ಗುಕೇಶ್ ಗೆ ತಮಿಳುನಾಡು ಸಿಎಂ ಸನ್ಮಾನ
x

ಗುಕೇಶ್ ಗೆ ತಮಿಳುನಾಡು ಸಿಎಂ ಸನ್ಮಾನ


ಇತ್ತೀಚೆಗೆ ಕೆನಡಾದ ಟೊರೊಂಟೊದಲ್ಲಿ ನಡೆದ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಗೆದ್ದ ಡಿ. ಗುಕೇಶ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ 75 ಲಕ್ಷ ರೂ. ಚೆಕ್ ನೀಡಿ ಗೌರವಿಸಿದರು. ಶೀಲ್ಡ್ ಮತ್ತು ಶಾಲು ನೀಡಿ, ಅಭಿನಂದನೆ ಸಲ್ಲಿಸಿದರು.

ಚೆಸ್‌ನ ಅಂತಾರಾಷ್ಟ್ರೀಯ ಆಡಳಿತ ಮಂಡಳಿ(ಫೈಡ್) 1950ರಿಂದ ಆಯೋಜಿಸುತ್ತಿರುವ ಕ್ಯಾಂಡಿಡೇಟ್ಸ್ ಟೂರ್ನಮೆಂಟ್, ವಿಶ್ವ ಚೆಸ್ ಚಾಂಪಿಯನ್‌ಗೆ ಸವಾಲೆಯುವವರು ಯಾರು ಎಂಬುದನ್ನು ನಿರ್ಧರಿಸಲು ನಡೆಯುವ ಎಂಟು ಆಟಗಾರರ ಚೆಸ್ ಪಂದ್ಯಾವಳಿ. ವಿಜೇತರು ಪ್ರಸ್ತುತ ವಿಶ್ವ ಚಾಂಪಿಯನ್‌ ವಿರುದ್ಧ ಆಟವಾಡುತ್ತಾರೆ.

ಚೆನ್ನೈ ಮೂಲದ ಗುಕೇಶ್ ಅವರು ಅಮೆರಿಕದ ಹಿಕರು ನಕಮುರಾ ಅವರೊಂದಿಗೆ ಅಂತಿಮ ಸುತ್ತಿನಲ್ಲಿ ಡ್ರಾ ಮಾಡಿಕೊಂಡರು. ಪಂದ್ಯಾ ವಳಿಯಲ್ಲಿ ಗೆಲುವು ಸಾಧಿಸಿದರಲ್ಲದೆ, ವಿಶ್ವ ಛಾಂಪಿಯನ್‌ಶಿಪ್‌ಗೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರರಾದರು. ರಾಜ್ಯ ಸರ್ಕಾರದ ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ಗುಕೇಶ್‌ ಧನ್ಯವಾದ ಅರ್ಪಿಸಿದರು.

ತಮಿಳುನಾಡು ಸರ್ಕಾರವು ಕ್ಯಾಂಡಿಡೇಟ್ಸ್‌ ಟೂರ್ನಿಗೆ ತರಬೇತಿ ನೀಡಲು ಗುಕೇಶ್‌ ಅವರಿಗೆ 15 ಲಕ್ಷ ರೂ. ನೀಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸ್ಟಾಲಿನ್‌ ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಯುವಜನರು ತಮ್ಮ ಆಯ್ಕೆಯ ಕ್ರೀಡೆಯನ್ನು ಪ್ರತಿನಿತ್ಯ ಅಭ್ಯಾಸ ಮಾಡಬೇಕು. ಅದು ಅವರನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್, ಉನ್ನತ ಅಧಿಕಾರಿಗಳು ಮತ್ತು ಗುಕೇಶ್‌ ಅವರ ಪೋಷಕರು ಹಾಜರಿದ್ದರು.

Read More
Next Story