿ ಮುಗಿದ ಬಳಿಕ ಗಿಲ್ ಕ್ಯಾಪಿಟಲ್ ಗ್ರೂಪ್‌ನ ಸಲಹೆಗಾರರಾಗಿದ್ದರು. ಟಿಸಿ ಎನರ್ಜಿಗೆ ಯುರೋಪಿಯನ್ ಮತ್ತು ಏಷ್ಯನ್ ಇಂಧನದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಟ್ರಂಪ್ ಹಸಿರು ನಿಶಾನೆ ತೋರಿದ ಈ ಯೋಜನೆಯನ್ನು ಜೋ ಬೈಡನ್ ತಡೆದಿದ್ದರು.
ನ್ಯೂಜೆರ್ಸಿಯ ಲೋಡಿಯಲ್ಲಿ ಜನಿಸಿದ ಗಿಲ್ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ವುಡ್ರೋ ವಿಲ್ಸನ್ ಸ್ಕೂಲ್ ಆಫ್ ಪಬ್ಲಿಕ್ ಆಂಡ್ ಇಂಟರ್‌ನ್ಯಾಷನಲ್ ಅಫೇರ್ಸ್‌ನಲ್ಲಿ ಪದವಿ ಹಾಗೂ ಬರ್ಕ್‌ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.
ಕುಶ್ ದೇಸಾಯಿ
ಕುಶ್ ದೇಸಾಯಿ ರಿಪಬ್ಲಿಕನ್ ಪಕ್ಷಕ್ಕೆ ಸಂಬಂಧಿಸಿದ ಹಲವು ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2024ರ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ಉಪ ಸಂವಹನ ನಿರ್ದೇಶಕರಾಗಿದ್ದರು. ಇದಕ್ಕೂ ಮೊದಲು ಅವರು ರಿಪಬ್ಲಿಕನ್ ಪಾರ್ಟಿ ಆಫ್ ಅಯೋವಾದ ಸಂವಹನ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ದೇಸಾಯಿ ಅವರು ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯಲ್ಲಿ ಸಂವಹನ ನಿರ್ದೇಶಕರಾಗಿದ್ದರು. ಪೆನ್ಸಿಲ್ವೇನಿಯಾ ಸೇರಿದಂತೆ ನಿರ್ಣಾಯಕ ರಾಜ್ಯಗಳಲ್ಲಿ ಪಕ್ಷದ ಗೆಲುವಿನ ರಣತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸೌರಭ್ ಶರ್ಮಾ
ಬೆಂಗಳೂರು ಮೂಲದ ಸೌರಭ್ ಶರ್ಮಾ ಇತ್ತೀಚೆಗೆ ಸಿಬ್ಬಂದಿ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಸಂಪ್ರದಾಯವಾದಿ ಸಂಘಟನೆಯಾದ ಅಮೆರಿಕನ್ ಮೊಮೆಂಟ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2019ರಲ್ಲಿ ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಜೀವರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದಾಗ ಶ್ವೇತಭವನಕ್ಕೆ 10 ವಿದ್ಯಾರ್ಥಿಗಳನ್ನು ಸಂವಾದಕ್ಕೆ ಕರೆಯಲಾಗಿತ್ತು. ಅದರಲ್ಲಿ ಸೌರಭ್ ಕೂಡ ಒಬ್ಬರಾಗಿದ್ದರು.