ಚೀನಾದಲ್ಲಿ ಹೊಸ ವೈರಸ್ | ಎಚ್ಎಂಪಿವಿ ಹೆಚ್ಚಳ; ಸೋಂಕು ತಡೆಯಲು ಏನು ಮಾಡಬೇಕು?
ಎಚ್ಎಂಪಿವಿ ಎಲ್ಲಾ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ವಿಶೇಷವಾಗಿ ಚಿಕ್ಕ ಮಕ್ಕಳು, ವಯಸ್ಕರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸಮಸ್ಯೆ ಕಂಡು ಬರುತ್ತಿದೆ;
ಕೋವಿಡ್ -19 ಪರಿಣಾಮಗಳು ನಿಧಾನವಾಗಿ ತಗ್ಗುತ್ತಿರುವ ನಡುವೆ ಚೀನಾದಲ್ಲಿ ಹೊಸ ವೈರಸ್ ಕಂಡು ಬಂದಿದೆ. ಎಚ್‌ಎಂಪಿವಿ (ಹ್ಯೂಮನ್ ಮೆಟಾನ್ಯುಮೊವೈರಸ್) ಎಂದು ಕರೆಯುವ ಈ ವೈರಸ್ ಕೊರೊನಾ ಮಾದರಿಯ ಲಕ್ಷಣಗಳನ್ನೇ ಹೊಂದಿದ್ದು ಅಷ್ಟೇ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಹೊಸ ಮಾದರಿಯ ವೈರಸ್ ಎದುರಿಸಲು ಚೀನಾ ಸರ್ಕಾರವು ತಪಾಸಣೆ, ಪತ್ತೆ ಮತ್ತು ಪ್ರತ್ಯೇಕ ಪ್ರೊಟೊಕಾಲ್‌ಗಳನ್ನು ಜಾರಿ ಮಾಡಿದೆ.
ಅಪರಿಚಿತ ನ್ಯುಮೋನಿಯಾ ಚೀನಾ ಸರ್ಕಾರವು ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೆ ತರುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಕೋವಿಡ್ -19 ಮೊದಲು ಉಂಟಾದ ಅನಾಹುತ ತಡೆಯಲು ವೈಫಲ್ಯ ಎದುರಿಸಿದ್ದ ಕಾರಣ ಈ ಬಾರಿ ಹೆಚ್ಚಿನ ಸಿದ್ಧತೆ ನಡೆಸಲು ಅಲ್ಲಿನ ಸರ್ಕಾರ ಸಜ್ಜಾಗಿದೆ.
ದೃಢೀಕರಿಸದ ವೀಡಿಯೊಗಳು
ಹೊಸ ವೈರಸ್‌ನಿಂದಾಗಿ ಆಸ್ಪತ್ರೆಗಳು ರೋಗಿಗಳಿಂದ ಕಿಕ್ಕಿರಿದಿರುವುದನ್ನು ತೋರಿಸುವ ಆತಂಕಕಾರಿ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದಾಗ್ಯೂ, ಇವು ದೃಢೀಕರಿಸದ ವೀಡಿಯೊ ಎಂದು ಹೇಳಲಾಗುತ್ತಿದ.ೆ ಚೀನಾ ಸರ್ಕಾರ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಹೊಸ ವೈರಸ್ ಏಕಾಏಕಿ ದೃಢಪಡಿಸಿಲ್ಲ.
ಎಚ್‌ಎಂಪಿವಿ ಎಂದರೇನು?
ಹ್ಯೂಮನ್ ಮೆಟಾನ್ಯಮೊವೈರಸ್ (ಎಚ್ಎಂಪಿವಿ) ಎಲ್ಲಾ ವಯಸ್ಸಿನವರಲ್ಲಿ ಶ್ವಾಸಕೋಶಕ್ಕೆ ಹಾನಿ ಉಂಟಾಗುವ ಸಮಸ್ಯೆಯಾಗಿದೆ. ವಿಶೇಷವಾಗಿ ಚಿಕ್ಕ ಮಕ್ಕಳು, ವಯಸ್ಕರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸಮಸ್ಯೆ ಹೆಚ್ಚು. 2001ರಲ್ಲಿ ಇದು ಮೊದಲ ಬಾರಿಗೆ ಪತ್ತೆಯಾಗಿತ್ತು. ಉಸಿರಾಟದ ಸೋಂಕು ಹೊಂದಿರುವ ಮಕ್ಕಳ ನಾಸೊಫಾರಿಂಜಿಯಲ್ ಆಸ್ಪಿರೇಟ್ ಮಾದರಿಗಳಲ್ಲಿ ಡಚ್ ಸಂಶೋಧಕರು ಈ ವೈರಸ್ ಪತ್ತೆ ಹಚ್ಚಿದ್ದರು.
ರೋಗಲಕ್ಷಣಗಳು ಯಾವುವು?
ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ ಚೀನಾ) ಪ್ರಕಾರ, ಕೆಮ್ಮು, ಜ್ವರ, ಮೂಗು ಕಟ್ಟುವುದು ಮತ್ತು ಉಬ್ಬಸ ಅಥವಾ ಉಸಿರಾಟದ ತೊಂದರೆ ಈ ಸೋಂಕಿನಲ್ಲಿ ಕಂಡು ಬರುತ್ತದೆ. ಗಂಭೀರವಾದರೆ ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು.
ಅಸ್ತಮಾ, ಕ್ರೋನಿಕ್ ಅಬ್ಸರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ಅಥವಾ ಎಂಫಿಸೆಮಾದಂತಹ ಸಮಸ್ಯೆ ಹೊಂದಿರುವವರು ತೀವ್ರ ಪರಿಣಾಮಗಳ ಎದುರಿಸುತ್ತಾರೆ ಎಂದು ಆರೋಗ್ಯ ಸಂಸ್ಥೆ ಗಮನಿಸಿದೆ.
ಸೋಂಕಿಗೆ ಒಳಗಾದ 3-6 ದಿನಗಳ ನಂತರ ಜನರು ಅದರ ರೋಗಲಕ್ಷಣಗಳನ್ನು ಅನುಭವಿಸಬಹುದು. ಅನಾರೋಗ್ಯದ ಅವಧಿಯು ಅದರ ತೀವ್ರತೆ ಅವಲಂಬಿಸಿ ಬದಲಾಗಬಹುದು.
ವೈರಸ್ ಹೇಗೆ ಹರಡುತ್ತದೆ?
ವೈರಸ್ ಪ್ರಾಥಮಿಕವಾಗಿ ಕೆಮ್ಮು ಅಥವಾ ಸೀನುವಾಗ ಈ ಸಮಸ್ಯೆಗಳು ಉಂಟಾಗಬಹುದು. ಸತತವಾಗಿ ಕಲುಷಿತ ವಾತಾವರಣಕ್ಕೆ ಒಡ್ಡಿಕೊಳ್ಳುವುದರಿಂದಲೂ ಈ ಅಪಾಯ ಹೆಚ್ಚು.
ತಡೆಯುವುದು ಹೇಗೆ?
- - ಜನದಟ್ಟಣೆಯ ಸ್ಥಳಗಳಲ್ಲಿ ಮಾಸ್ಕ್ ಧರಿಸಿ.
- - ನೀವು ಮನೆಗೆ ಹಿಂದಿರುಗಿದಾಗ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ.
- - ತೊಳೆಯದ ಕೈಗಳಿಂದ ನಿಮ್ಮ ಬಾಯಿ, ಕಣ್ಣುಗಳು ಅಥವಾ ಮೂಗನ್ನು ಮುಟ್ಟಬೇಡಿ.
- - ಸೋಂಕಿತರಿಂದ ದೂರವಿರಿ.
- - ರೋಗಲಕ್ಷಣಗಳು ಕಂಡುಬಂದರೆ ಅವರಿಂದ ದೂರವಾಗಿರಿ.
- - ಸೋಂಕಿತ ವ್ಯಕ್ತಿಗಳೊಂದಿಗೆ ಪ್ಲೇಟ್‌ಗಳು, ಕಪ್‌ಗಳು ಅಥವಾ ಇತರ ಪಾತ್ರೆಗಳನ್ನು ಹಂಚಿಕೊಳ್ಳಬೇಡಿ.
- - ಸೋಂಕಿತರು ಸೀನುವಾಗ ಅಥವಾ ಕೆಮ್ಮುವಾಗ ಬಾಯಿ ಮುಚ್ಚಿಕೊಳ್ಳಬೇಕು.
ಚಿಕಿತ್ಸೆ ಏನು?
ಪ್ರಸ್ತುತ ಎಚ್ಎಂಪಿವಿಗೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಆಂಟಿವೈರಲ್ ಚಿಕಿತ್ಸೆ ಇಲ್ಲ. ರೋಗದ ನಿರ್ವಹಣೆಯು ರೋಗಲಕ್ಷಣಗಳನ್ನು ನಿವಾರಿಸುವತ್ತ ಗಮನ ಹರಿಸುತ್ತದೆ.
ಎಚ್ಎಂಪಿವಿಗಾಗಿ ಆಂಟಿವೈರಲ್ ಔಷಧಗಳನ್ನು ವಿವೇಚನೆಯಿಲ್ಲದೆ ಬಳಸಬಾರದು ಎಂದು ತಜ್ಞರು ಹೇಳಿದ್ದಾರೆ.