ಬಾಂಗ್ಲಾದೇಶ: ಶೇಖ್ ಹಸೀನಾ ವಿರುದ್ಧ ಕೊಲೆ ಪ್ರಕರಣ ದಾಖಲು

ಉದ್ಯೋಗ ಮೀಸಲಿಗೆ ಸಂಬಂಧಿಸಿದಂತೆ ಅವಾಮಿ ಲೀಗ್ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಂತರ ಕಳೆದ ವಾರ ಹಸೀನಾ(76) ಅವರು ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನ ಮಾಡಿದ್ದರು.;

Update: 2024-08-13 09:40 GMT

ಬಾಂಗ್ಲಾದಲ್ಲಿ ಕಳೆದ ತಿಂಗಳ ಹಿಂಸಾತ್ಮಕ ಘರ್ಷಣೆಯಲ್ಲಿ ಕಿರಾಣಿ ಅಂಗಡಿ ಮಾಲೀಕನ ಸಾವಿಗೆ ಸಂಬಂಧಿಸಿದಂತೆ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ ಆರು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಉದ್ಯೋಗ ಮೀಸಲಿಗೆ ಸಂಬಂಧಿಸಿದಂತೆ ಅವಾಮಿ ಲೀಗ್ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಂತರ ಕಳೆದ ವಾರ ಹಸೀನಾ(76) ಅವರು ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನ ಮಾಡಿದ್ದರು.

ಮಾಜಿ ಗೃಹ ಸಚಿವನ ವಿರುದ್ಧವೂ ಪ್ರಕರಣ: ಮೊಹಮ್ಮದ್‌ಪುರದಲ್ಲಿ ಮೀಸಲು ಆಂದೋಲನವನ್ನು ಬೆಂಬಲಿಸಿ ನಡೆದ ಮೆರವಣಿಗೆ ಮೇಲೆ ಪೊಲೀಸರು ಜುಲೈ 19 ರಂದು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಮೃತಪಟ್ಟ ಕಿರಾಣಿ ಅಂಗಡಿ ಮಾಲೀಕ ಅಬು ಸೈಯದ್ ಅವರ ಹಿತೈಷಿ ಹಸೀನಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ಇತರ ಆರೋಪಿಗಳೆಂದರೆ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಒಬೈದುಲ್ ಖಾದರ್, ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಮಹಾನಿರೀಕ್ಷಕ ಚೌಧರಿ ಅಬ್ದುಲ್ಲಾ ಅಲ್ ಮಾಮುನ್.

ಅ‌ಷ್ಟಲ್ಲದೆ, ಹಲವು ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಕೂಡ ಆರೋಪಿಗಳಾಗಿದ್ದಾರೆ ಎಂದು ವರದಿಯಾಗಿದೆ.

ಹಿಂಸಾತ್ಮಕ ಪ್ರತಿಭಟನೆ: ಆಗಸ್ಟ್ 5 ರಂದು ಹಸೀನಾ ಸರ್ಕಾರದ ಪತನದ ನಂತರ ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರದಲ್ಲಿ 230 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಜುಲೈ ಮಧ್ಯದಲ್ಲಿ ಮೀಸಲು ವಿರೋಧಿ ಪ್ರತಿಭಟನೆ ಪ್ರಾರಂಭವಾದ ನಂತರ ಮೃತಪಟ್ಟವರ ಸಂಖ್ಯೆ 560 ತಲುಪಿದೆ.

ಅವಾಮಿ ಲೀಗ್‌ನ ಪ್ರಮುಖ ಪ್ರತಿಸ್ಪರ್ಧಿಯಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸೇರಿದಂತೆ ಏಳು ರಾಜಕೀಯ ಪಕ್ಷಗಳು ಪ್ರತ್ಯೇಕವಾಗಿ ಹಂಗಾಮಿ ಮುಖ್ಯಸ್ಥ ಮೊಹಮದ್ ಯೂನಸ್ ಅವರನ್ನು ಸೋಮವಾರ ಭೇಟಿಯಾಗಿ‌, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಅಗತ್ಯವಿರುವಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಸೋಮವಾರ ಹೇಳಿದ್ದಾರೆ.

ಬಿಎನ್‌ಪಿ ಬೆಂಬಲಿತ ಮಧ್ಯಂತರ ಸರ್ಕಾರ: ʻಚುನಾವಣೆ ನಡೆಸಲು ಸೂಕ್ತ ವಾತಾವರಣವನ್ನು ಸೃಷ್ಟಿಸಲು ನಾವು ಮಧ್ಯಂತರ ಸರ್ಕಾರಕ್ಕೆ ಸಮಯ ನೀಡಿದ್ದೇವೆ,ʼ ಎಂದು ಬಿಎನ್‌ಪಿ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಹೇಳಿದ್ದಾರೆ.

ʻಚುನಾವಣೆ ಬಗ್ಗೆ ಚರ್ಚಿಸಿಲ್ಲ. ಚುನಾವಣೆ ನಡೆಸಲು ನಿರ್ದಿಷ್ಟ ಸಮಯದ ಚೌಕಟ್ಟನ್ನು ಉಲ್ಲೇಖಿಸಿಲ್ಲ.ಮಧ್ಯಂತರ ಸರ್ಕಾರದ ಎಲ್ಲಾ ಚಟುವಟಿಕೆಗಳಿಗೆ ಪಕ್ಷ ಬೆಂಬಲ ನೀಡಲಿದೆ,ʼ ಎಂದು ಹೇಳಿದರು.

ಪ್ರಕರಣ ಹಿಂಪಡೆಯುವಂತೆ ಒತ್ತಾಯ: ಪಕ್ಷದ ಅಧ್ಯಕ್ಷೆ ಖಲೀದಾ ಜಿಯಾ ಮತ್ತು ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ವಿರುದ್ಧದ ಪ್ರಕರಣ ಸೇರಿದಂತೆ, ನಾಯಕರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವಂತೆ ಪಕ್ಷವು ಯೂನಸ್ ಅವರನ್ನು ಒತ್ತಾಯಿಸಿದೆ.

ಮಾಜಿ ಪ್ರಧಾನಿ ಖಲೀದಾ ಜಿಯಾ(79) ಅವರು ಹಸೀನಾ ಪದಚ್ಯುತಿ ನಂತರ ಜೈಲಿನಿಂದ ಬಿಡುಗಡೆಗೊಂಡರು. ಭ್ರಷ್ಟಾಚಾರ ಆರೋಪದಲ್ಲಿ ಅವರಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

Tags:    

Similar News