
ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ
ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಅವರು ಪ್ರಧಾನಿ ವಿರುದ್ಧ ಸ್ಪರ್ಧಿಸಲಿದ್ದಾರೆ. ಇದು ಇಬ್ಬರ ನಡುವಿನ ಮೂರನೇ ಮುಖಾಮುಖಿ.
ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮಂಗಳವಾರ ನಾಮಪತ್ರ ಸಲ್ಲಿಸಿದರು. ಬಿಜೆಪಿ ಮತ್ತು ಎನ್‌ಡಿಎ ಉನ್ನತ ನಾಯಕರು ಉಪಸ್ಥಿತರಿದ್ದರು. ಅವರು 2014 ಮತ್ತು 2019ರ ಲೋಕಸಭೆ ಚುನಾವಣೆ ಯಲ್ಲಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್ ಮೇಲೆ ಕಣ್ಣಿಟ್ಟಿದ್ದಾರೆ.
ನಾಮಪತ್ರ ಸಲ್ಲಿಸುವ ಮೊದಲು ಪ್ರಧಾನಿಯವರು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ಮಾಡಿದರು. ʻ10 ವರ್ಷಗಳ ಹಿಂದೆ ನಾನು ಕಾಶಿಗೆ ಬಂದಾಗ ಹೇಳಿದ್ದೆ- ಮಾ ಗಂಗಾ ನನ್ನನ್ನು ಕರೆದಿದ್ದಾಳೆ ... ಆದರೆ, ಕಳೆದ 10 ವರ್ಷಗಳಲ್ಲಿ ಗಂಗಾ ಮಾತೆ ನನ್ನನ್ನು ದತ್ತು ತೆಗೆದುಕೊಂಡಿದ್ದಾಳೆʼ ಎಂದು ಹೇಳಿದರು.
ನಿನ್ನೆ ಸಂಜೆ ವಾರಣಾಸಿಗೆ ಆಗಮಿಸಿದ ಅವರು, ತಮ್ಮ ಮೂರನೇ ಅವಧಿಯಲ್ಲಿ ಪವಿತ್ರ ನಗರಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು. ʻನನಗೆ ಮಾತು ಹೊರಡದಂತಾಗಿದ್ದು, ಭಾವುಕನಾಗಿದ್ದೇನೆ! ನಿಮ್ಮ ಪ್ರೀತಿಯ ನೆರಳಿನಲ್ಲಿ 10 ವರ್ಷ ಹೇಗೆ ಕಳೆಯಿತು ಎನ್ನುವುದು ಗೊತ್ತಾಗಲಿಲ್ಲ. ಬಾಬಾ ವಿಶ್ವನಾಥನ ಆಶೀರ್ವಾದದೊಂದಿಗೆ ನಾನು ಯಾವಾಗಲೂ ಕಾಶಿಯ ಸೇವೆಗೆ ಸಮರ್ಪಿತನಾಗಿರುತ್ತೇನೆ. ಜೈ ಬಾಬಾ ವಿಶ್ವನಾಥ್!ʼ ಎಂದು ಎಕ್ಸ್ ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್‌ಡಿಎ ಪಾಲುದಾರರಾದ ಲೋಕದಳ ಅಧ್ಯಕ್ಷ ಜಯಂತ್ ಚೌಧರಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಅಪ್ನಾ ದಳ (ಎಸ್) ಅಧ್ಯಕ್ಷೆ ಅನುಪ್ರಿಯಾ ಪಟೇಲ್, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂಪ್ರಕಾಶ್ ರಾಜ್‌ಭರ್, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜಿತನ್ ರಾಮ್ ಮಾಂಝಿ, ಸಂಜಯ್ ನಿಶಾದ್ ಮತ್ತು ರಾಮದಾಸ್ ಅಠವಳೆ ಸೇರಿದಂತೆ ಹಲವು ನಾಯಕರು ಪ್ರಧಾನಿ ಅವರ ಜೊತೆಗಿದ್ದರು.
ನಾಯ್ಡು ಬಣ್ಣನೆ: ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಿರುವುದು ಐತಿಹಾಸಿಕ ಘಟನೆ ಎಂದು ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಬಣ್ಣಿಸಿದ್ದಾರೆ. ʻಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಅವರು ಪ್ರಧಾನಿ ವಿರುದ್ಧ ಸ್ಪರ್ಧಿಸಲಿದ್ದಾರೆ. ಇದು ಇಬ್ಬರ ನಡುವಿನ ಮೂರನೇ ಮುಖಾಮುಖಿ.