ರಾಘವ್ ಚಡ್ಡಾ ಗೈರುಹಾಜರಿ: ಆಪ್‌  ಸಮರ್ಥನೆ
x

ರಾಘವ್ ಚಡ್ಡಾ ಗೈರುಹಾಜರಿ: ಆಪ್‌ ಸಮರ್ಥನೆ


ಲೋಕಸಭೆ ಚುನಾವಣೆ ಸಮಯಯಲ್ಲಿ ಆಪ್ ಸಂಸದ ರಾಘವ್ ಚಡ್ಡಾ ಅವರ ಗೈರುಹಾಜರಿ ಬಗ್ಗೆ ಊಹಾಪೋಹ ಎದ್ದಿದೆ. ಚಡ್ಡಾ ಇಂಗ್ಲೆಂಡಿನಲ್ಲಿ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಸಮರ್ಥಿಸಿಕೊಂಡಿದ್ದಾರೆ. ಭಾರದ್ವಾಜ್ ಪ್ರಕಾರ, ಚಡ್ಡಾ ಅವರ ಸ್ಥಿತಿ ಗಂಭೀರವಾಗಿದ್ದು, ಅವರು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ʻಅವರು ಶೀಘ್ರವೇ ಮರಳಲಿದ್ದು, ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಆಶಿಸುತ್ತೇನೆʼ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ʻಕಣ್ಣಿನ ಅಕ್ಷಿಪಟಲ ಬೇರ್ಪಡುವಿಕೆಯನ್ನು ತಡೆಯಲು ವಿಟ್ರಿಯಕ್ಟಮಿ ಶಸ್ತ್ರಚಿಕಿತ್ಸೆಗೆಂದು ಚಡ್ಡಾ ಯುಕೆಗೆ ಹೋಗಿದ್ದಾರೆʼ ಎಂದು ಎಎಪಿ ಈ ಹಿಂದೆ ಹೇಳಿತ್ತು. ರಾಘವ್ ಚಡ್ಡಾ ಸೇರಿದಂತೆ ಇತರ ನಾಲ್ವರು ಎಎಪಿ ನಾಯಕರನ್ನು ಮುಂದಿನ ಎರಡು ತಿಂಗಳಲ್ಲಿ ಇಡಿ ಬಂಧಿಸಲಿದೆ ಎಂದು ದೆಹಲಿ ಸಚಿವೆ ಅತಿಶಿ ಈ ಹಿಂದೆ ಹೇಳಿದ್ದರು.

ಬಂಧನದ ಭೀತಿ: ಚಡ್ಡಾ ಅವರು ಮಾರ್ಚ್ 8 ರಿಂದ ಲಂಡನ್‌ನಲ್ಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ನಿಕಟವರ್ತಿಯಾಗಿರುವ ಚಡ್ಡಾ, ಪ್ರಮುಖ ಇಲಾಖೆಗಳನ್ನು ನಿಭಾಯಿಸಿದ್ದರು ಮತ್ತು ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ದಾಳಿಯಲ್ಲಿ ಮುಂಚೂಣಿಯಲ್ಲಿದ್ದರು. ಕೇಜ್ರಿವಾಲ್‌ ಅವರ ಬಂಧನದೊಂದಿಗೆ ಆಪ್‌ ತೀವ್ರ ಸಂಕಷ್ಟದಲ್ಲಿರುವಾಗ, ನಾಪತ್ತೆಯಾಗಿದ್ದಾರೆ.

ಏತನ್ಮಧ್ಯೆ, ಚಡ್ಡಾ ಅವರ ಪತ್ನಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ತಮ್ಮ ಹೊಸ ಚಿತ್ರ ಇಮ್ತಿಯಾಜ್ ಅಲಿ ನಿರ್ದೇಶನದ 'ಅಮರ್ ಸಿಂಗ್ ಚಮ್ಕಿಲಾ' ಬಿಡುಗಡೆಗೆ ಮುನ್ನ ದೇಶಕ್ಕೆ ಮರಳಿದ್ದಾರೆ. ಆದರೆ, ಚಡ್ಡಾ ಇನ್ನೂ ಲಂಡನ್‌ನಲ್ಲೇ ಉಳಿದುಕೊಂಡಿರುವುದು ಪ್ರಶ್ನೆಗಳನ್ನು ಎತ್ತಿದೆ. ಆದರೆ, ಚಡ್ಡಾ ಅವರು ಎಕ್ಸ್‌ ನಲ್ಲಿ ಸಕ್ರಿಯರಾಗಿದ್ದಾರೆ. ಏಪ್ರಿಲ್ 28 ರಂದು ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಪಶ್ಚಿಮ ದೆಹಲಿಯಲ್ಲಿ ರೋಡ್‌ಶೋ ನಡೆಸುತ್ತಿರುವ ವಿಡಿಯೋ ಮರುಟ್ವೀಟ್ ಮಾಡಿದ್ದರು.

ಬಿಜೆಪಿ ಲೇವಡಿ: ಬಿಜೆಪಿ ಚಡ್ಡಾ ಅವರ ಗೈರುಹಾಜರಿಯನ್ನು ಲೇವಡಿ ಮಾಡಿದೆ. ಬಿಜೆಪಿ ಐಟಿ ಕೋಶದ ಮುಖ್ಯಸ್ಥ ಅಮಿತ್ ಮಾಳವೀಯ, ಚಿಕಿತ್ಸೆಗೆ ಇಂಗ್ಲೆಂಡಿಗೆ ಹೋಗಿರುವುದನ್ನು ಪ್ರಶ್ನಿಸಿ, ʻದೆಹಲಿಯ ಮೊಹಲ್ಲಾ ಚಿಕಿತ್ಸಾಲಯಗಳು ಮತ್ತು ಆರೋಗ್ಯ ಮಾದರಿ ಏನಾಯಿತು?ʼ ಎಂದು ಕೇಳಿದ್ದಾರೆ. ʻಪರಿಣಿತಿ ಚೋಪ್ರಾ ಅವರು ಹಿಂದಿರುಗಿದ್ದರೂ, ಚಡ್ಡಾ ಅವರು ವಾಪಸಾಗಿಲ್ಲ.ಪರಿಣಿತಿ ಅವರಿಗೆ ಇತರ ಮುಖ್ಯ ಕೆಲಸ ಇರುವಂತಿದೆ. ಅಥವಾ ಶಸ್ತ್ರಚಿಕಿತ್ಸೆ ಒಂದು ನೆಪವೇ?ʼ ಎಂದು ಮಾಳವೀಯ ಟ್ವೀಟ್ ಮಾಡಿದ್ದಾರೆ.

Read More
Next Story