ಪ್ರತಿದಿನ ಅದಾನಿ, ಅಂಬಾನಿಗಳನ್ನು ಬಯಲಿಗೆಳೆಯುವ ರಾಹುಲ್; ಪ್ರಿಯಾಂಕಾ
ಪ್ರಧಾನಿ ಕೈಗಾರಿಕೋದ್ಯಮಿಗಳೊಂದಿಗೆ ನಂಟು ಹೊಂದಿದ್ದು, ಬಿಜೆಪಿ ಉದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಕೈಬಿಡಲು ಸಹಾಯ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ದೂರಿದ್ದಾರೆ.
ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರೊಂದಿಗೆ ರಾಹುಲ್ ಗಾಂಧಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇಡೀ ಬಿಜೆಪಿ ಯಂತ್ರವು ರಾಹುಲ್ ಬಗ್ಗೆ ಸುಳ್ಳು ಹರಡುವುದರಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.
ಉದ್ಯಮಿಗಳೊಂದಿಗೆ ನಂಟು: ತೆಲಂಗಾಣದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ, ʻಕಾಂಗ್ರೆಸ್ಸಿನ ಶೆಹಜಾದಾ ಕಳೆದ ಐದು ವರ್ಷಗಳಿಂದ ಅಂಬಾನಿ-ಅದಾನಿ ಸಮಸ್ಯೆಯನ್ನು ಎತ್ತುವುದನ್ನುಏಕೆ ನಿಲ್ಲಿಸಿದೆ ಎಂಬುದನ್ನು ಜನರಿಗೆ ವಿವರಿಸಬೇಕುʼ ಎಂದು ಹೇಳಿದ್ದರು. ʻಅದಾನಿ, ಅಂಬಾನಿ ಹೆಸರನ್ನು ರಾಹುಲ್ ಏಕೆ ಎತ್ತುತ್ತಿಲ್ಲ ಎಂದು ಪ್ರಧಾನಿ ಈಗ ಕೇಳುತ್ತಿದ್ದಾರೆ. ರಾಹುಲ್ ಪ್ರತಿದಿನ ಆ ಕೆಲಸ ಮಾಡುತ್ತಾರೆ. ಪ್ರತಿದಿನ ಅವರ ಸತ್ಯವನ್ನು ನಿಮ್ಮ ಮುಂದೆ ತರುತ್ತಾರೆʼ ಎಂದು ಹೇಳಿದರು.
ʻಬಿಜೆಪಿ ಉದ್ಯಮಿಗಳೊಂದಿಗೆ ನಂಟು ಹೊಂದಿದೆ ಎಂದು ನಾವು ಪ್ರತಿದಿನ ಹೇಳುತ್ತೇವೆ. ಪ್ರಧಾನಿ ಕೋಟ್ಯಧಿಪತಿಗಳ 16 ಲಕ್ಷ ಕೋಟಿ ರೂ. ಮನ್ನಾ ಮಾಡಿದ್ದಾರೆ. ಇದು ಯಾರ ಹಣ? ಇದು ಪ್ರಧಾನಿಯವರ ಹಣವಲ್ಲ; ದೇಶದ ಹಣ,ʼ ಎಂದು ಹೇಳಿದರು. ʻಬಿಜೆಪಿ ನಾಯಕರು ಹಣದುಬ್ಬರ ಮತ್ತು ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ; ಧರ್ಮ, ಜಾತಿ, ದೇವಸ್ಥಾನ ಮತ್ತು ಮಸೀದಿ ಬಗ್ಗೆ ಮಾತನಾಡುತ್ತಾರೆ. ಆದರೆ, ನಿಮ್ಮ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ರೈತರ ಸಮಸ್ಯೆಗಳು ಮತ್ತು ನಿರುದ್ಯೋಗದ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಾಗಿ, 5 ಕೆಜಿ ಆಹಾರ ಧಾನ್ಯ ನೀಡುತ್ತದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ನಿರುದ್ಯೋಗವನ್ನು ತೊಡೆದುಹಾಕುವ ಬದಲು ನಿರೀಕ್ಷೆಗಳನ್ನು ಮುರಿಯುವ ಯೋಜನೆಗಳನ್ನು ತರುತ್ತದೆʼ ಎಂದು ಹೇಳಿದರು.
ರಾಯ್ ಬರೇಲಿ ಜನರೊಂದಿಗೆ ಕುಟುಂಬದ ಒಡನಾಟದ ಬಗ್ಗೆ ಮಾತನಾಡಿ, ʻಇಂದಿರಾ ಗಾಂಧಿಯವರ ಕಾಲದಿಂದಲೂ ಗಾಂಧಿ ಕುಟುಂಬ ರಾಯ್ ಬರೇಲಿಯೊಂದಿಗೆ ವೈಯಕ್ತಿಕ ಬಾಂಧವ್ಯ ಹೊಂದಿದೆ. ರಾಹುಲ್ ಗಾಂಧಿ ಆಯ್ಕೆ ಮಾಡಿದಲ್ಲಿ ಇಬ್ಬರು ಪ್ರತಿನಿಧಿಗಳು ಸಿಗುತ್ತಾರೆ. ಸಹೋದರ ಮತ್ತು ತಾವುʼ ಎಂದು ಹೇಳಿದರು.
ಜನರು ವಿವೇಚನಾಶೀಲರು: ʻರಾಯ್ ಬರೇಲಿಯ ಜನರು ನಾಯಕರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಇಂದಿರಾ ಗಾಂಧಿ ಅವರ ಕೆಲವು ನೀತಿಗಳು ಇಷ್ಟವಾಗದಿದ್ದಾಗ ಜನ ಅವರನ್ನು ಸೋಲಿಸಿದರು. ಇಂದಿರಾ ಕೋಪಗೊಳ್ಳದೆ ಆತ್ಮಾವಲೋಕನ ಮಾಡಿಕೊಂಡರು. ಜನರು ಅವರನ್ನು ಮತ್ತೆ ಆಯ್ಕೆ ಮಾಡಿದರು. ನಾಯಕರನ್ನು ಅರ್ಥಮಾಡಿಕೊಳ್ಳುವುದು ರಾಯ್ ಬರೇಲಿಯ ಜನರ ವಿಶೇಷʼ ಎಂದು ಹೇಳಿದರು.
ರಾಹುಲ್ ವಿರುದ್ಧ ಸುಳ್ಳಿನ ಸರಮಾಲೆ: ʻ ಇಡೀ ಬಿಜೆಪಿ ಯಂತ್ರ ರಾಹುಲ್ ಬಗ್ಗೆ ಸುಳ್ಳುಗಳನ್ನು ಹರಡುತ್ತದೆ. ಅವರನ್ನು ಸಂಸತ್ತಿನಿಂದ ಹೊರಹಾಕಲಾಯಿತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾಲ್ಕು ಸಾವಿರ ಕಿಲೋಮೀಟರ್ ಕ್ರಮಿಸಿದರು: ಆನಂತರ, ಮಣಿಪುರದಿಂದ ಮುಂಬೈಗೆ ಪ್ರಯಾಣಿಸಿದರು. ಇದು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನಡೆಸಿದ ಪ್ರಯಾಣಗಳುʼ ಎಂದರು.
ಕಳೆದ ಶುಕ್ರವಾರ ರಾಯ್ ಬರೇಲಿ ಕ್ಷೇತ್ರದಿಂದ ರಾಹುಲ್ ನಾಮಪತ್ರ ಸಲ್ಲಿಸಿದ್ದಾರೆ. ಅವರ ವಿರುದ್ಧ ಬಿಜೆಪಿ ಉತ್ತರ ಪ್ರದೇಶದ ಸಚಿವ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಮೇ 20 ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.