ಗಲ್ಫ್ ರಾಷ್ಟ್ರಗಳಲ್ಲಿ ಚಂಡಮಾರುತ: ಭಾರತ-ಯುಎಇ ನಡುವಿನ 28 ವಿಮಾನ ರದ್ದು
ಭೀಕರ ಚಂಡಮಾರುತಕ್ಕೆ ಗಲ್ಫ್ ರಾಷ್ಟ್ರಗಳಾದ ಯುಎಇ, ಬಹರೈನ್ ಮತ್ತು ಒಮನ್ ತತ್ತರಿಸಿದ್ದು, ಒಮನ್ ರಾಷ್ಟ್ರದಲ್ಲಿ ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ.
ಸಾಮಾನ್ಯವಾಗಿ ಏಪ್ರಿಲ್ ವೇಳೆಯಲ್ಲಿ ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಯುಎಇ ಚಂಡಮಾರುತಕ್ಕೆ ತತ್ತರಿಸಿ ಹೋಗಿದೆ. ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಗಲ್ಫ್ ರಾಷ್ಟ್ರಗಳ ಪ್ರಮುಖ ಆರ್ಥಿಕ ಕೇಂದ್ರವಾದ ದುಬೈನಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. ಜಗತ್ತಿನ ಅತ್ಯಂತ ಬಿಡುವಿಲ್ಲದ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಯಿರುವ ದುಬೈ ವಿಮಾನ ನಿಲ್ದಾಣ ಬಹುತೇಕ ಮುಳುಗಡೆಗೊಂಡಿದ್ದು, ವಿಮಾನ ಹಾರಾಟದಲ್ಲಿ ಸಂಪೂರ್ಣ ವ್ಯತ್ಯಯವಾಗಿದೆ.
ಒಟ್ಟಾರೆ, ಭಾರತ ಮತ್ತು ಯುಎಇ ನಡುವಿನ 28 ವಿಮಾನಗಳನ್ನು ರದ್ದುಪಡಿಸಲಾಗಿದ್ದು, ಪ್ರಯಾಣಿಕರು ಭಾರೀ ಮಳೆಯ ನಡುವೆ ಯುಎಇಯಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಭಾರತೀಯ ವಾಯುಯಾನ ಅಧಿಕಾರಿಗಳು ದುಬೈಗೆ ಹೋಗುವ ಸುಮಾರು 15 ವಿಮಾನಗಳನ್ನು ರದ್ದುಗೊಳಿಸಿದ್ದು, ಅದೇ ವೇಳೆ ಭಾರತಕ್ಕೆ ಬರಬೇಕಿರುವ 13 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ಸಂಜೆ ಇಲ್ಲಿ ಎಲ್ಲಾ ವಿಮಾನ ಹಾರಾಟ ರದ್ದು ಪಡಿಸಲಾಗುದ್ದು, ಕೆಲವು ವಿಮಾನ ಸಂಚಾರ ಪುನರಾರಂಭಗೊಂಡರೂ ವಿಳಂಬಗಳಿಂದಾಗಿ ಪ್ರಯಾಣಿಕರು ಪರದಾಡಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ. ಅತ್ಯಂತ ಸವಾಲನ್ನು ನಾವು ಎದುರಿಸುತ್ತಿದ್ದೇವೆ. ಶೀಘ್ರವೇ ಕಾರ್ಯಾಚರಣೆಯನ್ನು ಪುನರಾರಂಭಿಸುತ್ತೇವೆ ಎಂದು ದುಬೈ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಮಾತ್ರವಲ್ಲದೆ, ಮೆಟ್ರೋ ನಿಲ್ದಾಣ, ವಿಶ್ವವಿಖ್ಯಾತ ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್‌ನಲ್ಲೂ ನೀರು ನುಗ್ಗಿದ್ದು, ಪಕ್ಕದ ಬಹರೈನ್, ಒಮನ್ ರಾಷ್ಟ್ರಗಳೂ ಚಂಡಮಾರುತಕ್ಕೆ ತತ್ತರಿಸಿದೆ. ಒಮನ್‌ನಲ್ಲಿ ದಿಢೀರ್ ಪ್ರವಾಹ ಹಾಗೂ ಬಿರುಗಾಳಿಗೆ ಮಕ್ಕಳ ಸಹಿತ 18 ಜನರು ಬಲಿಯಾಗಿದ್ದಾರೆ.
ಸದ್ಯ, ಯುಎಇಯ ಶಾಲಾ ಕಾಲೇಜುಗಳನ್ನು ಮುಚ್ಚಿದ್ದು, ಸರ್ಕಾರಿ ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
1949 ರ ಬಳಿಕ ಇದೇ ಮೊದಲ ಬಾರಿಗೆ ಯುಎಇಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದ್ದು, ವಿಮಾನಗಳ ವಿಳಂಬ ಅಥವಾ ಮಾರ್ಗ ಬದಲಾವಣೆಗೆ ಕಾರಣವಾಗಿದೆ. ಕಾರುಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿಕೊಂಡಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.