ಬಿಡುಗಡೆಯಾದ ಚಿತ್ರಗಳೆಲ್ಲಾ ಕಳಪೆಯಲ್ಲ; ಹೊಸ ಪ್ರಯೋಗಗಳಿಗಿದು ಕಾಲವಲ್ಲ...
ಈ ವರ್ಷ ಬಿಡುಗಡೆಯಾದ ಚಿತ್ರಗಳು ದೊಡ್ಡ ಗಳಿಕೆ ಮಾಡದಿರಬಹದು. ಆದರೆ, ಅವೆಲ್ಲವೂ ಕಳಪೆ ಚಿತ್ರಗಳಾಗಿರಲಿಲ್ಲ. ಈ ಚಿತ್ರಗಳು ಚಿತರಮಂದಿರಗಳಲ್ಲಿ ದೊಡ್ಡ ಗಳಿಕೆ ಮಾಡದಿರಬಹುದು. ಹಿಟ್ ಆಗದಿರಬಹುದು. ಓಟಿಟಿಯಲ್ಲಿ ಬಿಡುಗಡೆಯಾಗಿ ಜನರ ಗಮನಸೆಳೆದಿವೆ.;
2024 ಮುಗಿಯುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಕನ್ನಡ ಚಿತ್ರರಂಗದ ಪಾಲಿಗೆ ಈ ವರ್ಷ ಹೇಗಿತ್ತು ಎಂಬುದು ಈಗಾಗಲೇ ಗೊತ್ತಿದೆ. ಎಷ್ಟು ಚಿತ್ರಗಳು ಗೆದ್ದಿವೆ, ಎಷ್ಟು ಸೋತಿವೆ ಎಂಬುದನ್ನು ಮತ್ತೊಮ್ಮೆ ವಿವರಿಸಿ ಹೇಳುವ ಅಗತ್ಯವಿಲ್ಲ. ಬಿಡುಗಡೆಯಾದ 225 ಪ್ಲಸ್ ಚಿತ್ರಗಳ ಪೈಕಿ ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಗಳಿಕೆ ಮಾಡಿವೆ. ಮಿಕ್ಕಂತೆ ಬಿಡುಗಡೆಯಾದ ಬಹಳಷ್ಟು ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದಕ್ಕೂ ಕಷ್ಟಪಟ್ಟಿವೆ.
ಹಾಗಂತ, ಬಿಡುಗಡೆಯಾದ ಚಿತ್ರಗಳೆಲ್ಲಾ ಚೆನ್ನಾಗಿರಲಿಲ್ಲವಾ? ಅಥವಾ ಕಳಪೆಯಾಗಿದ್ದವಾ? ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಇಲ್ಲ, ಹಾಗೇನಿಲ್ಲ. ಕನ್ನಡದಲ್ಲಿ ಈ ವರ್ಷ ಒಂದಿಷ್ಟು ಗಮನಸೆಳೆದ ಚಿತ್ರಗಳು ಬಂದವು. ಅವು ಚರ್ಚೆಯೂ ಆದವು. ಆದರೆ, ಕಾರಣಾಂತರಗಳಿಂದ ಪ್ರೇಕ್ಷಕರು ಆ ಚಿತ್ರಗಳನ್ನು ತಲೆ ಮೇಲೆ ಹೊತ್ತು ಮೆರೆಸಲಿಲ್ಲ. ಸ್ಟಾರ್ ಚಿತ್ರಗಳು ಬಿಡುಗಡೆಯಾದಾಗ, ಚಿತ್ರಮಂದಿರಗಳಿಗೆ ನುಗ್ಗಿದಂತೆ ನುಗ್ಗಲಿಲ್ಲ. ಹಾಗಾಗಿ, ಚಿತ್ರಗಳ ಬಗ್ಗೆ ಕೆಲವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದರೂ, ಆ ಚಿತ್ರಕ್ಕೆ ಜನ ದೊಡ್ಡ ಮಟ್ಟದಲ್ಲಿ ಬರುವುದಿರಲಿ, ನಿರ್ಮಾಪಕರಿಗೆ ದೊಡ್ಡ ಲಾಭ ಬರುವುದಿರಲಿ, ಹಾಕಿದ ಬಂಡವಾಳಕ್ಕೂ ಅಭಾವ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ವಿಭಿನ್ನ ಪ್ರಯತ್ನಗಳಿಗೇನೂ ಕೊರತೆ ಇಲ್ಲ
ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ರಂಗಾಯಣ ರಘು ಅಭಿನಯದ ‘ಶಾಖಾಹಾರಿ’, ಗೌರಿಶಂಕರ್ ಅಭಿನಯದ ‘ಕೆರೆಬೇಟೆ’, ದೀಕ್ಷಿತ್ ಶೆಟ್ಟಿ ಅಭಿನಯದ ‘ಬ್ಲಿಂಕ್’, ರಾಜ್ ಬಿ ಶೆಟ್ಟಿ ಅಭಿನಯದ ‘ರೂಪಾಂತರ’, ಪೃಥ್ವಿ ಅಂಬಾರ್ ಅಭಿನಯದ ‘ಜೂನಿ’, ವಿಹಾನ್ ಗೌಡ ಅಭಿನಯದ ‘ಇಬ್ಬನಿ ತಬ್ಬಿದ ಇಳೆಯಲಿ’, ಸುನೀಲ್ ರಾವ್, ರಾಕೇಶ್ ಅಡಿಗ ಮುಂತಾದವರು ನಟಿಸಿದ ‘ಮರ್ಯಾದೆ ಪ್ರಶ್ನೆ’, ಪ್ರಭು ಮುಂಡ್ಕೂರ್ ಅಭಿನಯದ ‘ಮರ್ಫಿ’, ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’, ಅನೀಶ್ ತೇಜೇಶ್ವರ್ ಅಭಿನಯದ ‘ಆರಾಮ್ ಅರವಿಂದ ಸ್ವಾಮಿ’, ಪ್ರವೀಣ್ ತೇಜ್ ಅಭಿನಯದ ‘ಓ2’, ಅಕ್ಷತಾ ಪಾಂಡವಪುರ ಅಭಿನಯದ ‘ಕೋಳಿ ಎಸ್ರು’, ಸಂಧ್ಯಾ ಅರೆಕೆರೆ ಮತ್ತು ಮಹದೇವ್ ಹಡಪದ ಅಭಿನಯದ ‘ಫೋಟೋ’, ನೀರಜ್ ಮ್ಯಾಥ್ಯೂ ಮತ್ತು ಶರ್ಲಿನ್ ಭೋಂಸ್ಲೆ ಅಭಿನಯದ ‘ಹದಿನೇಳೆಂಟು’, ಪ್ರಮೋದ್ ಶೆಟ್ಟಿ ಅಭಿನಯದ ‘ಲಾಫಿಂಗ್ ಬುದ್ಧ’, ತ್ರಿಗುಣ್ ನಟನೆಯ ‘ಲೈನ್ ಮ್ಯಾನ್’, ವಿಜಯ್ ರಾಘವೇಂದ್ರ ಅಭಿನಯದ ‘ಕೇಸ್ ಆಫ್ ಕೊಂಡಾನ’, ಶರಣಮ್ಮ ಚೆಟ್ಟಿ ಅಭಿನಯದ ‘ಶಿವಮ್ಮ ಎರೆಹಂಚಿನಾಳ’ ಮುಂತಾದ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿದೆ. ವಿಮರ್ಶಕರ ಮೆಚ್ಚುಗೆ ಪಡೆದಿವೆ. ಆದರೆ, ಈ ಯಾವ ಚಿತ್ರಗಳು ಸಹ ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆ ಮಾಡಲಿಲ್ಲ ಎಂಬುದು ವಿಚಿತ್ರ.
ಈ ವರ್ಷ ಹಲವು ವಿಭಿನ್ನ ಪ್ರಯೋಗಗಳು
ಈ ಎಲ್ಲಾ ಚಿತ್ರಗಳು ಕನ್ನಡದಲ್ಲಿ ಈ ವರ್ಷದಲ್ಲಿ ವಿಭಿನ್ನ ಪ್ರಯತ್ನ ಮತ್ತು ಪ್ರಯೋಗಗಳಾಗಿದ್ದವು. ಈ ಪೈಕಿ ಕೆಲವು ಚಿತ್ರಗಳು ಕೆಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಹ ಪ್ರದರ್ಶನಗೊಂಡವು. ‘ಶಿವಮ್ಮ’ ಚಿತ್ರವು ಬೂಸಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವುದುರ ಜೊತೆಗೆ ನ್ಯೂ ಕರೆಂಟ್ಸ್ ಪ್ರಶಸ್ತಿಯನ್ನು ಸಹ ತನ್ನದಾಗಿಸಿಕೊಂಡಿತು. ಆದರೆ, ನಮ್ಮ ನೆಲದಲ್ಲಿ ಮಾತ್ರ ಜನ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ನೋಡಲಿಲ್ಲ. ‘ಶಾಖಾಹಾರಿ’ ಮತ್ತು ‘ಬ್ಲಿಂಕ್’ ಚಿತ್ರಗಳು ಒಂದಿಷ್ಟು ಸದ್ದು ಮಾಡಿದರೂ, ಪ್ರೇಕ್ಷಕರು ನಿರೀಕ್ಷಿತ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರದೇ ಇದ್ದಿದ್ದು, ಆ ಸಂದರ್ಭದಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ತಡವಾಗಿ ಬರಬಹುದು ಎಂಬ ಆಶಾಭಾವನೆ
‘ಶಾಖಾಹಾರಿ’ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಂಗಾಯಣ ರಘು, ಪ್ರೇಕ್ಷಕರು ಚಿತ್ರಮಂದಿರಗಳ ಕಡೆಗೆ ಬರದ ಕುರಿತು ಬೇಸರ ವ್ಯಕ್ತಪಡಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಚಿತ್ರ ನೋಡುವುದಕ್ಕೆ ಪ್ರೇಕ್ಷಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದರು. ‘’ಮುಂಗಾರು ಮಳೆ’ ಎರಡು ವಾರಗಳ ನಂತರ ಪಿಕಪ್ ಆಯಿತು. ‘ರಂಗಿ ತರಂಗ’, ‘6-5=2’ ಚಿತ್ರಗಳಿಗೂ ಪ್ರೇಕ್ಷಕರು ತಡವಾಗಿಯೇ ಬಂದರು. ಕರೊನಾ ನಂತರ ಪ್ರೇಕ್ಷಕರು ಓಟಿಟಿಗೆ ಟ್ಯೂನ್ ಆಗಿದ್ದಾರೆ. ಇದರ ಮಧ್ಯೆಯೂ ‘ಕಾಟೇರ’ ಚಿತ್ರವು ಯಶಸ್ವಿಯಾಗಿ 50 ದಿನ ಪ್ರದರ್ಶನ ಕಂಡಿದೆ. ನಮ್ಮ ಚಿತ್ರಕ್ಕೂ ಪ್ರೇಕ್ಷಕರು ತಡವಾಗಿ ಬರಬಹುದು. ಎರಡನೆಯ ವಾರದಿಂದ ಕಲೆಕ್ಷನ್ ಪಿಕಪ್ ಆಗಬಹುದು’ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದ್ದರು.
ಓಟಿಟಿಯಲ್ಲಿ ಸಿಕ್ಕ ಪ್ರತಿಕ್ರಿಯೆ ಚಿತ್ರಮಂದಿರಗಳಲ್ಲಿ ಇಲ್ಲ
ಆದರೆ, ಅವರ ಮಾತು ಸುಳ್ಳಾಯಿತು. ಚಿತ್ರವನ್ನು ಜನ ಚಿತ್ರಮಂದಿರಗಳಲ್ಲಿ ನೋಡದಿದ್ದರೂ, ಓಟಿಟಿಯಲ್ಲಿ ಬಿಡುಗಡೆಯಾದಾಗ ದೊಡ್ಡ ಮಟ್ಟದಲ್ಲಿ ನೋಡಿದರು. ಚಿತ್ರವನ್ನು ಇಷ್ಟಪಟ್ಟರು. ಇದೇ ಮಾತು ‘ಬ್ಲಿಂಕ್’ ಚಿತ್ರಕ್ಕೂ ಸಲ್ಲುತ್ತದೆ. ಚಿತ್ರವು ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ ಕಂಡಿತು. ಆದರೆ, ನಿರ್ಮಾಪಕರಿಗೆ ಇದರಿಂದ ದೊಡ್ಡ ಲಾಭವೇನೂ ಆಗಲಿಲ್ಲ. ಚಿತ್ರವು ಚಿತ್ರಮಂದಿರಗಳಿಂದ ಮಾಡಿದ ಗಳಿಕೆ 88 ಲಕ್ಷ ರೂ.ಗಳಂತೆ. ಈ ಪೈಕಿ, ನಿರ್ಮಾಪಕರಿಗೆ 35ರಿಂದ 40 ಲಕ್ಷ ಬಂದಿರಬಹುದು. ಆ ನಂತರ ಚಿತ್ರವು ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಯಿತು. ವಿಶೇಷವೆಂದರೆ, ಬಿಡುಗಡೆಯಾದ ಮೂರು ದಿನಕ್ಕೆ ಏಳು ಮಿಲಿನ್ ನಿಮಿಷ ಸ್ಟ್ರೀಮಿಂಗ್ ಕಂಡಿತಂತೆ. ಅಲ್ಲಿಗೆ ಜನರ ಚಿತ್ರ ಏನು ಎನ್ನುವುದು ಅರ್ಥವಾಗುತ್ತದೆ. ನಮಗೆ ಚಿತ್ರಮಂದಿರಗಳಿಗಿಂತ ಓಟಿಟಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಅವರು ಬಂದಂತೆ ಕಾಣುತ್ತದೆ.
ಓಟಿಟಿಗೆ ಮಾರಾಟ ಸುಲಭವಲ್ಲ
ಆದರೆ, ಈ ಚಿತ್ರಗಳು ಓಟಿಟಿಗೆ ಮಾರಾಟವಾಗುವುದು ಅಷ್ಟು ಸುಲಭವಾಗಿರಲಿಲ್ಲ. ಚಿತ್ರಗಳ ಬಗ್ಗೆ ಪ್ರೇಕ್ಷಕರ ವಲಯದಿಂದ ಮೆಚ್ಚುಗೆ ವ್ಯಕ್ತವಾದರೂ, ದೊಡ್ಡ ಮಟ್ಟದಲ್ಲಿ ಗಳಿಕೆಯಾಗದ ಕಾರಣ, ಬಹಳಷ್ಟು ಚಿತ್ರಗಳು ತಡವಾಗಿಯೇ ಓಟಿಟಿ ಮೆಟ್ಟಿಲೇರಿದವು. ಹಾಗಂತ ಓಟಿಟಿಯವರು ದೊಡ್ಡ ದುಡ್ಡು ಕೊಟ್ಟು, ಈ ಚಿತ್ರಗಳನ್ನು ಕೊಳ್ಳಲಿಲ್ಲ Pay Per View ಮಾದರಿಯಲ್ಲಿ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟರು. ಶೇಕಡಾವಾರು ಪದ್ಧತಿಯಲ್ಲಿ ಚಿತ್ರಗಳನ್ನು ತೋರಿಸಿದರು. ಇದರಿಂದ ನಿರ್ಮಾಪಕರಿಗೆ ದೊಡ್ಡ ಲಾಭವಾಗದಿದ್ದರೂ, ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿದ ಖುಷಿ ಒಂದು ಕಡೆಯಾದರೆ, ಚಿತ್ರಮಂದಿರಗದಲ್ಲಿ ಆಗದ ಗಳಿಕೆ, ಸ್ವಲ್ಪ ಮಟ್ಟಿಗಾದರೂ ಈ ಓಟಿಟಿಗಳಿಂದ ಆಗಿತ್ತು.
ಹಲವು ಪ್ರಶ್ನೆಗಳು; ಉತ್ತರ ಮಾತ್ರ ಇಲ್ಲ
ಹೊಸ ಪ್ರಯತ್ನ ಮತ್ತು ಪ್ರಯೋಗಗಳಿಗೆ ಒಂದು ಕಡೆ ಚಿತ್ರಮಂದಿರಗಳಲ್ಲಿ ಬೆಲೆ ಸಿಗದಿದ್ದರೆ, ಇನ್ನೊಂದು ಕಡೆ ಸ್ಟಾರ್ ಚಿತ್ರಗಳಿಗೆ ಸಿಕ್ಕ ಪ್ರತಿಕ್ರಿಯೆಯನ್ನು ಸಹ ಗಮನಹರಿಸಬೇಕು. ಈ ಬಾರಿ ಚಿತ್ರಮಂದಿರಗಳಲ್ಲಿ ಗಳಿಕೆ ಮಾಡಿದ ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’, ‘ಬಘೀರ’, ‘ಭೈರತಿ ರಣಗಲ್’ ಮತ್ತು ‘UI’ ಚಿತ್ರಗಳೆಲ್ಲಾ ಸ್ಟಾರ್ ಚಿತ್ರಗಳೇ. ಹಾಗಾದರೆ, ಜನರಿಗೆ ಹೊಸ ಪ್ರಯತ್ನ ಮತ್ತು ಪ್ರಯೋಗಗಳು ಬೇಡವಾಗಿದೆಯಾ? ಬರೀ ಸ್ಟಾರ್ ಚಿತ್ರಗಳು ಮಾತ್ರ ಸಾಕಾಗಿದೆಯಾ? ಉಚಿತವಾಗಿ ಕೊಟ್ಟರೆ ಮಾತ್ರ ಪ್ರಯೋಗಗಳನ್ನು ನೋಡುತ್ತಾರಾ? ಸ್ಟಾರ್ ಚಿತ್ರಗಳು ಹೇಗಿದ್ದರೂ ನಡೆಯುತ್ತದಾ? ಹೊಸ ಪ್ರಯೋಗ ಮತ್ತು ಪ್ರಯತ್ನಗಳಿಗೆ ಇದು ಕಾಲವಲ್ಲವಾ? ಮುಂತಾದ ಹಲವು ಪ್ರಶ್ನೆಗಳು ಕಾಡುತ್ತವೆ. ಈ ಪ್ರಶ್ನೆಗಳಿಗೆ ಸದ್ಯಕ್ಕಂತೂ ಉತ್ತರ ಸಿಗುವುದಿಲ್ಲ.