Mauritius Visit: ಪ್ರಧಾನಿ ಮೋದಿ ಮಾರಿಷಸ್ ಪ್ರವಾಸ ಆರಂಭ: 200 ಗಣ್ಯರಿಂದ ಅದ್ಧೂರಿ ಸ್ವಾಗತ

ಮಾರಿಷಸ್ ಸಂಸದರು, ಶಾಸಕರು, ರಾಜತಾಂತ್ರಿಕ ದಳದ ಸದಸ್ಯರು ಮತ್ತು ಧಾರ್ಮಿಕ ಮುಖಂಡರು ಸೇರಿದಂತೆ ಒಟ್ಟು 200ರಷ್ಟು ಗಣ್ಯರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.;

Update: 2025-03-11 09:54 GMT

ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಮಾರಿಷಸ್​ ಗಣ್ಯರು.

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ 2 ದಿನಗಳ ಮಾರಿಷಸ್(Mauritius) ಭೇಟಿ ಮಂಗಳವಾರ ಆರಂಭವಾಗಿದ್ದು ದ್ವೀಪರಾಷ್ಟ್ರದ ನಾಯಕರು ಭವ್ಯ ಸ್ವಾಗತ ನೀಡಿದರು. ಅಧಿಕೃತ ಭೇಟಿಯಲ್ಲಿ ಮೋದಿ ಅವರು ಮಾರಿಷಸ್ (Mauritius) ದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ.

ಮುಂಜಾನೆ ಪೋರ್ಟ್ ಲೂಯಿಸ್ ತಲುಪುತ್ತಿದ್ದಂತೆಯೇ ಪ್ರಧಾನಿ ಮೋದಿ ಅವರನ್ನು ಮಾರಿಷಸ್ ಪ್ರಧಾನಿ ನವೀನ್ ರಾಮ್ ಗೂಲಮ್ ಅವರು ಹೂಮಾಲೆ ಹಾಕಿ ಸ್ವಾಗತಿಸಿದರು. ಅವರೊಂದಿಗೆ ಅಲ್ಲಿನ ಉಪ ಪ್ರಧಾನಿ, ಮಾರಿಷಸ್ ಮುಖ್ಯ ನ್ಯಾಯಮೂರ್ತಿ, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್, ವಿರೋಧ ಪಕ್ಷದ ನಾಯಕ, ವಿದೇಶಾಂಗ ಸಚಿವರು, ಸಂಪುಟ ಕಾರ್ಯದರ್ಶಿ, ಗ್ರ್ಯಾಂಡ್ ಪೋರ್ಟ್ ಡಿಸ್ಟ್ರಿಕ್ಟ್ ಕೌನ್ಸಿಲ್ ಅಧ್ಯಕ್ಷರು ಮತ್ತು ಹಲವಾರು ಉನ್ನತ ಅಧಿಕಾರಿಗಳೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾರಿಷಸ್ ಸಂಸದರು, ಶಾಸಕರು, ರಾಜತಾಂತ್ರಿಕ ದಳದ ಸದಸ್ಯರು ಮತ್ತು ಧಾರ್ಮಿಕ ಮುಖಂಡರು ಸೇರಿದಂತೆ ಒಟ್ಟು 200ರಷ್ಟು ಗಣ್ಯರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ಭಾರತೀಯ ಸಮುದಾಯದೊಂದಿಗೆ ಸಂವಾದ

ತಮ್ಮ ಭೇಟಿಯ ಅವಧಿಯಲ್ಲಿ ಅವರು ಮಾರಿಷಸ್ ಅಧ್ಯಕ್ಷರನ್ನೂ ಭೇಟಿ ಮಾಡಲಿದ್ದಾರೆ, ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ನಾಯಕರನ್ನೂ ಭೇಟಿಯಾಗಲಿದ್ದಾರೆ. ಅಲ್ಲದೇ, ಅಲ್ಲಿರುವ ಭಾರತೀಯ ಸಮುದಾಯದೊಂದಿಗೂ ಸಂವಾದ ನಡೆಸಲಿದ್ದಾರೆ. ಜೊತೆಗೆ, ಭಾರತದ ಅನುದಾನದ ನೆರವಿನೊಂದಿಗೆ ನಿರ್ಮಿಸಲಾದ ನಾಗರಿಕ ಸೇವಾ ಕಾಲೇಜು ಮತ್ತು ಪ್ರದೇಶ ಆರೋಗ್ಯ ಕೇಂದ್ರವನ್ನು ಮೋದಿ ಉದ್ಘಾಟಿಸಲಿದ್ದಾರೆ.

ಭಾರತ ಅನುದಾನಿತ ಯೋಜನೆಗಳ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಅವರು ಸಾಮರ್ಥ್ಯ ವರ್ಧನೆಯಿಂದ ಹಿಡಿದು ಸಮುದಾಯ ಸಂಬಂಧಿತ ಮೂಲಸೌಕರ್ಯದವರೆಗೆ ಭಾರತ ಅನುದಾನಿತ 20ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗ್ನೇಯ ಆಫ್ರಿಕಾದ ದ್ವೀಪ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಹೊಸ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನೂ ಅವರು ಘೋಷಿಸಲಿದ್ದಾರೆ ಎಂದಿದ್ದಾರೆ.

ಪ್ರಧಾನಿ ಮೋದಿ ಮತ್ತು ಮಾರಿಷಸ್ ಪ್ರಧಾನಿ ನವೀನ್ ರಾಮ್ ಗೂಲಮ್ ಜಂಟಿಯಾಗಿ ನಾಗರಿಕ ಸೇವಾ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಅಂದಾಜು 4.75 ದಶಲಕ್ಷ ಯುಎಸ್ ಡಾಲರ್ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಯೋಜನೆಗಾಗಿ 2017ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಇನ್ನೊಂದೆಡೆ, ಸುಮಾರು 7 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಪ್ರದೇಶ ಆರೋಗ್ಯ ಕೇಂದ್ರ ಮತ್ತು 20 ಸಮುದಾಯ ಯೋಜನೆಗಳನ್ನೂ ಮೋದಿ ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ. ಈ ಸಮುದಾಯ ಯೋಜನೆಗಳು ಕ್ರೀಡೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಸಹ ಒಳಗೊಂಡಿವೆ.

Tags:    

Similar News