‘ಕ್ಷಮೆಯಾಚನೆ ಜಾಹೀರಾತಿನ ಗಾತ್ರದಷ್ಟೇ ಇತ್ತೇ?ʼ: ಸುಪ್ರೀಂ ಕೋರ್ಟ್ ಪ್ರಶ್ನೆ
x

‘ಕ್ಷಮೆಯಾಚನೆ ಜಾಹೀರಾತಿನ ಗಾತ್ರದಷ್ಟೇ ಇತ್ತೇ?ʼ: ಸುಪ್ರೀಂ ಕೋರ್ಟ್ ಪ್ರಶ್ನೆ

ಪತಂಜಲಿ ಸಂಸ್ಥಾಪಕ ರಾಮದೇವ್ ಮತ್ತು ಬಾಲಕೃಷ್ಣ ಪರ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, 67 ಪತ್ರಿಕೆಗಳಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕ್ಷಮಾಪಣೆಯನ್ನು ಪ್ರಕಟಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.


ಏಪ್ರಿಲ್ 23- ಪತಂಜಲಿ ಆಯುರ್ವೇದ ಪತ್ರಿಕೆಗಳಲ್ಲಿ ಪ್ರಕಟಿಸಿದ ಕ್ಷಮೆಯಾಚನೆ ಗಾತ್ರ ಅದರ ಉತ್ಪನ್ನಗಳಿಗೆ ನೀಡಿದ ಪೂರ್ಣ ಪುಟದ ಜಾಹೀರಾತುಗಳನ್ನು ಹೋಲುತ್ತಿತ್ತೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಪತಂಜಲಿ ಸಂಸ್ಥಾಪಕರಾದ ರಾಮದೇವ್ ಮತ್ತು ಬಾಲಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, 67 ಪತ್ರಿಕೆಗಳಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಕ್ಷಮಾಪಣೆಯನ್ನು ಪ್ರಕಟಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರತಿಕ್ರಿಯಿಸಿದ ನ್ಯಾ. ಹಿಮಾ ಕೊಹ್ಲಿ, ʻಕ್ಷಮಾಪಣೆಯನ್ನು ಪ್ರಮುಖವಾಗಿ ಪ್ರಕಟಿಸಲಾಗಿದೆಯೇ? ನಿಮ್ಮ ಹಿಂದಿನ ಜಾಹೀರಾತುಗಳಷ್ಟೇ ಫಾಂಟ್ ಮತ್ತು ಗಾತ್ರ ಇದೆಯೇ ?ʼ ಎಂದು ಕೇಳಿದರು.ʻಕಂಪನಿ ಲಕ್ಷಗಟ್ಟಲೆ ಖರ್ಚು ಮಾಡಿದೆʼ ಎಂದು ರೋಹಟಗಿ ಹೇಳಿದಾಗ, ʻನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲʼ ಎಂದು ನ್ಯಾಯಾಲಯ ಹೇಳಿತು.

ಹೊಸದಾಗಿ ಕ್ಷಮೆಯಾಚನೆ:‌ ಪತಂಜಲಿ ಪತ್ರಿಕೆಗಳಲ್ಲಿ ಸಣ್ಣದಾಗಿ ಕ್ಷಮೆಯಾಚನೆ ಪ್ರಕಟಿಸಿದೆ: ʻಪತಂಜಲಿ ಆಯುರ್ವೇದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಘನತೆಯನ್ನು ಸಂಪೂರ್ಣವಾಗಿ ಗೌರವಿಸುತ್ತದೆ. ನಮ್ಮ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ ನಂತರವೂ ಜಾಹೀರಾತುಗಳನ್ನು ಪ್ರಕಟಿಸಿ, ಪತ್ರಿಕಾಗೋಷ್ಠಿ ನಡೆಸಿದ ತಪ್ಪಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಮುಂದೆಂದೂ ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಸಂವಿಧಾನ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಘನತೆಯನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ನಾವು ನಿಮಗೆ ಆಶ್ವಾಸನೆ ನೀಡುತ್ತೇವೆʼ.

ಹೊಸದಾಗಿ ಕ್ಷಮಾಪಣೆ ಸಲ್ಲಿಸಿದ್ದಾರೆ ಎಂದು ಪತಂಜಲಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ, ಈ ಕೆಲಸ ಮೊದಲೇ ಮಾಡಬೇಕಿತ್ತು ಎಂದು ನ್ಯಾಯಾಲಯ ಹೇಳಿತು.

ಐಎಂಎ ಮನವಿ: ಪತಂಜಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದಿಂದ 1,000 ಕೋಟಿ ರೂ. ದಂಡ ಕೇಳಿ ಅರ್ಜಿ ಸಲ್ಲಿಕೆಯಾಗಿದೆ ಎಂದು ಸುಪ್ರೀಂ ಹೇಳಿತು. ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ರೋಹಟಗಿ ಹೇಳಿದರು.

ಪತ್ರಿಕೆಗಳಲ್ಲಿ ದೊಡ್ಡದಾಗಿ ಕ್ಷಮಾಯಾಚನೆಯನ್ನು ಪ್ರಕಟಿಸುವುದಾಗಿ ರಾಮ್‌ದೇವ್ ನ್ಯಾಯಾಲಯಕ್ಕೆ ತಿಳಿಸಿದರು. ಪೀಠ ಪ್ರಕರಣವನ್ನು ಒಂದು ವಾರಕ್ಕೆ ಮುಂದೂಡಿದೆ.

ಪತಂಜಲಿ ಆಯುರ್ವೇದವು ಕೋವಿಡ್ ಲಸಿಕೆ ಆಂದೋಲನ ಮತ್ತು ಆಧುನಿಕ ವೈದ್ಯ ಪದ್ಧತಿ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿ, ಭಾರತೀಯ ವೈದ್ಯಕೀಯ ಸಂಘ (ಐಎಂಎ) 2022 ರಲ್ಲಿ ಮನವಿ ಸಲ್ಲಿಸಿತ್ತು.

Read More
Next Story