
ತಮಿಳುನಾಡು ಕಾಂಗ್ರೆಸ್ ನಾಯಕ ಜಯಕುಮಾರ್ ಸಾವಿನ ನಿಗೂಢತೆ ಏನು?
ತಮಿಳುನಾಡಿನ ಕಾಂಗ್ರೆಸ್ ನಾಯಕ ಕೆ.ಪಿ.ಕೆ. ಜಯಕುಮಾರ್ ಧನಸಿಂಗ್ ಅವರ ಸಾವು ದಿನದಿಂದ ದಿನಕ್ಕೆ ನಿಗೂಢವಾಗುತ್ತಿದೆ.
ತಿರುನೆಲ್ವೇಲಿ ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಅವರ ಸುಟ್ಟ ದೇಹವು ಥಿಸಾಯನ್ವಿಲೈ ಬಳಿಯ ಕರೈಸುತ್ತು ಪುದೂರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶನಿವಾರ (ಮೇ 4) ಪತ್ತೆಯಾಗಿತ್ತು. ಉವಾರಿ ಪೊಲೀಸರಿಗೆ ನಾಪತ್ತೆ ದೂರು ಸಲ್ಲಿಸಿದ ಎರಡು ದಿನಗಳ ನಂತರ ಸುದ್ದಿ ಬಹಿರಂಗಗೊಂಡಿದೆ. ಆರಂಭದಲ್ಲಿ ಸ್ವಯಂ ಅಗ್ನಿಸ್ಪರ್ಶ ಎಂದು ಶಂಕಿಸಲಾಗಿತ್ತು. ಆದರೆ, ತನಿಖಾಧಿಕಾರಿಗಳು ಈಗ ಕೊಲೆಯ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ, ಅಗ್ನಿಸ್ಪರ್ಶದ ಸಾವಿಗಿಂತ ಭಿನ್ನ ಲಕ್ಷಣಗಳು ಕಂಡುಬರುತ್ತಿವೆ.
ಕಾಂಗ್ರೆಸ್ ಮುಖಂಡರ ವಿಚಾರಣೆ: ಉದ್ಯಮಿ ಮತ್ತು ಸರ್ಕಾರಿ ಗುತ್ತಿಗೆದಾರರಾಗಿದ್ದ ಜಯಕುಮಾರ್ ಅವರ ಸಾವಿನ ಬಗ್ಗೆ ತಮಿಳುನಾಡು ಪೊಲೀಸರು ಕಾಂಗ್ರೆಸ್ ಮುಖಂಡರಾದ ನಂಗುನೇರಿ ಶಾಸಕ ರೂಬಿ ಮನೋಹರನ್ ಮತ್ತು ತಮಿಳುನಾಡು ಕಾಂಗ್ರೆಸ್ ಮಾಜಿ ಮುಖ್ಯಸ್ಥ ಕೆ.ವಿ. ತಂಗಬಾಲು ಅವರ ವಿಚಾರಣೆ ನಡೆಸಿದ್ದಾರೆ.
ಸಾವಿಗೆ ಕೆಲವು ದಿನಗಳ ಮೊದಲು ಬರೆದ ಪತ್ರದಲ್ಲಿ ಜಯಕುಮಾರ್, ಈ ಮೂವರು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ನನಗೆ ಹಣ ನೀಡಬೇಕಾದವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದರು. ಕೊಲೆ ನಂತರ ಪೊಲೀಸರಿಗೆ ಈ ಪತ್ರ ಸಿಕ್ಕಿದೆ. ʻತಾವು ಜಯಕುಮಾರ್‌ಗೆ ಯಾವುದೇ ಹಣ ನೀಡಬೇಕಿಲ್ಲ.ಆರೋಪ ನಿರಾಧಾರʼ ಎಂದು ಈ ನಾಯಕರು ಹೇಳಿದ್ದಾರೆ. ತಮಗೆ ವಂಚಿಸಿದವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು ಮತ್ತು ಸಾಲಗಾರರಿಂದ ಹಣ- ಆಸ್ತಿ ವಶಪಡಿಸಿಕೊಂಡು ಕುಟುಂಬಕ್ಕೆ ನೀಡಬೇಕೆಂದು ಜಯಕುಮಾರ್ ಪತ್ರದಲ್ಲಿ ಕೋರಿದ್ದರು.
ದೇಹವನ್ನುತಂತಿಯಿಂದ ಕಟ್ಟಲಾಗಿತ್ತು: ಸಾವಿಗೆ ಮುನ್ನ ಜಯಕುಮಾರ್ ಅವರನ್ನು ಉಕ್ಕಿನ ತಂತಿಯಿಂದ ಕಟ್ಟಿ ಹಾಕಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ʻಕೈಗಳ ಮೇಲೆ ಬೇಲಿಗೆ ಬಳಸುವ ಉಕ್ಕಿನ ತಂತಿಯಿಂದ ಕಟ್ಟಿದ ಗುರುತುಗಳಿದ್ದವು. ಶವಪರೀಕ್ಷೆ ನಡೆಸಿದ ವೈದ್ಯರು, ಇದು ಬೆಂಕಿ ಹಚ್ಚಿಕೊಂಡ ಪ್ರಕರಣವಲ್ಲ. ಸುಟ್ಟು ಹಾಕುವ ಮೊದಲು ಕೊಲ್ಲಲಾಗಿದೆ ಎಂದು ಹೇಳಿದರು,ʼಎಂದು ಅಧಿ ಕಾರಿಯೊಬ್ಬರು ಹೇಳಿದರು. ಮೃತರ ಬಾಯಿಯಲ್ಲಿ ಉಜ್ಜುವ ಬ್ರಷ್ ಪತ್ತೆಯಾಗಿದೆ.
ಶ್ವಾಸಕೋಶದಲ್ಲಿ ಯಾವುದೇ ಕಪ್ಪು ಕಣ ಕಂಡುಬಂದಿಲ್ಲ ಎಂದು ಮರಣೋತ್ತರ ವರದಿ ಹೇಳಿದೆ. ಬೆಂಕಿ ಹಚ್ಚಿದ ಪ್ರಕರಣಗಳಲ್ಲಿ ಇದು ಕಂಡುಬರುತ್ತದೆ. ಆದ್ದರಿಂದ, ಬೆಂಕಿ ಹಚ್ಚುವ ಮುನ್ನ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಿರುನಲ್ವೇಲಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಇದು ಕೊಲೆ ಎನ್ನುತ್ತಿದೆ. ಆದರೆ, ಪೊಲೀಸರು ಖಚಿತ ತೀರ್ಮಾನಕ್ಕೆ ಬರಲು ಶವಪರೀಕ್ಷೆ ವರದಿಗೆ ಕಾಯುತ್ತಿದ್ದಾರೆ.
ಇಲ್ಲಿ ಸೇರಿಸಲೇಬೇಕಾದ ಅಂಶವೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಇಷ್ಟು ಸಂಕೀರ್ಣ ವಿಧಾನವನ್ನು ಬಳಸುವುದಿಲ್ಲ.
ಕುತೂಹಲಕರ ಅಂಶವೇನಿದೆ?: ಆದರೆ, ಮರಣೋತ್ತರ ಪರೀಕ್ಷೆ ಇನ್ನೂ ಅಂತಿಮಗೊಳ್ಳಬೇಕಿದೆ. ಅಲ್ಲದೆ, ಜಯಕುಮಾರ್ ಅವರ ಪತ್ನಿ ಶವ ತನ್ನ ಪತಿಯದೇ ಎಂಬ ನಿರ್ಣಾಯಕವಾಗಿ ಹೇಳಿಲ್ಲ. ಡಿಎನ್ಎ ಪರೀಕ್ಷೆ ವರದಿ ಮತ್ತು ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬರುವವರೆಗೆ, ಪೊಲೀಸರು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅಲ್ಲದೆ, ಜಯಕುಮಾರ್ ಅವರ ಮೊಬೈಲ್ ಫೋನ್ ಪತ್ತೆಯಾಗಬೇಕಿದೆ. ಶವದ ಮೇಲೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಭ್ಯವಾಗಿವೆ. ಮೊಬೈನ್ ಮನೆ ಸಮೀಪವಿರುವ ಬಾವಿಗೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖಾ ತಂಡ ಸಿಸಿಟಿವಿ ದೃಶ್ಯಾವಳಿಗಳ ನ್ನು ಪರಿಶೀಲಿಸುತ್ತಿದೆ.
ಪೊಲೀಸ್ ವರಿಷ್ಠಾಧಿಕಾರಿ ಎನ್. ಸಿಲಂಬರಸನ್ ಪ್ರಕಾರ, ಕುಟುಂಬದ ಸದಸ್ಯರು, ನೆರೆಹೊರೆಯವರು ಮತ್ತು ಕಾಂಗ್ರೆಸ್ ಪಕ್ಷದ ಶಂಕಿತರು ಸೇರಿದಂತೆ 70 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಮಾತನಾಡಿ, ʻಪೊಲೀಸರಿಗೆ ಬರೆದ ಪತ್ರದಲ್ಲಿ ಜಯಕುಮಾರ್ ಅವರು ಪಕ್ಷದ ಕೆಲವರ ವಿರುದ್ಧ ಆರೋಪ ಮಾಡಿರುವುದರಿಂದ, ತನಿಖೆಗೆ ಪಕ್ಷ ಆಂತರಿಕ ಸಮಿತಿಯನ್ನು ರಚಿಸಿದೆʼ ಎಂದರು.
ಮನೆ ಬಳಿ ಶವ ಪತ್ತೆ: ತಂದೆ ಮೇ 2 ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪುತ್ರ ಕರುತಯ್ಯ ಜಾಫ್ರಿನ್(28) ಮೇ 3 ರಂದು ಸಂಜೆ ಉವರಿ ಪೊಲೀಸರಿಗೆ ದೂರು ಸಲ್ಲಿಸಿದರು. ಜಯಕುಮಾರ್ ಏಪ್ರಿಲ್ 30 ರಂದು ಬರೆದಿದ್ದಾರೆ ಎಂದು ಹೇಳಲಾದ ಟಿಪ್ಪಣಿಯನ್ನು ಕರುತ್ತಯ್ಯ ಸಲ್ಲಿಸಿದ್ದಾರೆ. ಮೇ 4 ರಂದು ಅವರ ಶವ ಅರ್ಧ ಸುಟ್ಟ ಸ್ಥಿತಿಯಲ್ಲಿ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಪತ್ತೆಯಾಗಿದೆ.