ಶಾ ಆಲಂ (ಮಲೇಷ್ಯಾ), ಫೆ 18: ನಿರ್ಣಾಯಕ ಐದನೇ ಪಂದ್ಯದಲ್ಲಿ ಗೆದ್ದ ಅನ್ಮೋಲ್ ಖಾರ್ಬ್, ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್ ನಲ್ಲಿ ಭಾರತೀಯ ಮಹಿಳೆಯರಿಗೆ ಚಿನ್ನ ಲಭಿಸುವಂತೆ ಮಾಡಿದರು. ಅನುಭವಿ ಪಿ.ವಿ. ಸಿಂಧು ನೇತೃತ್ವದ ಭಾರತೀಯ ಮಹಿಳಾ ತಂಡ ಎಲ್ಲ ನಿರೀಕ್ಷೆಗಳನ್ನು ಸುಳ್ಳು ಮಾಡಿ ,ಎರಡು ಬಾರಿ ಕಂಚಿನ ಪದಕ ವಿಜೇತ ಥಾಯ್ಲೆಂಡ್ ವಿರುದ್ಧ ಗೆಲುವು ಸಾಧಿಸಿತು. ಇದು ಟೀಮ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತೀಯ ಮಹಿಳೆಯರಿಗೆ ಗಳಿಸಿದ ಮೊದಲ ಪ್ರಮುಖ ಪ್ರಶಸ್ತಿ. ಭಾರತದ ಪುರುಷರ ತಂಡ ಈ ಹಿಂದೆ 2016 ಮತ್ತು 2020ರಲ್ಲಿ ಎರಡು ಕಂಚಿನ ಪದಕ ಗಳಿಸಿತ್ತು.
ಥಾಯ್ಲೆಂಡ್ ತನ್ನಇಬ್ಬರು ಸಿಂಗಲ್ಸ್ ಆಟಗಾರರಾದ ವಿಶ್ವದ ನಂ. 13 ರಟ್ಚಾನೋಕ್ ಇಂಟನಾನ್ ಮತ್ತು ವಿಶ್ವದ 16 ನೇ ಶ್ರೇಯಾಂಕದ ಪೋರ್ನ್ಪಾವೀ ಚೋಚುವಾಂಗ್ ಅವರಿಲ್ಲದೆ ಆಟವಾಡಿತು. ಎರಡು ಬಾರಿ ಒಲಂಪಿಕ್ ಪದಕ ವಿಜೇತೆ ಸಿಂಧು, ನಾಲ್ಕು ತಿಂಗಳ ವಿರಾಮದ ನಂತರ ಅಂಕಣಕ್ಕೆ ಮರಳಿದ್ದಾರೆ. ಮೊದಲ ಸಿಂಗಲ್ಸ್‌ನಲ್ಲಿ17 ನೇ ಶ್ರೇಯಾಂಕದ ಸುಪಾನಿಡಾ ಕಟೆಥಾಂಗ್ ಅವರನ್ನು 21-12 21-12 ರಿಂದ ಸೋಲಿಸಿ, 1-0 ಮುನ್ನಡೆ ಸಾಧಿಸಿದರು. ವಿಶ್ವದ ನಂ. 23 ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ವಿಶ್ವದ 10 ನೇ ಶ್ರೇಯಾಂಕಿತ ಜೋಡಿಯಾದ ಜೊಂಗ್‌ಕೋಲ್ಫಾನ್ ಕಿಟಿತಾರಾಕುಲ್ ಮತ್ತು ರವಿಂದ ಪ್ರ ಜೊಂಗ್‌ಜೈ ಅವರನ್ನು 21-16 18-21 21-16 ರಿಂದ ಸೋಲಿಸಿ, 2-1 ಮುನ್ನಡೆ ಸಾಧಿಸಿದರು. ಆದರೆ, 18 ನೇ ಶ್ರೇಯಾಂಕದ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಅಶ್ಮಿತಾ ಚಲಿಹಾ 11-21 14-21 ರಿಂದ ಸೋತರು. ಹಿರಿಯ ರಾಷ್ಟ್ರೀಯ ಚಾಂಪಿಯನ್ ಯುವ ಶ್ರುತಿ ಮಿಶ್ರಾ ಮತ್ತು ಪ್ರಿಯಾ ಕೊಂಜೆಂಗ್‌ಬಾಮ್, 13 ನೇ ಶ್ರೇಯಾಂಕದ ಬೆನ್ಯಾಪಾ ಐಮ್‌ಸಾರ್ಡ್ ಮತ್ತು ನುಂಟಕರ್ನ್ ಐಮ್‌ಸಾರ್ಡ್ ಅವರಿಂದ ಅಪಜಯ ಹೊಂದಿದರು. ಪಂದ್ಯ 2-2 ರಲ್ಲಿ ಸಮಬಲಗೊಂಡಿತು, ಅನ್ಮೋಲ್ ನಿರ್ಣಾಯಕ ಮೂರನೇ ಸಿಂಗಲ್ಸ್‌ನಲ್ಲಿ 45 ನೇ ಶ್ರೇಯಾಂಕದ ಪೋರ್ನ್‌ಪಿಚಾ ಚೊಯ್ಕೆವೊಂಗ್ ವಿರುದ್ಧ 21-14 21-9 ಜಯ ಸಾಧಿಸಿದರು.
ಈ ಗೆಲುವು ಏಪ್ರಿಲ್ 28 ರಿಂದ ಮೇ 5 ರವರೆಗೆ ಚೀನಾದ ಚೆಂಗ್ಡುದಲ್ಲಿ ನಡೆಯಲಿರುವ ಉಬರ್ ಕಪ್‌ಗೆ ತಂಡಕ್ಕೆ ಸ್ಫೂರ್ತಿ ನೀಡಲಿದೆ. ʻಭಾರತೀಯ ಬ್ಯಾಡ್ಮಿಂಟನ್‌ಗೆ ಇದು ಉತ್ತಮ ಕ್ಷಣ. ಆಟಗಾರರು ಉತ್ತಮ ಮನೋಭಾವವನ್ನು ಪ್ರದರ್ಶಿಸಿದರು; ಪರಸ್ಪರರನ್ನು ಬೆಂಬಲಿಸುತ್ತಿದ್ದರು. ಭಾರತ ಥಾಮಸ್ ಕಪ್ ಗೆದ್ದಾಗ ಇದ್ದ ವಾತಾವರಣ ಕಂಡುಬಂದಿತು. ದೇಶಕ್ಕೆ ಇದೊಂದು ವಿಶೇಷ ಕ್ಷಣʼ ಎಂದು ಮಾಜಿ ಕೋಚ್ ವಿಮಲ್ ಕುಮಾರ್ ತಿಳಿಸಿದರು.