
ಪಶ್ಚಿಮ ಬಂಗಾಳ ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
ಬಿಜೆಪಿಯ ಸಂದೇಶಖಾಲಿ ಅಭಿಯಾನಕ್ಕೆ ಹೊಡೆತ
ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ರಾಜಭವನದ ಉದ್ಯೋಗಿಯೊಬ್ಬರು ಮಾಡಿದ ದೌರ್ಜನ್ಯ ಆರೋಪವು ತೃಣಮೂಲ ಕಾಂಗ್ರೆಸ್ ಗೆ ವರವಾಗಿ ಪರಿಣಮಿಸಿದೆ. ಪಶ್ಚಿಮ ಬಂಗಾಳವು ಮಹಿಳೆಯರಿಗೆ ಅಸುರಕ್ಷಿತವೆಂದು ಬಿಂಬಿಸುವ ಬಿಜೆಪಿಯ ಸಂದೇಶಖಾಲಿ ಕೇಂದ್ರಿತ ಅಭಿಯಾನ ಸಂಪೂರ್ಣ ದಿಕ್ಕುತಪ್ಪಿದೆ.
ರಾಜ್ಯಪಾಲರ ಮೇಲಿನ ದೂರು ಸಂದೇಶಖಾಲಿಯಲ್ಲಿ ಸ್ಥಳೀಯ ನಾಯಕರು ನಡೆಸಿರುವ ಲೈಂಗಿಕ ದೌರ್ಜನ್ಯದ ಆರೋಪ ಆಧರಿಸಿ ಬಿಜೆಪಿ ನಡೆಸುತ್ತಿದ್ದ ದಾಳಿಯನ್ನು ತಿರುಗಿಸಲು ಟಿಎಂಸಿಗೆ ಅವಕಾಶ ನೀಡಿದೆ. ಸಂದೇಶ್‌ಖಾಲಿಯ ಬಲಿಪಶುಗಳಲ್ಲಿ ಒಬ್ಬರು ಎನ್ನಲಾದ ರೇಖಾ ಪಾತ್ರಾ ಅವರು ಬಸಿರ್‌ಹತ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ. ಬಿಜೆಪಿ ರಾಜ್ಯಾದ್ಯಂತ ಪ್ರಚಾರ ಮಾಡಲು ಹಲವು ಸಂದೇಶಖಾಲಿ ಬಲಿಪಶುಗಳನ್ನು ಆಯ್ಕೆ ಮಾಡಿಕೊಂಡಿದೆ. ʻನಾವು ಬೀದಿ ಮೂಲೆ ಸಭೆಗಳನ್ನು ನಡೆಸುತ್ತಿದ್ದೇವೆ. ರಾಜ್ಯದ ಹೆಣ್ಣು ಮಕ್ಕಳಿಗೆ ನಾವು ಎದುರಿಸಿದ ಅಗ್ನಿಪರೀಕ್ಷೆ ಕುರಿತು ಹೇಳುತ್ತಿದ್ದೇವೆʼ ಎಂದು ಏಪ್ರಿಲ್ 26-29 ರವರೆಗೆ ನಾಡಿಯಾ ಜಿಲ್ಲೆಯ ಕೃಷ್ಣನಗರ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಸಂದೇಶಖಾಲಿ ಮಹಿಳೆಯೊಬ್ಬರು ಹೇಳಿದರು.
ʻಒಟ್ಟು 208 ಮಹಿಳೆಯರನ್ನು ಅಭಿಯಾನಕ್ಕೆ ಆರಿಸಿದ್ದು, 10-15 ಸದಸ್ಯರ ಸಣ್ಣ ಗುಂಪುಗಳಾಗಿ ವಿಂಗಡಿಸಲಾಗಿದೆ,ʼ ಎಂದು ಸಂದೇಶಖಾಲಿಯ ಬಿಜೆಪಿ ನಾಯಕ ಉತ್ಪಲ್ ಮೈತಿ ಹೇಳಿದರು.
ಸಂದೇಶಖಾಲಿ ಚುನಾವಣೆ ವಿಷಯ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸಂದೇಶಖಾಲಿಯನ್ನು ಚುನಾವಣೆ ವಿಷಯವಾಗಿ ಮಾಡಿದ್ದಾರೆ. ʻಬಂಗಾಳದಲ್ಲಿ, ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲಾಗಿದೆ. ದೇವಾಲಯಗಳು ಮತ್ತು ರಾಮನವಮಿ ಮೆರವಣಿಗೆಗಳಿಗೆ ಆಕ್ಷೇಪವಿದೆ. ಟಿಎಂಸಿ ಸರ್ಕಾರ ಸಂದೇಶಖಾಲಿಯಲ್ಲಿ ಅಪರಾಧಿ ಷಹಜಹಾನ್ ಶೇಖ್‌ನನ್ನು ರಕ್ಷಿಸುತ್ತಿದೆʼ ಎಂದು ಮೋದಿ ಶುಕ್ರವಾರ (ಮೇ 3) ಬೋಲ್ಪುರದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಹೇಳಿದ್ದರು.
ಟಿಎಂಸಿ ತಿರುಗೇಟು: ರಾಜಭವನದ ಘಟನೆಯಲ್ಲಿ ಮೋದಿಯವರ ಮೌನವನ್ನು ಟಿಎಂಸಿ ಪ್ರಶ್ನಿಸಿದೆ. ʻ(ಮೋದಿ) ಸಂದೇಶ್‌ಖಾಲಿ ಕುರಿತು ಮಾತಾಡಿದ್ದಾರೆ. ಆದರೆ, ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ಬಿಡಲಿಲ್ಲ. ಜಮೀನು ಸಮಸ್ಯೆಗಳನ್ನು ಅಧಿಕಾರಿಗಳ ಮೂಲಕ ಬಗೆಹರಿಸಿದ್ದೇನೆ. ಆದರೆ, ಪ್ರಧಾನಿ ರಾಜ್ಯಪಾಲರ ಕುರಿತು ಏನು ಹೇಳುತ್ತಾರೆ?ʼಎಂದು ಮಮತಾ ಬ್ಯಾನರ್ಜಿ ಚುನಾವಣೆ ಸಭೆಯಲ್ಲಿ ಪ್ರಶ್ನಿಸಿದರು.
ʻರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ರಾಜ್ಯಪಾಲರ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಸಂದೇಶಖಾಲಿಗಿಂತ ಮೊದಲು ರಾಜ್ಯಪಾಲರು ತಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ ಏಕೆ ಹೀಗೆ ಮಾಡಿದರು ಎಂದು ಉತ್ತರಿಸಿ. ಆಕೆಗೆ ಎರಡು ಬಾರಿ ಕಿರುಕುಳ ನೀಡಿದ್ದಾರೆ. ಪ್ರಧಾನಿ ನಿನ್ನೆ ರಾಜಭವನಕ್ಕೆ ಬಂದಿದ್ದರು. ಆದರೆ, ಘಟನೆ ಬಗ್ಗೆ ಏನೂ ಹೇಳಲಿಲ್ಲ. ನಮ್ಮ ತಾಯಂದಿರು ಮತ್ತು ಸಹೋದರಿಯರ ಘನತೆ ಬಗ್ಗೆ ಮಾತನಾಡಲು ಇವರಿಗೆಷ್ಟು ಧೈರ್ಯ?ʼ ಎಂದು ಮಮತಾ ಪ್ರಶ್ನಿಸಿದ್ದಾರೆ.
ಕೋಲ್ಕತ್ತಾ ಪೊಲೀಸರು ಆರೋಪದ ತನಿಖೆಗೆ ಎಂಟು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ. ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಇಂದಿರಾ ಮುಖರ್ಜಿ ಅವರು ಎಸ್‌ಐಟಿಯ ನೇತೃತ್ವ ವಹಿಸಿದ್ದಾರೆ. ಶುಕ್ರವಾರ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ರಾಜಭವನಕ್ಕೆ ಭೇಟಿ ನೀಡಿ ಪ್ರಾಥಮಿಕ ವಿಚಾರಣೆ ನಡೆಸಿತು. 361 ನೇ ವಿಧಿಯಡಿ ರಾಜ್ಯಪಾಲರು ಸಾಂವಿಧಾನಿಕ ವಿನಾಯಿತಿ ಹೊಂದಿರುವುದರಿಂದ, ಪೊಲೀಸರು ಪ್ರಕರಣವನ್ನು ಮುಂದುವರಿಸಲು ಕಾನೂನು ಅಭಿಪ್ರಾಯ ಪಡೆಯುತ್ತಿದ್ದಾರೆ.
ರಾಜ್ಯಪಾಲರು ಆರೋಪವನ್ನು ರಾಜಕೀಯ ಪಿತೂರಿ ಎಂದು ತಳ್ಳಿ ಹಾಕಿದ್ದಾರೆ. ʻಇದೆಲ್ಲವೂ ಚುನಾವಣೆ ತಂತ್ರʼ ಎಂದು ಕೇರಳಕ್ಕೆ ತೆರಳುವ ಮೊದಲು ರಾಜಭವನದ ನೌಕರರಿಗೆ ಶುಕ್ರವಾರ ತಿಳಿಸಿದ್ದಾರೆ.