ಇದು ಭಾರತದ ಕೊನೆಯ ಮುಕ್ತ ಚುನಾವಣೆ ಆಗಬಹುದು: ಪರಕಾಲ ಪ್ರಭಾಕರ್
x

ಇದು ಭಾರತದ ಕೊನೆಯ ಮುಕ್ತ ಚುನಾವಣೆ ಆಗಬಹುದು: ಪರಕಾಲ ಪ್ರಭಾಕರ್


ʻಇದು ಭಾರತದಲ್ಲಿ ನಡೆಯಲಿರುವ ಕೊನೆಯ ಮುಕ್ತ ಚುನಾವಣೆಯಾಗಿರಬಹುದುʼ ಎಂದು ಆರ್ಥಿಕ ತಜ್ಞ ಮತ್ತು ರಾಜಕೀಯ ಕಾರ್ಯಕರ್ತ ಪರಕಾಲ ಪ್ರಭಾಕರ್ ಮತದಾರರಿಗೆ ಎಚ್ಚರಿಸಿದ್ದಾರೆ.

ಮಣಿಪುರದಲ್ಲಿನ ಕಲಹ ಮತ್ತು ಹಿಂಸಾಚಾರ ದೇಶದ ಇತರ ರಾಜ್ಯಗಳಲ್ಲಿ ಪುನರಾವರ್ತನೆಯಾಗಲಿದೆ. ಆರ್ಥಿಕ ದುಃಸ್ಥಿತಿ ಮತ್ತು ಅಸಮಾನತೆ ತೀವ್ರವಾಗಿ ಬೆಳೆಯುತ್ತದೆ ಎಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು. ʻನನ್ನ ಆತಂಕಗಳನ್ನು ನಾನು ಹಂಚಿಕೊಳ್ಳಲೇಬೇಕು, ಮತದಾರರು ಜಾಗರೂಕರಾಗಿರದಿದ್ದರೆ, ದೇಶದಲ್ಲಿ ಮತ್ತೊಂದು ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುವುದಿಲ್ಲ. ಮಣಿಪುರದಲ್ಲಿ ಏನಾಗುತ್ತಿದೆಯೋ ಅದು ದೇಶದ ಇತರ ರಾಜ್ಯಗಳಲ್ಲೂ ಆಗಬಹುದು. ಅದು ನಿಮ್ಮ ಬಾಗಿಲನ್ನು ತಟ್ಟುವುದಿಲ್ಲ ಎಂದು ಭಾವಿಸಬೇಡಿ. ಆರ್ಥಿಕ ದುಃಸ್ಥಿತಿ ಹೆಚ್ಚುತ್ತದೆ ಮತ್ತು ಸಮಾನತೆ ನಾಶವಾಗುತ್ತದೆʼ ಎಂದು ಅರ್ಥಶಾಸ್ತ್ರಜ್ಞ ಮತ್ತು 'ದಿ ಕ್ರೂಕ್ಡ್ ಟಿಂಬರ್ ಆಫ್ ನ್ಯೂ ಇಂಡಿಯಾ'ದ ಲೇಖಕ ಹೇಳಿದರು.

ʻಪ್ರಸ್ತುತ ಆಡಳಿತವನ್ನು ಶಿಕ್ಷಿಸಬೇಕಿದೆ. ಸಮಾನತೆಯ ನಾಶ, ಕೇಂದ್ರ-ರಾಜ್ಯ ಸಂಬಂಧಗಳು ವಿಷಮಿಸಿರುವುದು ಮತ್ತು ರಾಷ್ಟ್ರದ ಜಾತ್ಯತೀತ ವಿನ್ಯಾಸವನ್ನು ನಾಶಪಡಿಸಿದ್ದಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಅದು ಇನ್ನಷ್ಟು ನಡೆಯಲು ಬಾಗಿಲು ತೆರೆದಂತಾಗುತ್ತದೆʼ ಎಂದು ಪ್ರಭಾಕರ್ ಹೇಳಿದರು.

ಸರ್ಕಾರಿ ದತ್ತಾಂಶದ ಬಗ್ಗೆ ಸಂಶಯ: ಸರ್ಕಾರ ದೇಶದ ಆರ್ಥಿಕತೆ ಬಗ್ಗೆ ಬಿಂಬಿಸುತ್ತಿರುವ ಚಿತ್ರಣಕ್ಕೆ ತದ್ವಿರುದ್ಧ ಚಿತ್ರಣವನ್ನು ನೀಡಿದ ಪ್ರಭಾಕರ್, 'ದೇಶ ಹಸಿವು, ಅಸಮಾನತೆ ಮತ್ತು ಕ್ರೋನಿ ಬಂಡವಾಳಶಾಹಿಯಂಥ ಅತ್ಯಂತ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ' ಎಂದು ಟೀಕಿಸಿದರು. ʻಸಂಶಯಾಸ್ಪದʼ ಮತ್ತು ʻಕೌಶಲ್ಯದಿಂದʼ ನಿರ್ವಹಿಸಲ್ಪಟ್ಟಿಸುವ ಸರ್ಕಾರದ ಅಂಕಿಅಂಶಗಳ ಬಗ್ಗೆ ನಂಬಿಕೆಯಿಲ್ಲ. ಆರ್ಥಿಕತೆ ಉತ್ತಮ ವಾಗಿದೆಯೇ ಎಂದು ಅರ್ಥಮಾಡಿಕೊಳ್ಳಲು ಸರಳ ಸೂತ್ರವನ್ನು ಬಳಸುತ್ತೇನೆ. ಐದು ತಿಂಗಳ ಹಿಂದೆ ಬೇಳೆ, ಸಕ್ಕರೆ ಬೆಲೆಯನ್ನು ಈಗಿನ ದರಗಳಿಗೆ ಹೋಲಿಸಿ ನೋಡಬೇಕು. ದೇಶದಲ್ಲಿ ಕುಟುಂಬದ ಉಳಿತಾಯ ಶೇ.5ಕ್ಕೆ ಕುಸಿದಿದೆ ಮತ್ತು ಗೃಹಸಾಲ ಶೇ.40ಕ್ಕೆ ಹೆಚ್ಚಿದೆ. ಆದರೂ, ನಮ್ಮದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಸರ್ಕಾರ ಕೊಚ್ಚಿಕೊಳ್ಳುತ್ತಿದೆʼ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ʻನಾವು ಇಂಗ್ಲೆಂಡಿನಂಥ ಅಭಿವೃದ್ಧಿ ಹೊಂದಿದ ದೇಶವನ್ನು ಹಿಂದಿಕ್ಕಿದ್ದರೆ, 2047 ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಪ್ರಧಾನಿ ಏಕೆ ಭರವಸೆ ನೀಡುತ್ತಾರೆ. ನಾವು ಈಗಾಗಲೇ ಅಭಿವೃದ್ಧಿ ಹೊಂದಿದ ದೇಶವಾಗಿದ್ದೇವೆ. ಅಲ್ಲವೇ?ʼ ಎಂದು ಪ್ರಶ್ನಿಸಿದರು.

ದೇಶಿ ಹೂಡಿಕೆ ಅತ್ಯಂತ ಕಡಿಮೆ: ಸರ್ಕಾರ ಹೇಳುವಂತೆ ದೇಶ ಆರ್ಥಿಕವಾಗಿ ಚೈತನ್ಯಶೀಲ ಸ್ಥಿತಿಯಲ್ಲಿಲ್ಲ ಎಂಬುದನ್ನು ತೋರಿಸಲು ಪ್ರಭಾಕರ್ ಅಂಕಿಅಂಶಗಳನ್ನುನೀಡಿದರು: ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಸುಮಾರು 1.5 ಲಕ್ಷ ಮಂದಿ ಪ್ರತಿ ವರ್ಷ ದೇಶವನ್ನು ತೊರೆಯುತ್ತಿದ್ದಾರೆ. ದೇಶಿ ಹೂಡಿಕೆ ಅತ್ಯಂತ ಕಡಿಮೆ ಮಟ್ಟದಲ್ಲಿದೆ; ಶೇ. 30 ರಿಂದ ಶೇ.19ಕ್ಕೆ ಇಳಿದಿದೆ. ಕೈಗಾರಿಕೋದ್ಯಮಿಗಳಿಗೆ ಆರ್ಥಿಕತೆ ಮತ್ತು ದೇಶದ ಭವಿಷ್ಯದ ಬಗ್ಗೆ ವಿಶ್ವಾಸವಿಲ್ಲದ ಕಾರಣ ಹೂಡಿಕೆ ಮಾಡಲು ಸಿದ್ಧರಿಲ್ಲʼ ಎಂದು ಹೇಳಿದರು.

ʻಕಾರ್ಪೊರೇಟ್ ತೆರಿಗೆ ಕಡಿತ, 26 ಲಕ್ಷ ಕೋಟಿ ರೂ.ಗಳಷ್ಟು ಕಾರ್ಪೊರೇಟ್ ಸಾಲ ವಜಾ(ರೈಟ್‌ ಆಫ್‌), ಉತ್ಪಾದಕತೆ ಜೊತೆ ಜೋಡಣೆ ಗೊಂಡ ಹೂಡಿಕೆ ಯೋಜನೆಗಳ ಮೂಲಕ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದ್ದರೂ, ಹೂಡಿಕೆದಾರರು ಪ್ರತಿಕ್ರಿಯಿಸುತ್ತಿಲ್ಲ ಮತ್ತು ಉದ್ಯೋಗ ಸೃಷ್ಟಿಸುತ್ತಿಲ್ಲ. ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ದೇಶದಲ್ಲಿ ಇರಾನ್, ಯೆಮೆನ್, ಸಿರಿಯಾ ಮತ್ತು ಲೆಬನಾನ್ ದೇಶಗಳಿಗೆ ಸಮನಾದ ಶೇ.24 ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದಾರೆ. ನೆರೆಯ ಬಾಂಗ್ಲಾದೇಶದಲ್ಲಿ ಇದು ಶೇ.12 ಇದೆ. ಐಎಲ್‌ಒ ವರದಿ ಪ್ರಕಾರ, ದೇಶದಲ್ಲಿರುವ ಒಟ್ಟು ನಿರುದ್ಯೋಗಿಗಳಲ್ಲಿ ಶೇ.65 ರಷ್ಟು ವಿದ್ಯಾವಂತರುʼ ಎಂದು ವಿವರಿಸಿದರು.

ಚುನಾವಣೆ ಬಾಂಡ್‌ ದೊಡ್ಡ ಹಗರಣ: ಚುನಾವಣಾ ಬಾಂಡ್‌ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ,ʻ ಇದು ದೇಶದ ದೊಡ್ಡ ಹಗರಣ.100 ಕೋಟಿ ರೂ. ಬಾಂಡ್‌ಗಳನ್ನು ಪಡೆದುಕೊಂಡ ಸರ್ಕಾರ ಇದಕ್ಕಾಗಿ ಎಷ್ಟು 1,000 ಕೋಟಿ ರೂ.ಗಳನ್ನು ಕಳೆದುಕೊಂಡಿತು? ಈ ಯೋಜನೆಯಡಿಯಲ್ಲಿ ಯಾವ ರೀತಿಯ ಅಕ್ರಮ ಹಣ ವರ್ಗಾವಣೆ ಆಗಿರಬಹುದು? ಚುನಾವಣೆ ಬಾಂಡ್‌ಗಳನ್ನು ವಿರೋಧಿಸಿದವರು 'ಪಶ್ಚಾತ್ತಾಪ ಪಡುತ್ತಾರೆ' ಎಂದು ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಹೇಳಿರುವುದರ ಅರ್ಥವೇನು? ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಧೀಶರು ತಮ್ಮ ಆದೇಶಕ್ಕೆ ಪಶ್ಚಾತ್ತಾಪ ಪಡುತ್ತಾರೆ ಎಂದು ಅವರು ಭಾವಿಸಿದ್ದಾರಾ?ʼ ಎಂದು ಪ್ರಶ್ನಿಸಿದರು.

ಅಸಮಾನತೆಯ ಸಮಸ್ಯೆ: ʻಬಡವರು ಮತ್ತು ನಿರುದ್ಯೋಗಿಗಳ ಬಗ್ಗೆ ಬಿಜೆಪಿ ಸರ್ಕಾರ ಯಾವುದೇ ಅನುಕಂಪ ತೋರಿಸುತ್ತಿಲ್ಲ. ಸರ್ಕಾರ ದೇಶದಲ್ಲಿ ಸಮಾನತೆಯನ್ನು ಸಂಪೂರ್ಣವಾಗಿ ತೊಡೆದುಹಾಕಿದೆ. ವಿಶ್ವ ಅಸಮಾನತೆ ವರದಿಯ ಅಂಕಿಅಂಶಗಳ ಪ್ರಕಾರ, ಜನಸಂಖ್ಯೆಯ ಶೇ.1ರಷ್ಟು ಜನ ಒಟ್ಟು ಆದಾಯದ ಶೇ.22 ರಷ್ಟನ್ನು ಮತ್ತು ಶೇ.40 ಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ದೇಶದಲ್ಲಿ ಅತ್ಯಂತ ಗಂಭೀರವಾದ ಅಸಮಾನತೆ ಇದೆ. ಆದರೆ, ವರದಿಗೆ ಪ್ರತಿಕ್ರಿಯಿಸಿದ ವಿತ್ತ ಆಯೋಗದ ಅಧ್ಯಕ್ಷ ಅರವಿಂದ್ ಪನಗರಿಯಾ, ಅಸಮಾನತೆಯ ಬಗ್ಗೆ ನಿದ್ರೆ ಕಳೆದುಕೊಳ್ಳಬೇಡಿ ಎಂಬ ಲೇಖನ ಬರೆದಿದ್ದಾರೆʼ ಎಂದು ಹೇಳಿದರು.

ಜಾಮ್‌ನಗರದಲ್ಲಿ ಅಂಬಾನಿ ಕುಟುಂಬದ ವಿವಾಹಪೂರ್ವ ಕಾರ್ಯಕ್ರಮವನ್ನು ಉಲ್ಲೇಖಿಸಿ, ಸಣ್ಣ ಪಟ್ಟಣದಲ್ಲಿ ವಿವಾಹಪೂರ್ವ ಕಾರ್ಯ ಕ್ರಮಕ್ಕೆ ಅತಿಥಿಗಳ ಸಂಚಾರಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಾಯುಪಡೆಯ ವಿಮಾನಗಳನ್ನು ನಿಯೋಜಿಸಿದ್ದನ್ನು ಲೇವಡಿ ಮಾಡಿದರು.

ಬಡತನದ ಅಣಕ: ವಿಶ್ವ ಹಸಿವು ಸೂಚ್ಯಂಕದಲ್ಲಿ ದೇಶದ ಸ್ಥಾನ ಕುರಿತು ನಿರ್ದಿಷ್ಟ ʻಸಚಿವʼ ರೊಬ್ಬರು ಗೇಲಿ ಮಾಡಿರುವುದನ್ನು ಉಲ್ಲೇಖಿಸಿ, ಬಿಜೆಪಿ ಸರ್ಕಾರ ಬಡತನ ಮತ್ತು ಹಸಿವನ್ನು ಹೇಗೆ ಕ್ಷುಲ್ಲಕಗೊಳಿಸುತ್ತದೆ ಎಂಬುದನ್ನು ತೋರಿಸಿದರು.

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅವರ ಭಾರತ ಭೇಟಿಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಲ್ಲವೇ ಎಂಬ ಪ್ರಶ್ನೆಗೆ ʻಚುನಾವಣೆ ಆಯುಕ್ತರನ್ನು ಆಯ್ಕೆ ಮಾಡುವ ವಿಧಾನದಿಂದ ನಿಷ್ಪಕ್ಷಪಾತ ಸಂಸ್ಥೆಯನ್ನು ಬೆಳೆಸಲು ಸಾಧ್ಯವಿಲ್ಲʼ ಎಂದು ಹೇಳಿದರು. ʻಅಧಿಕ ಪ್ರಮಾಣದಲ್ಲಿ ದ್ವೇಷದ ಮಾತು ಮತ್ತು ಧಾರ್ಮಿಕ ಚರ್ಚೆಗಳು ನಡೆಯುತ್ತಿದ್ದು, ಚುನಾವಣೆ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ. ಮಸ್ಕ್ ವಿಷಯ ಇದಕ್ಕೆ ಹೋಲಿಸಿದರೆ ಬಹಳ ಚಿಕ್ಕದುʼ ಎಂದು ಉತ್ತರಿಸಿದರು.

ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಕುರಿತು ʻಸಂವಿಧಾನದ ಹಾದಿಯಲ್ಲಿʼ ವೇದಿಕೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ, ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಾಜಿ ಮುಖ್ಯಸ್ಥ ಸಲೀಲ್ ಶೆಟ್ಟಿ ಅವರು ಇವಿಎಂಗಳನ್ನು ತಿರುಚಲಾಗುತ್ತಿದೆ ಎಂಬ ಶಂಕೆ ಇದೆ. ಆದರೆ, ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದರು.

Read More
Next Story