ಪ್ರಧಾನಿ ಕೆಲವು ಶ್ರೀಮಂತ ಉದ್ಯಮಿಗಳ ಸಾಧನ: ರಾಹುಲ್
x

ಪ್ರಧಾನಿ 'ಕೆಲವು ಶ್ರೀಮಂತ ಉದ್ಯಮಿಗಳ ಸಾಧನ': ರಾಹುಲ್


ಏಪ್ರಿಲ್‌ 16- ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೆಲವು ಶ್ರೀಮಂತ ಉದ್ಯಮಿಗಳ ಸಾಧನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ʻನಿಜವಾದ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯುವುದು, ಶ್ರೀಮಂತ ಉದ್ಯಮಿಗಳನ್ನು ರಕ್ಷಿಸುವುದು ಮತ್ತು ಅವರ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದು ಮೋದಿಯವರ ಕೆಲಸ. ಅವರು ದೇಶದ ಐದಾರು ಭಾರಿ ಶ್ರೀಮಂತ ಉದ್ಯಮಿಗಳ ಸಾಧನʼ ಎಂದು ಕೋಯಿಕ್ಕೋಡ್ ಜಿಲ್ಲೆಯ ಕೊಡಿಯತ್ತೂರ್‌ನಲ್ಲಿ ನಡೆದ ರೋಡ್‌ಶೋನಲ್ಲಿ ಹೇಳಿದರು.

ʻಪ್ರಧಾನಿ ದೇಶದ 20-25 ಜನರಿಗೆ ಸುಮಾರು 16 ಲಕ್ಷ ಕೋಟಿ ರೂ. ನೀಡಿದ್ದಾರೆ. ಆದರೆ, ರೈತರ ಸಮಸ್ಯೆಗಳು, ನಿರುದ್ಯೋಗ ಅಥವಾ ಬೆಲೆ ಏರಿಕೆ ಬಗ್ಗೆ ಮಾತನಾಡುವುದಿಲ್ಲ. ಚುನಾವಣೆ ಬಾಂಡ್‌ಗಳು ಪಿಎಂ ಮೋದಿ ನಡೆಸಿದ ಸುಲಿಗೆಯ ಒಂದು ರೂಪʼ ಎಂದು ಹೇಳಿದರು.

ಸಂವಿಧಾನ ನಾಶ ಪ್ರಯತ್ನ: ʻಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನವನ್ನು ನಾಶಪಡಿಸಲು ಹಾಗೂ ಬದಲಿಸಲು ಪ್ರಯತ್ನಿಸುತ್ತಿವೆ. ಇದು 2024 ರ ಲೋಕಸಭೆ ಚುನಾವಣೆಯ ಏಕೈಕ ದೊಡ್ಡ ವಿಷಯ ಮತ್ತು ಇತರ ಎಲ್ಲ ವಿಷಯಗಳು ಅದರಿಂದ ಹೊರಹೊಮ್ಮಿವೆʼ ಎಂದು ಹೇಳಿದರು. ಬೆಳಗ್ಗೆ 11.30 ರ ಸುಮಾರಿಗೆ ಕೊಡಿಯತ್ತೂರಿನಿಂದ ರೋಡ್ ಶೋ ಆರಂಭಿಸಿದರು.

ವಯನಾಡಿನಿಂದ 2ನೇ ಬಾರಿ ಸ್ಪರ್ಧಿಸಿರುವ ಅವರು, ಚುನಾವಣೆ ದಿನಾಂಕ ಘೋಷಣೆಯಾದ ನಂತರ ಎರಡನೇ ಬಾರಿ ಏಪ್ರಿಲ್ 15 ರಂದು ಕ್ಷೇತ್ರಕ್ಕೆ ಬಂದಿದ್ದಾರೆ. ತಿಂಗಳ ಆರಂಭದಲ್ಲಿ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿ, ರೋಡ್ ಶೋ ನಡೆಸುವ ಮೂಲಕ ಪ್ರಚಾರ ಆರಂಭಿಸಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ 4,31,770 ಮತಗಳ ದಾಖಲೆ ಅಂತರದಿಂದ ಗೆದ್ದಿದ್ದರು.

ಕೇರಳದ 20 ಲೋಕಸಭೆ ಸ್ಥಾನಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.

Read More
Next Story