ಅಮೆರಿಕದ ಹೊಸ ಸುಂಕ ನೀತಿ: ಯುರೋಪಿಯನ್ ರಾಷ್ಟ್ರಗಳಿಂದ ಪಾರ್ಸೆಲ್ ಸಾಗಾಟಕ್ಕೆ ತಾತ್ಕಾಲಿಕ ತಡೆ
ಕಸ್ಟಮ್ಸ್‌ಗೆ ಯಾವ ಹೆಚ್ಚುವರಿ ಮಾಹಿತಿ ನೀಡಬೇಕು ಮತ್ತು ಈ ಮಾಹಿತಿಯನ್ನು ಅಮೆರಿಕದ ಕಸ್ಟಮ್ಸ್ ವಿಭಾಗಕ್ಕೆ ರವಾನಿಸುವ ತಾಂತ್ರಿಕ ವ್ಯವಸ್ಥೆ ಯಾವುದು ಎಂಬಂತಹ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.;
ಅಮೆರಿಕ ಸಂಯುಕ್ತ ಸಂಸ್ಥಾನವು (US) ಕಡಿಮೆ ಮೌಲ್ಯದ ಪಾರ್ಸೆಲ್‌ಗಳ ಮೇಲಿನ ಸುಂಕ ವಿನಾಯಿತಿಯನ್ನು ರದ್ದುಗೊಳಿಸಿರುವುದರಿಂದ, ಯುರೋಪಿನಾದ್ಯಂತ ಹಲವು ಪ್ರಮುಖ ಅಂಚೆ ಸೇವಾ ಕಂಪನಿಗಳು ಅಮೆರಿಕಕ್ಕೆ ಸರಕು ಸಾಗಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಇಲ್ಲಿಯವರೆಗೆ ಜಾರಿಯಲ್ಲಿದ್ದ "ಡಿ ಮಿನಿಮಿಸ್" ಎಂಬ ವಿನಾಯಿತಿಯ ಅಡಿಯಲ್ಲಿ, 800 ಡಾಲರ್ (ಸುಮಾರು 67,000 ರೂ.) ಕ್ಕಿಂತ ಕಡಿಮೆ ಮೌಲ್ಯದ ಪಾರ್ಸೆಲ್‌ಗಳನ್ನು ಯಾವುದೇ ಆಮದು ಸುಂಕವಿಲ್ಲದೆ ಅಮೆರಿಕಕ್ಕೆ ಕಳುಹಿಸಬಹುದಾಗಿತ್ತು. ಆದರೆ, ಈ ವಿನಾಯಿತಿಯನ್ನು ಈಗ ರದ್ದುಪಡಿಸಲಾಗಿದೆ. ಹೊಸ ವ್ಯಾಪಾರ ಒಪ್ಪಂದದ ಪ್ರಕಾರ, ಯುರೋಪಿಯನ್ ಒಕ್ಕೂಟದಿಂದ ಬರುವ ಬಹುತೇಕ ಉತ್ಪನ್ನಗಳ ಮೇಲೆ 15% ಮತ್ತು ಬ್ರಿಟನ್‌ನಿಂದ ಬರುವ 100 ಡಾಲರ್ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳ ಮೇಲೆ 10% ಸುಂಕ ಅನ್ವಯವಾಗಲಿದೆ.
ಈ ಹೊಸ ನಿಯಮವನ್ನು ಹೇಗೆ ಪಾಲಿಸಬೇಕು ಎಂಬುದರ ಬಗ್ಗೆ ತೀವ್ರ ಗೊಂದಲ ಸೃಷ್ಟಿಯಾಗಿದೆ. ಹೊಸ ಸುಂಕವನ್ನು ಗ್ರಾಹಕರಿಂದ ಯಾರು ಮತ್ತು ಹೇಗೆ ಸಂಗ್ರಹಿಸಬೇಕು, ಕಸ್ಟಮ್ಸ್‌ಗೆ ಯಾವ ಹೆಚ್ಚುವರಿ ಮಾಹಿತಿ ನೀಡಬೇಕು ಮತ್ತು ಈ ಮಾಹಿತಿಯನ್ನು ಅಮೆರಿಕದ ಕಸ್ಟಮ್ಸ್ ವಿಭಾಗಕ್ಕೆ ರವಾನಿಸುವ ತಾಂತ್ರಿಕ ವ್ಯವಸ್ಥೆ ಯಾವುದು ಎಂಬಂತಹ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.
ಈ ಗೊಂದಲ ಬಗೆಹರಿಯುವವರೆಗೂ ಅಮೆರಿಕಕ್ಕೆ ಯಾವುದೇ ವಾಣಿಜ್ಯ ಸರಕುಗಳನ್ನು ಸಾಗಿಸುವುದಿಲ್ಲ ಎಂದು ಯುರೋಪಿನ ಅತಿದೊಡ್ಡ ಶಿಪ್ಪಿಂಗ್ ಕಂಪನಿ ಡಿಎಚ್‌ಎಲ್ (DHL) ಸ್ಪಷ್ಟಪಡಿಸಿದೆ. ಜರ್ಮನಿ, ಡೆನ್ಮಾರ್ಕ್, ಸ್ವೀಡನ್, ಮತ್ತು ಇಟಲಿಯ ಅಂಚೆ ಸೇವೆಗಳು ಈಗಾಗಲೇ ಸಾಗಾಟವನ್ನು ನಿಲ್ಲಿಸಿದ್ದರೆ, ಫ್ರಾನ್ಸ್ ಮತ್ತು ಆಸ್ಟ್ರಿಯಾ ಸೋಮವಾರದಿಂದ ಹಾಗೂ ಬ್ರಿಟನ್‌ನ ರಾಯಲ್ ಮೇಲ್ ಮಂಗಳವಾರದಿಂದ ಸಾಗಾಟವನ್ನು ಸ್ಥಗಿತಗೊಳಿಸಲಿವೆ.