ಬಾಂಗ್ಲಾದೇಶ | ಸೇನೆ ಮೇಲೆ ನಂಬಿಕೆ ಇಡಿ: ಸಶಸ್ತ್ರ ಪಡೆಗಳ ಮುಖ್ಯಸ್ಥ
ಬಾಂಗ್ಲಾ ದೇಶದ ಪ್ರಧಾನಿ ದೇಶ ತೊರೆದಿದ್ದಾರೆ. ಸೇನಾಧಿಕಾರಿ ವಕಾರ್ ಉಜ್-ಜಮಾನ್ ನಿಷೇಧಿತ ಜಮಾತ್ ಎ ಇಸ್ಲಾಮಿ ಸೇರಿದಂತೆ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದು, ಮಧ್ಯಂತರ ಸರ್ಕಾರವನ್ನು ರಚಿಸಲು ಸಿದ್ಧತೆ ನಡೆಸಿದ್ದಾರೆ;
ಬಾಂಗ್ಲಾದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ದೇಶವನ್ನು ತೊರೆದು ಪಲಾಯನ ಮಾಡಿದ್ದಾರೆ.
ಸೇನೆಯ ಮುಖ್ಯಸ್ಥ ಜನರಲ್ ವಕಾರ್ ಉಜ್ ಝಮಾನ್ ʼ ಮಧ್ಯಂತರ ಸರ್ಕಾರವನ್ನು ರಚಿಸಲಾಗುವುದು.ನಾವು ರಾಜಕೀಯ ಸ್ಥಿತ್ಯಂತರ ಕಾಲದಲ್ಲಿದ್ದೇವೆ. ಎಲ್ಲ ಹತ್ಯೆಗಳ ವಿಚಾರಣೆ ನಡೆಸಲಾಗುವುದು. ಸೇನೆಯನ್ನು ನಂಬಿ,ʼ ಎಂದು ದೂರದರ್ಶನದ ಭಾಷಣದಲ್ಲಿ ಹೇಳಿದರು. ʻಜನರು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ನಾವು ಒಟ್ಟಿಗೆ ಕೆಲಸ ಮಾಡೋಣ. ಸಂಘರ್ಷದಿಂದ ನಮಗೆ ಏನೂ ಸಿಗುವುದಿಲ್ಲ. ನಾವೆಲ್ಲರೂ ಸೇರಿ ಸುಂದರವಾದ ದೇಶವನ್ನು ಕಟ್ಟಿದ್ದೇವೆ,ʼ ಎಂದರು.
ಕಳೆದ ವಾರ ಸರ್ಕಾರ ನಿಷೇಧಿಸಿದ ಜಮಾತೆ ಇಸ್ಲಾಮಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಆದರೆ, ಮಧ್ಯಂತರ ಸರ್ಕಾರದ ನೇತೃತ್ವವನ್ನು ಯಾರು ವಹಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.
ಜನರಲ್ ಜಮಾನ್ ಅವರು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದು, ದಿನದ ಅಂತ್ಯದೊಳಗೆ ಪರಿಹಾರ ಕಂಡುಕೊಳ್ಳುವ ಭರವಸೆ ವ್ಯಕ್ತಪಡಿಸಿದರು.
ಸಾಮೂಹಿಕ ದಂಗೆ: ಸಾರ್ವಜನಿಕ ವಲಯದ ಉದ್ಯೋಗ ಮೀಸಲು ತೆಗೆಯಬೇಕೆಂದು ಒತ್ತಾಯಿಸುತ್ತಿದ್ದ ವಿದ್ಯಾರ್ಥಿ ಚಳವಳಿಯು ಕಳೆದ ತಿಂಗಳು ಸರ್ಕಾರಿ ಪಡೆಗಳು ವಿದ್ಯಾರ್ಥಿಗಳು ಮತ್ತು ಮಕ್ಕಳು ಸೇರಿದಂತೆ ನೂರಾರು ಜನರನ್ನು ಕೊಂದ ನಂತರ ಸಾಮೂಹಿಕ ದಂಗೆಯಾಗಿ ಮಾರ್ಪಟ್ಟಿತು. ಹಸೀನಾ ಮತ್ತು ಅವರ ಪಕ್ಷ ಮೊದಲಿನಿಂದಲೂ ಚಳವಳಿಯನ್ನು ಟೀಕಿಸುತ್ತಿತ್ತು ಮತ್ತು ಸಾವುಗಳನ್ನು ತಡೆಯಲು ಏನನ್ನೂ ಮಾಡಲಿಲ್ಲ.
ಇಂಟರ್ನೆಟ್ ಕಡಿತಗೊಳಿಸಿತು, ಸಾಮಾಜಿಕ ಮಾಧ್ಯಮವನ್ನು ನಿರ್ಬಂಧಿಸಿತು, ಅನಿರ್ದಿಷ್ಟ ಕರ್ಫ್ಯೂ ವಿಧಿಸಿತು ಮತ್ತು ಪರಿಸ್ಥಿತಿ ಯನ್ನು ನಿಭಾಯಿಸಲು ಸೇನೆಯನ್ನು ನಿಯೋಜಿಸಿತು. ಆದರೆ, ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ನಿರುದ್ಯೋಗದಿಂದ ಕೋಪಗೊಂಡ ಜನರು, ವಿದ್ಯಾರ್ಥಿಗಳೊಡನೆ ಸೇರಿದ್ದರಿಂದ ಕೋಟಾ ಸುಧಾರಣೆ ಪ್ರತಿಭಟನೆಯು ಸಾಮೂಹಿಕ ಚಳವಳಿಯಾಗಿ ಮಾರ್ಪಟ್ಟಿತು.
ಸರ್ಕಾರವು ಬೇಡಿಕೆಗಳಿಗೆ ಸಮ್ಮತಿಸಿದರೂ, ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಚಳವಳಿ ಮುಂದುವರಿಯಿತು. ಶೀಘ್ರವೇ ಸರ್ಕಾರದ ವಿರೋಧಿ ಚಳವಳಿಯಾಗಿ ಬದಲಾಯಿತು. ಭಾನುವಾರ 13 ಪೊಲೀಸರು ಸೇರಿದಂತೆ ಕನಿಷ್ಠ 100 ಜನ ಹಾಗೂ ಸೋಮವಾರ ಢಾಕಾದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಲೂಟಿ ಮತ್ತು ವಿಧ್ವಂಸಕತೆ: ಹಸೀನಾ ಅವರು ತಮ್ಮ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ದೇಶದಿಂದ ಪರಾರಿಯಾದ ನಂತರ ಪ್ರತಿಭಟನಾಕಾರರು ಪ್ರಧಾನಿ ನಿವಾಸ ಗನಭವನವನ್ನು ಲೂಟಿ ಮಾಡಿದರು. ಅವಾಮಿ ಲೀಗ್‌ನ ಕಚೇರಿಗಳು, ಢಾಕಾ ಮತ್ತು ಇತರೆಡೆ ಪಕ್ಷದ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿದರು.
ʻಬಾಂಗ್ಲಾದೇಶವನ್ನು ವಿಮೋಚನೆಗೊಳಿಸಲಾಗಿದೆʼ ಎಂದು ಢಾಕಾದಲ್ಲಿ ಜನ ಬೀದಿಗಿಳಿದು ಘೋಷಣೆ ಮಾಡಿದ್ದಾರೆ. ಮೂರು ವಾರಗಳ ಹಿಂದೆ ಯಾರೂ ಹಸೀನಾ ಅಥವಾ ಅವರ ಪಕ್ಷ ಮತ್ತು ಅದರ ನಾಯಕರ ವಿರುದ್ಧ ಕಿರುಕುಳಕ್ಕೆ ಹೆದರಿ ಉಸಿರು ಎತ್ತುತ್ತಿರಲಿಲ್ಲ.
ವಿದೇಶಿ ವಿನಿಮಯ ಮೀಸಲು, ಹಣದುಬ್ಬರ ಹೆಚ್ಚಳ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನ ಹೈರಾಣಾಗಿದ್ದಾರೆ. ಇಂಟರ್ನೆಟ್ ನಿರ್ಬಂಧಗಳು ಸ್ವತಂತ್ರ ಉದ್ಯೋಗಿಗಳು ಹಾಗೂ ಸಣ್ಣ ಆನ್‌ಲೈನ್ ವ್ಯವಹಾರಕ್ಕೆ ಹೊಡೆತ ನೀಡಿದೆ. ದೇಶದ ರಫ್ತು ಆಧಾರಿತ ಸಿದ್ಧ ಉಡುಪು ಉದ್ಯಮದಲ್ಲಿ ಉತ್ಪಾದನೆಗೆ ಅಡ್ಡಿಯಾಗಿದೆ.
ದೊಡ್ಡ ಸವಾಲು: ವಿರೋಧ ಪಕ್ಷಗಳು ಸೇಡು ತೀರಿಸಿಕೊಳ್ಳಲು ಹೊರಟಿರುವುದರಿಂದ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವುದು ಸದ್ಯದ ದೊಡ್ಡ ಸವಾಲಾಗಿದೆ. ನ್ಯಾಯಯುತ ಚುನಾವಣೆ ಮತ್ತು ಅಧಿಕಾರ ಹಸ್ತಾಂತರವು ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಆರ್ಥಿಕತೆಯನ್ನು ಸುಸ್ಥಿರಗೊಳಿಸುವುದು ಹೊಸ ಸರ್ಕಾರಕ್ಕೆ ಸವಾಲಾಗಲಿದೆ.