ಜಾತಿ ಗಣತಿ ನನ್ನ ಜೀವನದ ಧ್ಯೇಯ: ರಾಹುಲ್
x

ಜಾತಿ ಗಣತಿ ನನ್ನ ಜೀವನದ ಧ್ಯೇಯ: ರಾಹುಲ್

ಕಾಂಗ್ರೆಸ್ ಪ್ರಣಾಳಿಕೆಯಿಂದ ಅಧೈರ್ಯಗೊಂಡ ಪ್ರಧಾನಿ


ʻತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಮೋದಿ ಅವರನ್ನು ಅಧೈರ್ಯಗೊಳಿಸಿದೆʼ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ದೇಶಾದ್ಯಂತದ 102 ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಮೃದ್ಧ್ ಭಾರತ್ ಫೌಂಡೇಶನ್‌ನ ಸಾಮಾಜಿಕ ನ್ಯಾಯ ಸಮಾವೇಶದಲ್ಲಿ ಮಾತನಾಡಿ, ʻಪ್ರಧಾನಿ ಹೆದರಿದ್ದಾರೆʼ ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಆಸ್ತಿಗಳನ್ನು ಮರುಹಂಚಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆ ಹೇಳಿದ್ದರು.

ಜಾತಿಗಣತಿ ನಡೆಯಬೇಕು: ʻದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.90 ಮಂದಿಯ ಪರಿಸ್ಥಿತಿಯನ್ನು ನಿರ್ಧರಿಸಲು ಜಾತಿ ಜನಗಣತಿ ಮಾಡಬೇಕು. ನಮ್ಮ ಸಮಾಜದ ಎಕ್ಸ್ ರೇ ಮಾಡಬೇಕು ಎಂದಷ್ಟೇ ನಾನು ಹೇಳಿದೆ. ಯಾವುದೇ ದೇಶಭಕ್ತ ಇದನ್ನು ಸ್ವಾಗತಿಸುತ್ತಾನೆ. ಏಕೆಂದರೆ, ನಾನು ಪ್ರಸ್ತಾಪಿಸುತ್ತಿರುವುದು ದೇಶವನ್ನು ಬಲಪಡಿಸುವ ಕೆಲಸ. ವಿಪರ್ಯಾಸವೆಂದರೆ, ನರೇಂದ್ರ ಮೋದಿಯವರಂತೆ ತಾವು ದೇಶಪ್ರೇಮಿಗಳು ಎಂದು ಕರೆದುಕೊಳ್ಳುವವರು ಎಕ್ಸ್ ರೇ ಅನ್ನು ವಿರೋಧಿಸಿದರು,ʼ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದ ತಮ್ಮನ್ನು ಒಬಿಸಿ ಎಂದು ಗುರುತಿಸಿಕೊಂಡಿರುವ ಪ್ರಧಾನಿ, ಈಗ ಜಾತಿಹೀನ ಎಂದು ಏಕೆ ಕರೆದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ಕೇಳಿದರು.

ʻಇಷ್ಟು ವರ್ಷಗಳಿಂದ ಮೋದಿಯವರು ತಮ್ಮನ್ನು ಒಬಿಸಿ ಎಂದು ಕರೆದುಕೊಂಡರು. ಆದರೆ, ನಾನು ಜಾತಿ ಗಣತಿ ಬಗ್ಗೆ ಮಾತನಾಡಿದ ಮರುಕ್ಷಣವೇ ತಮಗೆ ಜಾತಿ ಇಲ್ಲ ಎಂದು ಹೇಳಿದರು. ಜಾತಿ ಇಲ್ಲ ಎಂದಾದರೆ ಅವರು ಒಬಿಸಿ ಹೇಗೆ?. ಶ್ರೀಮಂತರು ಮತ್ತು ಬಡವರು ಎಂಬ ಎರಡು ಜಾತಿ ಮಾತ್ರ ಇದೆ ಎಂದು ಮೋದಿ ಹೇಳುತ್ತಾರೆ. ನಾನು ಕೇಳುತ್ತೇನೆ; ದಲಿತ, ಆದಿವಾಸಿ ಅಥವಾ ಒಬಿಸಿಯಲ್ಲಿ ಎಷ್ಟು ಶ್ರೀಮಂತ ವ್ಯಕ್ತಿಗಳಿದ್ದಾರೆ?ʼ ಎಂದು ಪ್ರಶ್ನಿಸಿದರು.

ಧ್ಯೇಯದಲ್ಲಿ ರಾಜಿಯಿಲ್ಲ: ʻಆದಾಯ ಅಸಮಾನತೆ ಸರಿಪಡಿಸಲು 16 ಲಕ್ಷ ಕೋಟಿ ರೂ. ಸಾಲ ನೀಡುವುದು ಮತ್ತು ಬಡವರಿಗೆ ತೆರಿಗೆ ಮನ್ನಾ ಮಾಡುವುದು ಮುಖ್ಯʼ ಎಂದು ರಾಹುಲ್ ಹೇಳಿದರು.

ʻಜಾತಿ ಗಣತಿ ನನ್ನ ಧ್ಯೇಯ. ರಾಜಕೀಯವು ಹೊಂದಾಣಿಕೆ ಇರಬಹುದು; ಆದರೆ, ಧ್ಯೇಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದಾಯದ ಅಸಮಾನತೆ ಸರಿಪಡಿಸಲು, ಮೋದಿಯವರು ಶ್ರೀ ಮಂತರಿಗೆ ನೀಡಿದ ಹಣದ ಒಂದು ಭಾಗವನ್ನು( 16 ಲಕ್ಷ ಕೋಟಿ ರೂ ಸಾಲ ಮತ್ತು ತೆರಿಗೆ ಮನ್ನಾ) ಬಡವರಿಗೆ ನೀಡಬೇಕು ಎಂದುಕೊಂಡಿದ್ದೇವೆ. ಎಲ್ಲ ಹಣ ಕೊಡುತ್ತೇವೆ ಎಂದು ನಾನು ಹೇಳಿಲ್ಲ. ಆದರೆ, ಕನಿಷ್ಠ ಒಂದು ಭಾಗವನ್ನು ಅವರಿಗೆ ನೀಡಿ,ʼ ಎಂದು ಹೇಳಿದರು.

ʻಹಿಂದುಳಿದವರು ಮತ್ತು ಬಡವರ ಇತಿಹಾಸವನ್ನು ಅಳಿಸುವುದು ಬಿಜೆಪಿಯ ಧ್ಯೇಯ. ಅವರು ನಿಮ್ಮನ್ನು ನಿಮ್ಮ ಭೂತಕಾಲದಿಂದ ಕತ್ತರಿಸಲು ಬಯಸುತ್ತಾರೆ. ಫುಲೆ, ಅಂಬೇಡ್ಕರ್ ಅವರಂತಹವರು ತಮ್ಮ ಇಡೀ ಜೀವನವನ್ನು ಒಂದು ಉದ್ದೇಶಕ್ಕಾಗಿ ಅರ್ಪಿಸಿದರು. ಅವರ ಇತಿಹಾಸವನ್ನು ಅಳಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ಹೊಂದಿರುವ ದಲಿತರು, ಹಿಂದುಳಿದವರು, ಆದಿವಾಸಿ ಗಳು, ಅಲ್ಪಸಂಖ್ಯಾತರ ಉಲ್ಲೇಖವನ್ನು ಕಾಣುವುದಿಲ್ಲ. ನಾವು ನಮ್ಮ ಇತಿಹಾಸವನ್ನು ಪುನರುಜ್ಜೀವನಗೊಳಿಸಬೇಕಿದೆ. ಜಾತಿ ಗಣತಿಯನ್ನು ತಡೆ ಹಿಡಿಯಲು ಪ್ರಯತ್ನಿಸಿದರೆ, ಅದು ಹೆಚ್ಚಿನ ಬಲದೊಂದಿಗೆ ಮರಳಿ ಬರಲಿದೆʼ ಎಂದು ಅವರು ಬಿಜೆಪಿಗೆ ಎಚ್ಚರಿಕೆ ನೀಡಿದರು.

ಪ್ರಶ್ನೆ ಕೇಳಲು ಆರಂಭಿಸಿದ್ದಾರೆ: ʻಬಿಜೆಪಿ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸುತ್ತಿದೆ. ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರು ಈಗ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ರಾಮ ಮಂದಿರವನ್ನು ನಿರ್ಮಿಸಲಾಗಿದೆ. ಆದರೆ, ಅಲ್ಲಿ ಯಾವುದೇ ಒಬಿಸಿ ಯನ್ನು ನೋಡಲಿಲ್ಲ. ಹೊಸ ಸಂಸತ್ತು ಉದ್ಘಾಟನೆಯಾಯಿತು. ಆದರೆ, ಅಲ್ಲಿ ನಮ್ಮಲ್ಲಿ ಯಾರೂ ಇರಲಿಲ್ಲ. ದೇಶದ ರಾಷ್ಟ್ರಪತಿ ಬುಡಕಟ್ಟು ಜನಾಂಗದವರು. ಅವರನ್ನು ರಾಮ ಮಂದಿರದ ಉದ್ಘಾಟನೆ ಅಥವಾ ಹೊಸ ಸಂಸತ್ತಿಗೆ ಆಹ್ವಾನಿಸಲಿಲ್ಲ,ʼ ಎಂದು ಹೇಳಿದರು.

ಸಾಂಸ್ಥಿಕ ಪ್ರಾತಿನಿಧ್ಯದ ಸಮೀಕ್ಷೆ:

ʻಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮೊದಲು ಜಾತಿ ಗಣತಿ ಮಾಡಲಿದೆ. ಜೊತೆಗೆ, ಕಾಲೇಜು, ಮಾಧ್ಯಮ ಮತ್ತು ನ್ಯಾಯಾಂಗದಲ್ಲಿ ಎಷ್ಟು ಎಸ್‌ಸಿ, ಎಸ್‌ಟಿ, ಒಬಿಸಿ ಇದ್ದಾರೆ ಎಂಬ ಸಾಂಸ್ಥಿಕ ಪ್ರಾತಿನಿಧ್ಯದ ಸಮೀಕ್ಷೆಯನ್ನೂ ನಡೆಸಲಿದೆ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇದು ಅತ್ಯಗತ್ಯವಾಗಿದ್ದು,ಇದಕ್ಕೆ ಯಾರೂ ಆಕ್ಷೇಪಿಸಬಾರದುʼ ಎಂದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ 102 ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಂಘಟನೆಗಳ ಪ್ರತಿನಿಧಿಗಳು ಲೋಕಸಭೆ ಚುನಾವಣೆಯಲ್ಲಿ ಇಂಡಿಯ ಒಕ್ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ವಾಗ್ದಾನ ಮಾಡಿದರು.

Read More
Next Story