Ahmedabad Air Crash: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ: ಭಾರತ ಕಂಡ ಭೀಕರ ವಿಮಾನ ದುರಂತಗಳ ವಿವರ ಇಲ್ಲಿದೆ

ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಳು ಆರಂಭಗೊಂಡಿದ್ದು, ಸಾವು-ನೋವುಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದಾಗ್ಯೂ ಈ ದುರಂತವು ಭಾರತದ ವಿಮಾನಯಾನ ಇತಿಹಾಸದಲ್ಲಿ ಸಂಭವಿಸಿದ ಇತರೆ ದುರಂತಗಳನ್ನು ಸ್ಮರಿಸುವಂತೆ ಮಾಡಿದೆ.;

Update: 2025-06-12 10:22 GMT

ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಗುಜರಾತ್​ನ ಅಹಮದಾಬಾದ್​ ವಿಮಾನ ನಿಲ್ದಾಣದಲ ಬಳಿ ಗುರುವಾರ ಪತನಗೊಂಡು ಭೀಕರ ಅವಘಡ ಸಂಭವಿಸಿದೆ. 242 ಪ್ರಯಾಣಿಕರನ್ನು ತುಂಬಿಕೊಂಡು ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಳು ಆರಂಭಗೊಂಡಿದ್ದು, ಸಾವು-ನೋವುಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದಾಗ್ಯೂ ಈ ದುರಂತವು ಭಾರತದ ವಿಮಾನಯಾನ ಇತಿಹಾಸದಲ್ಲಿ ಸಂಭವಿಸಿದ ಇತರೆ ದುರಂತಗಳನ್ನು ಸ್ಮರಿಸುವಂತೆ ಮಾಡಿದೆ. ಅಂಥ ಭೀಕರ 10 ದುರಂತಗಳ ಈ ಕೆಳಗೆ ನೀಡಲಾಗಿದೆ. .

1. ಚಾರ್ಖಿ ದಾದ್ರಿ ವಿಮಾನ ಪತನ (1996) – 349 ಮಂದಿ ಸಾವು

ಹರಿಯಾಣದ ಚಾರ್ಖಿ ದಾದ್ರಿ ಬಳಿ ಕಝಾಕ್‌ಸ್ಥಾನ್ ಏರ್‌ಲೈನ್ಸ್‌ನ ಇಲ್ಯೂಷಿನ್ ಇಲ್-76 ಮತ್ತು ಸೌದಿ ಅರೇಬಿಯನ್ ಏರ್‌ಲೈನ್ಸ್‌ನ ಬೋಯಿಂಗ್ 747 ವಿಮಾನಗಳು ಆಗಸದಲ್ಲಿ ಡಿಕ್ಕಿ ಹೊಡೆದಿದ್ದವು. ಇದು ವಿಶ್ವದ ಅತ್ಯಂತ ಭೀಕರ ವಿಮಾನ ಹಾರಾಟದ ಮಧ್ಯೆ ನಡೆದ ಅವಘಡ ಎನಿಸಿಕೊಂಡಿದೆ.

2. ಏರ್ ಇಂಡಿಯಾ ಫ್ಲೈಟ್ 182 (1985) – 329 ಸಾವು 

ಮಾಂಟ್ರಿಯಲ್‌ನಿಂದ ದೆಹಲಿಗೆ ತೆರಳುತ್ತಿದ್ದ ಬೋಯಿಂಗ್ 747 ವಿಮಾನವು ಸಿಖ್ ಉಗ್ರಗಾಮಿಗಳು ಇರಿಸಿದ ಬಾಂಬ್‌ನಿಂದ ಐರಿಷ್ ಕರಾವಳಿಯ ಆಗಸದಲ್ಲಿ ಸ್ಫೋಟಗೊಂಡಿತ್ತು. ಈ ದುರಂತವು ಭಾರತೀಯ ವಿಮಾನಯಾನ ಇತಿಹಾಸದಲ್ಲಿ ಅತ್ಯಂತ ಭೀಕರ ವಿಮಾನ ದುರಂತವಾಗಿದೆ. ಇದು ವಿಮಾನ ಸುರಕ್ಷತೆಯ ಬಗ್ಗೆ ದೊಡ್ಡ ಚರ್ಚೆ ನಡೆಯಲು ಕಾರಣವಾಯಿತು.

3. ಏರ್ ಇಂಡಿಯಾ ಫ್ಲೈಟ್ 855 (1978) – 213 ಮಂದಿ ಸಾವು

ಮುಂಬೈನಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಬೋಯಿಂಗ್ 747 ವಿಮಾನವು ಅರೇಬ್ಬಿ ಸಮುದ್ರದಲ್ಲಿ ಪತನಗೊಂಡಿತ್ತು. ಉಪಕರಣದ ದೋಷ ಮತ್ತು ಕ್ಯಾಪ್ಟನ್‌ಗೆ ಆಗಿರುವ ಗೊಂದಲದಿಂದ ಈ ದುರಂತ ಸಂಭವಿಸಿತ್ತು.

4. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ 812 (2010) – 158 ಮಂದಿ ಸಾವು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಬೋಯಿಂಗ್ 737 ವಿಮಾನವು ರನ್‌ವೇಯನ್ನು ಮೀರಿ ಕಣಿವೆಗೆ ಬಿದ್ದಿತ್ತು. ಪೈಲಟ್‌ನ ತಪ್ಪು ತೀರ್ಮಾನ ಮತ್ತು ಸವಾಲಿನ ರನ್‌ವೇ ಪರಿಸ್ಥಿತಿಗಳು ಈ ದುರಂತಕ್ಕೆ ಕಾರಣವಾಯಿತು.

5. ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 113 (1988) – 133 ಸಾವು

ಅಹಮದಾಬಾದ್‌ನಲ್ಲಿ ಕಡಿಮೆ ಗೋಚರತೆಯ ಸಂದರ್ಭದಲ್ಲಿ ಲ್ಯಾಂಡಿಂಗ್ ಪ್ರಯತ್ನದ ವೇಳೆ ವಿಮಾನವು ಪತನಗೊಂಡಿತು. ಪೈಲಟ್‌ನ ತಪ್ಪು ಮತ್ತು ಅಸಮರ್ಪಕ ಲ್ಯಾಂಡಿಂಗ್ ವಿಧಾನಗಳು ಈ ದುರಂತಕ್ಕೆ ಕಾರಣವಾಯಿತು.

6. ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 257 (1991) – 69 ಸಾವು

ಇಂಫಾಲ್‌ಗೆ ಇಳಿಯುವ ಸಂದರ್ಭದಲ್ಲಿ ವಿಮಾನವು ಗುಡ್ಡಕ್ಕೆ ಡಿಕ್ಕಿಹೊಡೆದಿತ್ತು. ಪೈಲಟ್‌ಗಳು ಎಟಿಸಿಯಿಂದ ಸಂಪರ್ಕ ಕಡಿತಗೊಂಡು ಕನಿಷ್ಠ ಎತ್ತರಕ್ಕಿಂತ ಕೆಳಗೆ ಇಳಿದಿದ್ದರು ಎಂಬುದು ಬಳಿಕ ತನಿಖೆಯಲ್ಲಿ ಸಾಬೀತಾಗಿತ್ತು.

7. ಅಲೈಯನ್ಸ್ ಏರ್ ಫ್ಲೈಟ್ 7412 (2000) - 60 ಮಂದಿ ಸಾವು

ಪಾಟ್ನಾ ವಿಮಾನ ನಿಲ್ದಾಣದ ಬಳಿ ಸಣ್ಣ ಟರ್ಬೋಪ್ರಾಪ್ ವಿಮಾನವು ಎಂಜಿನ್ ತೊಂದರೆ ಮತ್ತು ಸಿಬ್ಬಂದಿಯ ತಪ್ಪು ನಿರ್ವಹಣೆಯಿಂದ ವಸತಿ ಪ್ರದೇಶದಲ್ಲಿ ಪತನಗೊಂಡಿತ್ತು, ಇದರಿಂದ ಭಾರೀ ಬೆಂಕಿಯೂ ಉಂಟಾಯಿತು.

8. ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 491 (1993) – 55 ಸಾವು

ಔರಂಗಾಬಾದ್‌ನಲ್ಲಿ ಟೇಕ್‌ಆಫ್ ಸಮಯದಲ್ಲಿ ಬೋಯಿಂಗ್ 737 ವಿಮಾನವು ಟ್ರಕ್‌ಗೆ ಡಿಕ್ಕಿಹೊಡೆದು, ಪತನಗೊಂಡು ಬೆಂಕಿಗೆ ಆಹುತಿಯಾಗಿತ್ತು. ಅಸಮರ್ಪಕ ಗ್ರೌಂಡ್ ಕ್ಲಿಯರೆನ್ಸ್ ಈ ದುರಂತಕ್ಕೆ ಕಾರಣವಾಯಿತು.

9. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ 1344 (2020) – 21 ಸಾವು

ದುಬೈನಿಂದ ಕೊಝಿಕೋಡ್‌ಗೆ ತೆರಳುತ್ತಿದ್ದ ಬೋಯಿಂಗ್ 737-800 ವಿಮಾನವು ಕೇರಳದ ಕಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಪತನಗೊಂಡಿತ್ತು. ಈ ದುರಂತಕ್ಕೆ ಪೈಲಟ್ ದೋಷ, ವ್ಯವಸ್ಥಿತ ಸಮಸ್ಯೆಗಳು, ವಿಮಾನ ನಿಲ್ದಾಣದ ಟೇಬಲ್‌ಟಾಪ್ ರನ್‌ವೇ ವಿನ್ಯಾಸ ಮತ್ತು ಪ್ರತಿಕೂಲ ಹವಾಮಾನ ಕಾರಣ ಎಂದು ಹೇಳಲಾಗಿದೆ.

10. ಟಾಟಾ ಏರ್‌ಲೈನ್ಸ್ ದುರಂತ (1938) – 1 ಸಾವು

ಈ ಆರಂಭಿಕ ದುರಂತದಲ್ಲಿ ಜೆಆರ್‌ಡಿ ಟಾಟಾ ಅವರ ವಿಶ್ವಾಸಾರ್ಹ ಪೈಲಟ್ ನೆವಿಲ್ ವಿನ್ಸೆಂಟ್ ಮೃತಪಟ್ಟರು. ಕೇವಲ ಒಬ್ಬರ ಸಾವಾದರೂ, ಇದು ಭಾರತೀಯ ವಿಮಾನಯಾನದ ಆರಂಭಿಕ ಅಭಿವೃದ್ಧಿಯ ಮೇಲೆ ಗಮನಾರ್ಹ ಪರಿಣಾಮ ಬೀರಿತು.

Tags:    

Similar News