ಹೊಸದಿಲ್ಲಿ: ದಿಲ್ಲಿಯಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ನೀಡಿದ ಆಮ್ಲೆಟ್‌ನಲ್ಲಿ ಜಿರಳೆ ಇತ್ತು ಎಂದು ಪ್ರಯಾಣಿಕರೊಬ್ಬರು ದೂರು ನೀಡಿದ್ದು, ವಿಮಾನಯಾನ ಸಂಸ್ಥೆ ಈ ಸಂಬಂಧ ತನಿಖೆ ನಡೆಸುವುದಾಗಿ ಹೇಳಿದೆ.
2024 ರ ಸೆಪ್ಟೆಂಬರ್ 17 ರಂದು ದಿಲ್ಲಿಯಿಂದ ಜಾನ್ ಎಫ್. ಕೆನೆಡಿ ವಿಮಾನ ನಿಲ್ದಾಣಕ್ಕೆ ತೆರಳುವ ವಿಮಾನದಲ್ಲಿ ನೀಡಿದ ಊಟದಲ್ಲಿ ಜಿರಳೆ ಇದ್ದಿತ್ತು ಎಂಬ ಪ್ರಯಾಣಿಕರೊಬ್ಬರ ಸಾಮಾಜಿಕ ಮಾಧ್ಯಮ ಪೋಸ್ಟ್ ಬಗ್ಗೆ ನಮಗೆ ತಿಳಿದಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ ಮತ್ತು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ʻನೋಡುವಷ್ಟರಲ್ಲಿ 2 ವರ್ಷದ ಮಗು ಅರ್ಧಕ್ಕಿಂತ ಹೆಚ್ಚಿನದನ್ನು ತಿಂದು ಮುಗಿಸಿದ್ದ. ಆನಂತರ ಆಹಾರ ವಿಷದಿಂದ ಬಳಲಿದ,ʼ ಎಂದು ಬರೆದಿ ದ್ದಾರೆ. ಆಹಾರ ತಿನಿಸುಗಳ ಕಿರು ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನ್ನು ಏರ್ ಇಂಡಿಯಾ, ವಿಮಾನಯಾನ ನಿಯಂತ್ರಕ ಡಿಜಿಸಿಎ ಮತ್ತು ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಅವರಿಗೆ ಟ್ಯಾಗ್ ಮಾಡಿದ್ದಾರೆ.
ʻಅಡುಗೆ ಸೇವೆ ಒದಗಿಸುವವರಿಗೆ ತನಿಖೆಗೆ ಸೂಚಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಏರ್ ಇಂಡಿಯಾವು ಪ್ರತಿಷ್ಠಿತ ಕೇಟರರ್‌ಗಳನ್ನು ಆಯ್ಕೆ ಮಾಡಿಕೊಂಡಿದೆ. ಪ್ರಯಾಣಿಕರಿಗೆ ನೀಡುವ ಊಟದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕಠಿಣ ವಿಧಾನಗಳು ಮತ್ತು ಬಹುಹಂತದ ಪರಿಶೀಲನೆ ನಡೆಸುತ್ತದೆ,ʼ ಎಂದು ವಕ್ತಾರರು ಹೇಳಿದ್ದಾರೆ.