ಜಾರ್ಖಂಡ್ ಅಕ್ರಮ ಗಣಿಗಾರಿಕೆ: ಸಿಬಿಐ ತನಿಖೆಗೆ ಸುಪ್ರೀಂ ಅನುಮತಿ
ನವದೆಹಲಿ, ಮೇ 3: ಜಾರ್ಖಂಡದ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಆದರೆ, ಮುಂದಿನ ವಿಚಾರಣೆವರೆಗೆ ದೋಷಾರೋಪ ಪಟ್ಟಿ ಸಲ್ಲಿಸದಂತೆ ಸಿಬಿಐಗೆ ನಿರ್ಬಂಧ ವಿಧಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಜಾರ್ಖಂಡ್ ಸರ್ಕಾರದ ಮನವಿ ಕುರಿತು ಸಿಬಿಐನಿಂದ ಪ್ರತಿಕ್ರಿಯೆ ಕೇಳಿದೆ. ʻತನಿಖೆ ಮುಂದುವರಿಯಬಹುದು. ಆದರೆ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಸಿಬಿಐ ದೋಷಾರೋಪಪಟ್ಟಿ /ಅಂತಿಮ ವರದಿ ಸಲ್ಲಿಸುವಂತಿಲ್ಲʼ ಎಂದು ಶರತ್ತು ವಿಧಿಸಿದೆ.
2023ರ ಆಗಸ್ಟ್ 18 ರಂದು ಹೈಕೋರ್ಟ್ ಸಿಬಿಐನಿಂದ ಪ್ರಾಥಮಿಕ ತನಿಖೆಗೆ ಮಾತ್ರ ಆದೇಶಿಸಿತ್ತು ಎಂಬ ಅಂಶವನ್ನುಕೋರ್ಟ್ ಗಮನಿಸಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿಲ್ಲ ಮತ್ತು ಈ ವಿಷಯದಲ್ಲಿ ಮುಕ್ತಾಯದ ವರದಿಯನ್ನು ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಸಿಬಿಐ ತನಿಖೆ ವಿರುದ್ಧ ರಾಜ್ಯದ ಮನವಿಯನ್ನು ಫೆಬ್ರವರಿ 23 ರಂದು ಹೈಕೋರ್ಟ್ ತಿರಸ್ಕರಿಸಿತ್ತು.
2023ರ ಆಗಸ್ಟ್‌ನಲ್ಲಿ ಸಿಬಿಐಗೆ ಪ್ರಕರಣದ ಪ್ರಾಥಮಿಕ ತನಿಖೆಗೆ ನಿರ್ದೇಶನ ನೀಡಿದ್ದರಿಂದ, ರಾಜ್ಯದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ಜಾರ್ಖಂಡ್ ಸರ್ಕಾರವು ವಕೀಲ ಜಯಂತ್ ಗುಪ್ತಾ ಮೂಲಕ ಸಲ್ಲಿಸಿದ ಮೇಲ್ಮನವಿಯಲ್ಲಿ ಹೇಳಿದೆ. ಜಾರ್ಖಂಡ್ ಪರ ಕಪಿಲ್ ಸಿಬಲ್ ಮತ್ತು ಅರುಣಭ್ ಚೌಧರಿ ಅವರು ವಾದ ಮಂಡಿಸಿದ್ದರು.
ʻಡಿಎಸ್‌ಪಿಇ ಕಾಯಿದೆಯ ಸೆಕ್ಷನ್ 6 ರಡಿ ವಿಧಿಸಿದ ನಿರ್ಬಂಧವನ್ನು ಹೈಕೋರ್ಟ್ ಕಡೆಗಣಿಸಿದೆ. ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯ. ಆದ್ದರಿಂದ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದ ನಂತರವೇ ಸಿಬಿಐ ತನಿಖೆ ನಡೆಸಬಹುದಿತ್ತು. ಅಂತಹ ಒಪ್ಪಿಗೆಯ ಅನುಪಸ್ಥಿತಿಯಲ್ಲಿ ಎಫ್‌ಐಆರ್‌ನ ನೋಂದಣಿಯೇ ಕಾನೂನುಬಾಹಿರ,ʼ ಎಂದು ಹೇಳಿದೆ.