ಬಿಜೆಪಿ 200ರ ಗಡಿ ದಾಟುವುದಿಲ್ಲ: ಪ್ರಶಾಂತ್ ಭೂಷಣ್ ಭವಿಷ್ಯ
x

ಬಿಜೆಪಿ 200ರ ಗಡಿ ದಾಟುವುದಿಲ್ಲ: ಪ್ರಶಾಂತ್ ಭೂಷಣ್ ಭವಿಷ್ಯ


ಕೋಲ್ಕತ್ತಾ: ಬಿಜೆಪಿ ವಿರುದ್ಧ ʻದೇಶದಾದ್ಯಂತ ಪ್ರತಿಕೂಲ ವಾತಾವರಣʼ ಇರುವುದರಿಂದ ಮತ್ತು ಹೆಚ್ಚಿನವರು ಆ ಪಕ್ಷ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಪರಿಗಣಿಸಿರುವುದರಿಂದ ಬಿಜೆಪಿ 200 ಸ್ಥಾನಗಳ ಗಡಿ ದಾಟುವುದಿಲ್ಲ ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಭವಿಷ್ಯ ನುಡಿದಿದ್ದಾರೆ.

ʻಎನ್‌ಡಿಎಯನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾದರೆ, ಪಕ್ಷ ಸಂಸತ್ತಿನಲ್ಲಿ ಇಂಡಿಯಾ ಒಕ್ಕೂಟವನ್ನು ಮುನ್ನಡೆಸಬೇಕು. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅಲ್ಲ,ʼ ಎಂದು ಭೂಷಣ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ʻಮಾಂಸ, ಮಂಗಳಸೂತ್ರ ಮತ್ತು ಎಮ್ಮೆಗಳು' ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ʻಚುನಾವಣೆ ತನ್ನ ಕೈತಪ್ಪಿ ಹೋಗುತ್ತಿದೆ ಎಂದು ಪ್ರಧಾನಿ ಅರಿತುಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಹತಾಶೆಯಿಂದ ಬೆಂಕಿ ಇಡುವ ಭಾಷಣಗಳನ್ನು ಮಾಡುತ್ತಿದ್ದಾರೆʼ ಎಂದು ಆರೋಪಿಸಿದ್ದಾರೆ.

ʻಹಲವು ಕಾರಣಗಳಿಗಾಗಿ ಬಿಜೆಪಿ ವಿರುದ್ಧ ಪ್ರತಿಕೂಲ ವಾತಾವರಣ ಇದೆ ಎಂದು ನಾನು ಭಾವಿಸುತ್ತೇನೆ. ಅವರು (ಬಿಜೆಪಿ) ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟುಮಾಡುತ್ತಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು, ವಿರೋಧ ಪಕ್ಷದ ನಾಯಕರನ್ನು ಸೆರೆಮನೆಗೆ ಕಳಿಸಲು ಮತ್ತು ಚುನಾವಣೆ ವೆಚ್ಚಕ್ಕೆ ಹಣ ಸಿಗದಂತೆ ನಿರ್ಬಂಧಿಸುತ್ತಾರೆ. ಬಿಜೆಪಿ ವಿರುದ್ಧ ಸಾಕಷ್ಟು ಕೋಪವಿದೆ,ʼ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸರ್ಕಾರೇತರ ಸಂಸ್ಥೆಗಳು ಮತ್ತು ಕಾರ್ಯಕರ್ತರ ಗುಂಪು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಭೂಷಣ್ ಅವರು ಇತ್ತೀಚೆಗೆ ಕೋಲ್ಕತ್ತಾಕ್ಕೆ ಭೇಟಿ ನೀಡಿದ್ದರು.

ʻಕೋಮು ಪ್ರಚಾರ ಕೂಡ ಬಿಜೆಪಿಯ ಜನಪ್ರಿಯತೆ ಕುಸಿತದ ಹಿಂದಿನ ಹಲವು ಕಾರಣಗಳಲ್ಲಿ ಒಂದು. ಜನರು ಇಂಥ ವಿಷಯಗಳನ್ನು ಇಷ್ಟಪಡುವುದಿಲ್ಲ. ಕೋಮುವಾದದ ಮೇಲೆ ದೇಶವನ್ನು ವಿಭಜಿಸುವ ಪ್ರಯತ್ನವಾಗಿ ನೋಡುತ್ತಾರೆ. ಇದರಿಂದ ದೇಶ ದುರ್ಬಲಗೊಳ್ಳುತ್ತದೆ. ಆದ್ದರಿಂದ, ಬಿಜೆಪಿಯ ಪುನರಾಗಮನ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆʼ ಎಂದು ಅವರು ಹೇಳಿದ್ದಾರೆ.

ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ

ʻದೇಶದಲ್ಲಿ ಪ್ರಧಾನಿಯಾಗುವ ಸಾಮರ್ಥ್ಯ ಯಾರಿಗೂ ಇಲ್ಲ. ಆದರೆ, ಮೋದಿ ಮಾತ್ರʼ ಎಂಬ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ,ʻಕಟ್ಟಾ ಬೆಂಬಲಿಗರು ಮಾತ್ರ ಮೋದಿಯವರನ್ನು ಪ್ರಧಾನಿಯ ಏಕೈಕ ಆಯ್ಕೆಯಾಗಿ ನೋಡುತ್ತಾರೆ. ಹೆಚ್ಚಿನವರು ಮೋದಿ ಮುಂದಿನ ಪ್ರಧಾನಿ ಎಂದು ಹೇಳುತ್ತಿಲ್ಲ,ʼಎಂದು ಹೇಳಿದ್ದಾರೆ.

ʻಮೋದಿ ಅವರು ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ನಿಮ್ಮ ಮಂಗಳಸೂತ್ರ ಮತ್ತು ಎಮ್ಮೆಗಳನ್ನು ತೆಗೆದುಕೊಂಡು ಹೋಗುತ್ತದೆ. ಕಾಂಗ್ರೆಸಿಗೆ ಅಂಬಾನಿ-ಅದಾನಿ ಕಪ್ಪು ಹಣ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇವು ಹತಾಶೆಯ ಟೀಕೆಗಳು. ಚುನಾವಣೆ ತಮ್ಮ ಕೈ ಜಾರುತ್ತಿದೆ ಎಂಬ ಆತಂಕದ ಮಾತುಗಳುʼ ಎಂದು ಹೇಳಿದ್ದಾರೆ.

ʻವಿರೋಧ ಪಕ್ಷಗಳ ಸರ್ಕಾರ ರಚನೆಯಾದರೆ, ತೃಣಮೂಲ ಕಾಂಗ್ರೆಸ್ ಖಂಡಿತವಾಗಿಯೂ ಅದರ ಭಾಗವಾಗಿರಬೇಕು. ಆದರೆ, ಮಮತಾ ಬ್ಯಾನರ್ಜಿ ಮುಖ್ಯಸ್ಥರಾಗುತ್ತಾರೆ ಎಂದು ನಾನು ಭಾವಿಸುವುದಿಲ್ಲʼ ಎಂದು ಭೂಷಣ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Read More
Next Story