ಭಯೋತ್ಪಾದಕ ದಾಳಿಗೆ ಭಾರತ ಕುಗ್ಗುವುದಿಲ್ಲ: ಪ್ರಲ್ಹಾದ್ ಜೋಶಿ
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ಕುಗ್ಗುವುದಿಲ್ಲ; ಬದಲಾಗಿ ಭಯೋತ್ಪಾದನೆ ವಿರುದ್ಧ ಹೋರಾಟದ ನಮ್ಮ ಸಂಕಲ್ಪ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನವದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಂದು ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ದುಷ್ಟತನದ ವಿರುದ್ಧ ಕೇಂದ್ರ ಸರ್ಕಾರ ಸಮರ್ಥ ಹೋರಾಟ ನಡೆಸಲು ಬದ್ಧವಿದೆ. ಭಯೋತ್ಪಾದನೆಯನ್ನು ನಾವೆಂದೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಭಯೋತ್ಪಾದಕ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ಕರೆದು ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಗಹನ ಚರ್ಚೆ ನಡೆಸಿದ್ದಾರೆ. ಅಲ್ಲದೇ, ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಮತ್ತು ಅಲ್ಲಿನ ಡಿಜಿಪಿ ಜತೆಗೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗದ ಉದ್ಯಮಿ ಹತ್ಯೆಗೆ ತೀವ್ರ ಸಂತಾಪ:
ಭಯೋತ್ಪಾದನೆ ದಾಳಿ ವೇಳೆ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಹತ್ಯೆಗೆ ಸಚಿವ ಜೋಶಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅಲ್ಲದೇ, ಕುಟುಂಬಗಳಿಗೆ ಭಗವಂತ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ. ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದೂ ಸಂತೈಸಿದ್ದಾರೆ.