ಬರ ಪರಿಹಾರ: ಕರ್ನಾಟಕದ ಮನವಿ ಜುಲೈನಲ್ಲಿ ವಿಚಾರಣೆ
x

ಬರ ಪರಿಹಾರ: ಕರ್ನಾಟಕದ ಮನವಿ ಜುಲೈನಲ್ಲಿ ವಿಚಾರಣೆ


ನವದೆಹಲಿ, ಮೇ 6- ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್)ಯಿಂದ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕರ್ನಾಟಕ ಸರ್ಕಾರ ಸಲ್ಲಿಸಿರುವ ಮನವಿಯನ್ನು ಜುಲೈನಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಬರ ನಿರ್ವಹಣೆಗೆ ಕರ್ನಾಟಕ ಸರ್ಕಾರಕ್ಕೆ 3,400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರವು ಏಪ್ರಿಲ್ 29 ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಪ್ರಕರಣ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತು.

ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಚಾರದಲ್ಲಿ ರಾಜ್ಯವು ಅಫಿಡವಿಟ್ ಸಲ್ಲಿಸಲಿದೆ ಎಂದರು.3,450 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, 18,000 ಕೋಟಿ ರೂ. ನೆರವು ನೀಡಬೇಕೆಂದು ರಾಜ್ಯ ಮನವಿ ಮಾಡಿದೆ ಎಂದು ಕಳೆದ ವಾರ ವಿಚಾರಣೆ ವೇಳೆ ಸಿಬಲ್ ಪೀಠಕ್ಕೆ ತಿಳಿಸಿದ್ದರು.

ಹಿನ್ನೆಲೆ: ಬರ ಪರಿಹಾರ 3,450 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ 18,000 ಕೋಟಿ ನೆರವು ನೀಡಬೇಕೆಂದು ರಾಜ್ಯ ಮನವಿ ಮಾಡಿತ್ತು ಎಂದು ಕಳೆದ ವಾರ ವಿಚಾರಣೆ ವೇಳೆ ಸಿಬಲ್ ಪೀಠಕ್ಕೆ ತಿಳಿಸಿದ್ದರು. ಎನ್‌ಡಿಆರ್‌ಎಫ್ ಪ್ರಕಾರ, ಬರ ಪರಿಹಾರಕ್ಕೆ ಹಣಕಾಸು ನೆರವು ಬಿಡುಗಡೆ ಮಾಡದೆ ಇರುವ ಕೇಂದ್ರದ ಕ್ರಮವು ಸಂವಿಧಾನದ 14 ಮತ್ತು 21 ನೇ ವಿಧಿಯಡಿ ಖಾತರಿಪಡಿಸಿದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಘೋಷಿಸಲು ಅರ್ಜಿಯಲ್ಲಿ ಕೋರಲಾಗಿತ್ತು.

ರಾಜ್ಯ ತೀವ್ರ ಬರದಿಂದ ತತ್ತರಿಸುತ್ತಿದೆ. 236 ತಾಲೂಕುಗಳಲ್ಲಿ 223ನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಇದರಲ್ಲಿ 196 ತೀವ್ರ ಪೀಡಿತ ಮತ್ತು ಉಳಿದ 27 ಮಧ್ಯಮ ಪೀಡಿತ. 48 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಅಂದಾಜು 35,162 ಕೋಟಿ ರೂ. ನಷ್ಟವಾಗಿದೆ ಎಂದು ವಕೀಲ ಡಿ.ಎಲ್. ಚಿದಾನಂದ ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಕೇಂದ್ರದಿಂದ 18,171.44 ಕೋಟಿ ರೂ. ನೆರವು ಕೋರಲಾಗಿತ್ತು. ಅಂತರ್ ಸಚಿವಾಲಯದ ಕೇಂದ್ರ ತಂಡ (ಐಎಂಸಿಟಿ) ವರದಿ ಸ್ವೀಕರಿಸಿದ ಒಂದು ತಿಂಗಳೊಳಗೆ ಎನ್‌ಡಿಆರ್‌ಎಫ್‌ನಿಂದ ನೆರವು ನೀಡಬೇಕೆಂದಿದ್ದರೂ, ಆರು ತಿಂಗಳು ಕಳೆದರೂ ನೆರವು ಕುರಿತು ಕೇಂದ್ರ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ,ʼಎಂದು ಮನವಿಯಲ್ಲಿ ತಿಳಿಸಲಾಗಿತ್ತು.

Read More
Next Story