ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಪಾಕ್ ಗಡಿ ಬಳಿ 250ಕ್ಕೂ ಹೆಚ್ಚು ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ
ಭಾನುವಾರ ರಾತ್ರಿ 11.47ಕ್ಕೆ ಸಂಭವಿಸಿದ ಈ ಭೂಕಂಪವು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದಿಂದ 27 ಕಿ.ಮೀ ದೂರದಲ್ಲಿರುವ ಕುನಾರ್ ಪ್ರಾಂತ್ಯದ ಪಟ್ಟಣಗಳನ್ನು ಅಪ್ಪಳಿಸಿದೆ.;
ಭೂಕಂಪಕದ ತೀವ್ರತೆಗೆ ಹಾನಿಯಾಗಿರುವ ಮನೆಗೋಡೆ
ಪೂರ್ವ ಅಫ್ಘಾನಿಸ್ತಾನದಲ್ಲಿ, ಪಾಕಿಸ್ತಾನದ ಗಡಿಯ ಸಮೀಪ, ಭಾನುವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 250 ಜನರು ಮೃತಪಟ್ಟು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಭಾನುವಾರ ರಾತ್ರಿ 11.47ಕ್ಕೆ ಸಂಭವಿಸಿದ ಈ ಭೂಕಂಪವು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದಿಂದ 27 ಕಿ.ಮೀ ದೂರದಲ್ಲಿರುವ ಕುನಾರ್ ಪ್ರಾಂತ್ಯದ ಪಟ್ಟಣಗಳನ್ನು ಅಪ್ಪಳಿಸಿದೆ. ಭೂಕಂಪದ ಕೇಂದ್ರಬಿಂದುವು ಭೂಮಿಯಿಂದ ಕೇವಲ 8 ಕಿ.ಮೀ ಆಳದಲ್ಲಿತ್ತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ. ಭೂಮಿಯ ಮೇಲ್ಮೈಗೆ ಹತ್ತಿರದಲ್ಲಿ ಸಂಭವಿಸುವ ಭೂಕಂಪಗಳು ಸಾಮಾನ್ಯವಾಗಿ ಹೆಚ್ಚು ಹಾನಿಯನ್ನುಂಟುಮಾಡುತ್ತವೆ.
ಕುನಾರ್ ಪ್ರಾಂತ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ನೂರ್ ಗುಲ್, ಸೋಕಿ, ವತ್ಪುರ್, ಮನೋಗಿ ಮತ್ತು ಚಪಾದರೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದೆ.
ಪ್ರಮುಖ ವ್ಯಾಪಾರ ನಗರದ ಸಮೀಪ ಭೂಕಂಪ
ಭೂಕಂಪದ ಕೇಂದ್ರಬಿಂದುವಿಗೆ ಸಮೀಪವಿರುವ ಜಲಾಲಾಬಾದ್, ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಪ್ರಮುಖ ವ್ಯಾಪಾರ ನಗರವಾಗಿದೆ. ಇಲ್ಲಿನ ಹೆಚ್ಚಿನ ಕಟ್ಟಡಗಳು ಕಾಂಕ್ರೀಟ್ ಮತ್ತು ಇಟ್ಟಿಗೆಯಿಂದ ನಿರ್ಮಿಸಲ್ಪಟ್ಟಿದ್ದರೆ, ನಗರದ ಹೊರವಲಯದಲ್ಲಿನ ಮನೆಗಳು ಮಣ್ಣಿನ ಇಟ್ಟಿಗೆ ಮತ್ತು ಮರದಿಂದ ನಿರ್ಮಿಸಲ್ಪಟ್ಟಿವೆ. ಇದು ಹಾನಿಯ ತೀವ್ರತೆಯನ್ನು ಹೆಚ್ಚಿಸಿದೆ.
2023ರ ದುರಂತದ ನೆನಪು
2023ರ ಅಕ್ಟೋಬರ್ 7 ರಂದು ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆ ದುರಂತದಲ್ಲಿ ತಾಲಿಬಾನ್ ಸರ್ಕಾರದ ಅಂದಾಜಿನಂತೆ 4,000 ಜನರು ಮೃತಪಟ್ಟಿದ್ದರೆ, ವಿಶ್ವಸಂಸ್ಥೆಯು ಸುಮಾರು 1,500 ಸಾವುಗಳನ್ನು ದೃಢಪಡಿಸಿತ್ತು. ಇದು ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪವಾಗಿತ್ತು.