
ಕೇಜ್ರಿವಾಲ್ ಮನವಿ ಸೋಮವಾರ ವಿಚಾರಣೆ
ಹೊಸದಿಲ್ಲಿ, ಏಪ್ರಿಲ್ 13- ಅಬಕಾರಿ ನೀತಿ ಹಗರಣದಲ್ಲಿ ತಮ್ಮ ಬಂಧನವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಆದೇಶದ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್‌ನ ಜಾಲತಾಣದಲ್ಲಿರುವ ಪಟ್ಟಿ ಪ್ರಕಾರ, ಕೇಜ್ರಿವಾಲ್ ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠದ ಎದುರು ಏಪ್ರಿಲ್ 15 ರಂದು ವಿಚಾರಣೆಗೆ ಬರಲಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಬಂಧನವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಅವರು ಪದೇಪದೇ ಸಮನ್ಸ್ ಸ್ವೀಕರಿಸದೆ, ತನಿಖೆಗೆ ಸಹಕರಿಸದ ನಂತರ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಹೆಚ್ಚು ಆಯ್ಕೆಗಳು ಉಳಿದಿರಲಿಲ್ಲ ಎಂದು ಹೇಳಿದೆ. ಇಡಿ ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಇಡಿ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದ ಗಂಟೆಗಳ ನಂತರ, ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಬಂಧಿಸಲಾಯಿತು. ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದು, ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.