ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಬಂಧನ ವಾರಂಟ್, ಭಾರತದಲ್ಲಿ ರಾಜಕೀಯ ಬಿರುಗಾಳಿ
ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಂಧ್ರಪ್ರದೇಶದ ಉನ್ನತ ಅಧಿಕಾರಿಯೊಬ್ಬರಿಗೆ ಲಂಚದ ಬಹುಪಾಲು ನೀಡಲಾಗಿತ್ತು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.;
ನವದೆಹಲಿ: ಸೌರ ವಿದ್ಯುತ್ ಯೋಜನೆಯ ಗುತ್ತಿಗೆ ಪಡೆಯಲು ಭಾರತದಲ್ಲಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಅಣ್ಣನ ಮಗ ಸಾಗರ್ ಅದಾನಿ ವಿರುದ್ಧ ಅಮೆರಿಕದ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ, ಅವರ ಬಂಧನಕ್ಕೆ ಕೋರ್ಟ್ ವಾರಂಟ್ ಹೊರಡಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಭಾರತೀಯ ಅಧಿಕಾರಿಗಳಿಗೆ 2100 ಕೋಟಿ ರೂಪಾಯಿ ಲಂಚ ನೀಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಂಧ್ರಪ್ರದೇಶದ ಉನ್ನತ ಅಧಿಕಾರಿಯೊಬ್ಬರಿಗೆ ಲಂಚದ ಬಹುಪಾಲು ನೀಡಲಾಗಿತ್ತು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ನಾವು ಲಂಚ ನೀಡುವುದಿಲ್ಲ ಮತ್ತು ಮೋಸ ಮಾಡುವುದಿಲ್ಲ ಎಂದು ಹೇಳಿ ಅಮೆರಿಕದ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿಸಲಾಗಿದೆ ಎಂಬ ಕಾರಣಕ್ಕೆ ಅಲ್ಲಿ ದೂರು ದಾಖಲಾಗಿ ಇದೀಗ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ. ಅದರ ಬೆನ್ನಲ್ಲೇ ಬಂಧನದ ವಾರಂಟ್ ನೀಡಲಾಗಿದೆ. ಆದಾಗ್ಯೂ ಈ ಪ್ರಕರೆಣದ ಭಾರತದಲ್ಲಿ ರಾಜಕೀಯ ಬಿರುಗಾಳಿ ಬೀಸುವಂತೆ ಮಾಡಿದೆ.
ಬಂಧನಕ್ಕೆ ಒತ್ತಾಯ
ಅದಾನಿಗೆ ಬಂಧನ ವಾರಂಟ್ ಬರುತ್ತಿದ್ದಂತೆ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಕರೆದು ಅವರನ್ನು ಬಂಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಪ್ರಧಾನಿ ಮೋದಿಯ ಗೆಳೆಯರು ಎಂದು ಉಲ್ಲೇಖ ಮಾಡಿ ಈ ಕೆಡುಕಿಗೆ ಎಲ್ಲರ ನೆರವೂ ಇದೆ ಎಂದು ಆರೋಪಿಸಿದ್ದರು.
ಇದೇ ವೇಳೆ ಪ್ರಸ್ತುತ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾಗಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿದೆ. ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದಲ್ಲಿ ಸಂಭವನೀಯ ಹೂಡಿಕೆಗಳ ಕುರಿತು ಅದಾನಿ ಸಮೂಹದ ನಿಯೋಗದೊಂದಿಗೆ ಕೆಲವು ದಿನಗಳ ಹಿಂದೆ ಸಭೆ ನಡೆಸಿದ್ದರು. ಹೀಗಾಗಿ ಅಲ್ಲಿನ ಸರ್ಕಾರ ವಿರುದ್ಧವೂ ಟೀಕೆಗಳು ವ್ಯಕ್ತಗೊಂಡಿವೆ.
ಟಿಡಿಪಿ ನಾಯಕರೊಬ್ಬರು, ‘ಬಹುಶಃ ನಮ್ಮ ನಾಯಕರು (ಟಿಡಿಪಿ) ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಪ್ರತಿಕ್ರಿಯಿಸಲು ಬಯಸುತ್ತಿಲ್ಲ’ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರದ
ಅದಾನಿ ಒಟ್ಟು ಆರು ರಾಜ್ಯಗಳ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬ ಆರೋಪವಿದೆ. ಅದರಲ್ಲಿ ತೆಲಂಗಾಣವೂ ಇದೆ. ಹೀಗಾಗಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ಕೋರ್ಟ್ ಬಂಧನದ ವಾರಂಟ್ ಹೊರಡಿಸಿರುವ ಬೆನ್ನಲ್ಲೇ ಅದಾನಿ ಸಮೂಹದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ತೆಲಂಗಾಣದಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೆಲ ತಿಂಗಳ ಹಿಂದೆ ಗೌತಮ್ ಅದಾನಿ ಪುತ್ರ ಕರಣ್ ಅದಾನಿ ಅವರನ್ನು ರೇವಂತ್ ರೆಡ್ಡಿ ಭೇಟಿ ಮಾಡಿದ್ದರು .
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ತೆಲಂಗಾಣದಲ್ಲಿ ಅದಾನಿ ಸಮೂಹದ ಕಂಪನಿಗಳು ₹12,400 ಕೋಟಿಗೂ ಹೆಚ್ಚು ಹಣವನ್ನು ಹೂಡಿಕೆ ಮಾಡುವುದಾಗಿ ಘೋಷಿಸಿ, ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದವು.
ಇನ್ನು ಬಿಜೆಪಿ ನಾಯಕರು ಒಡಿಶಾ, ತಮಿಳುನಾಡಿನ ಅಧಿಕಾರಿಗಳಿಗೂ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮಿಳುನಾಡಿನಲ್ಲಿ ಇಂಡಿಯಾ ಒಕ್ಕೂಟ ಮಿತ್ರ ಪಕ್ಷ ಡಿಎಂಕೆ ಇರುವ ಕಾರಣ ಅಲ್ಲೂ ಚರ್ಚೆಗಳು ಆಗಿವೆ.